Advertisement

ವಾಜಪೇಯಿ ಆದರ್ಶಯುತ ರಾಜಕಾರಣಿ

09:46 PM Dec 25, 2019 | Team Udayavani |

ಮೈಸೂರು: ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರು ಶ್ರೇಷ್ಠ, ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಆದರೆ ಇಂದು ರಾಜಕೀಯದಲ್ಲಿ ಮೌಲ್ಯಗಳಿಲ್ಲವಾಗಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ವಿಷಾದಿಸಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ, ಸಂಧ್ಯಾ ಸುರಕ್ಷಾ ಟ್ರಸ್ಟ್‌ ವತಿಯಿಂದ ಬುಧವಾರ ಏರ್ಪಡಿಸಿದ್ದ ವಾಜಪೇಯಿ ಅವರ 96ನೇ ಜನ್ಮದಿನಾಚರಣೆಯಲ್ಲಿ ಅಟಲ್‌ ಜೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

Advertisement

ಭೀತಿ ವಿಜೃಂಭಣೆ: ಇಂದಿನ ರಾಜಕಾರಣದಲ್ಲಿ ನಮ್ಮ ಕಣ್ಣು ಮುಂದೆಯೇ ಏನಾಗುತ್ತಿದೆ ಎಂಬುದು ಗೊತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಾಜಪೇಯಿ ಅವರ ಆದರ್ಶಗಳು, ಮೌಲ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ದೇಶದಲ್ಲಿ ಭೀತಿ ವಿಜೃಂಭಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಹಿರಿಯರಿಗೆ ಮಾತ್ರವಲ್ಲದೇ ಕಿರಿಯರಿಗೂ ಸುರಕ್ಷೆ ಅಗತ್ಯವಿದೆ ಎಂದು ಹೇಳಿದರು.

ಸಮಷ್ಠಿ ಪ್ರಜ್ಞೆ: ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ವಾಜಪೇಯಿಯವರು ಪಕ್ಷಾತೀತವಾಗಿ ದೇಶದಲ್ಲಿ ಮಾತ್ರವಲ್ಲದೇ, ಇಡೀ ವಿಶ್ವದಲ್ಲಿಯೇ ಗೌರವ ಪಡೆದ ಮುತ್ಸದ್ಧಿ ನಾಯಕರಾಗಿದ್ದರು. ಶ್ರೇಷ್ಠ ವಾಗ್ಮಿ, ಸಂಸದೀಯ ಪಟು ಹಾಗೂ ಕವಿಯಾಗಿದ್ದರು. ರಾಷ್ಟ್ರಪ್ರೇಮ, ಸಮಚಿತ್ತತೆ ಮತ್ತು ಸಮಷ್ಠಿ ಪ್ರಜ್ಞೆ ಅವರಲ್ಲಿತ್ತು ಎಂದರು.

ವಾಜಪೇಯಿ ಬಹಳ ದೊಡ್ಡ ದಾರ್ಶನಿಕರಾಗಿದ್ದರು. ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂಬುದನ್ನು ಪೋಖ್ರಾನ್‌ ಅಣುಸ್ಫೋಟ, ಪಾಕಿಸ್ತಾನಕ್ಕೆ ಬಸ್‌ ಸಂಚಾರ ಆರಂಭಿಸುವ ಮೂಲಕ ಸಾಬೀತು ಮಾಡಿದ್ದರು. ಅವರೊಬ್ಬ ಸಾಂಸ್ಕೃತಿಕ ವ್ಯಕ್ತಿತ್ವವುಳ್ಳವರಾಗಿದ್ದರು ಎಂದರು. ರಾಜ್ಯ ಚುಟಕು ಸಾಹಿತ್ಯ ಪರಿಷತ್‌ ಸಂಸ್ಥಾಪಕ ಡಾ.ಎಂ.ಜಿ.ಆರ್‌. ಅರಸು, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಟ್ರಸ್ಟಿ ಸುಶೀಲಾ ಮಾತನಾಡಿದರು. ಸಂಧ್ಯಾ ಸುರಕ್ಷಾ ಟ್ರಸ್ಟ್‌ ಹೊರತಂದಿರುವ ಕ್ಯಾಲೆಂಡರ್‌ ಅನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಬಿಡುಗಡೆ ಮಾಡಿದರು.

ಕವಿಗೋಷ್ಠಿ ಆಯೋಜನೆ: ಕವಿಯಾಗಿದ್ದ ವಾಜಪೇಯಿ ಅವರ ಜನ್ಮದಿನವನ್ನು ಕವಿಗೋಷ್ಠಿ ಆಯೋಜಿಸುವ ಮೂಲಕ ಆಚರಿಸಲಾಯಿತು. ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮ.ನ.ಲತಾ ಮೋಹನ್‌ ಅವರು ಸಂಘಟಿಸಿದ್ದ ಕವಿಗೋಷ್ಠಿಯಲ್ಲಿ ಕೆರೋಡಿ ಲೋಲಾಕ್ಷಿ, ರಂಗನಾಥ್‌ ಮೈಸೂರು, ಕೆ.ಟಿ.ಶ್ರೀಮತಿ, ಎಂ.ಬಿ.ಸಂತೋಷ್‌, ಸೌಗಂಧಿಕ ಜೋಯಿಸ್‌, ಕೆ.ವಿ.ವಾಸು, ತುಳಸಿ ವಿಜಯಕುಮಾರ್‌, ನಾರಾಯಣರಾವ್‌, ಯಶೋಧಾ ರಾಮಕೃಷ್ಣ, ಅನಂತ, ಯಮುನಾ, ವಿಜಯಕುಮಾರ್‌ ಅವರೇಕಾಡು, ಚಾಮಶೆಟ್ಟಿ ಇತರರು ಇದ್ದರು. ಎಂ.ಕೆ. ವಿದ್ಯಾರಣ್ಯ, ಎಂ.ಎಸ್‌.ಅನಂತಪ್ರಸಾದ್‌, ಹಿಮಾಲಯ ಫೌಂಡೇಷನ್‌ ಅಧ್ಯಕ್ಷ ಎನ್‌. ಅನಂತ ಇತರರಿದ್ದರು.

Advertisement

ವಾಜಪೇಯಿ ಅವರು ಮೈಸೂರಿಗೆ ಬಂದಿದ್ದಾಗ ಎರಡು ಬಾರಿ ರಾಮಕೃಷ್ಣ ಆಶ್ರಮದಿಂದ ಊಟ ತೆಗೆದುಕೊಂಡು ಹೋಗಿ ಬಡಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು.
-ಕೆ.ರಘುರಾಂ, ಸಮಾಜ ಸೇವಕ

Advertisement

Udayavani is now on Telegram. Click here to join our channel and stay updated with the latest news.

Next