Advertisement
ಡೋಗ್ರಾ ಮನೆತನದ ರಾಜಗುಲಾಬಾಸಿಂಹ ತಾವಿ ನದಿ ತೀರದಲ್ಲಿ ಕಟ್ಟಿಸಿದ ಬಹು ಕೋಟೆಯಲ್ಲಿರುವ ಕಾಳಿಮಾತೆಯ ದರ್ಶನ ಮಾಡಿ, ನವ ದೇವಿ ಗುಹೆ ಭೇಟಿ ಮಾಡಿದೆವು. ಸುಂದರ ಪರ್ವತಗಳ ನಡುವೆ, ಜುಳು ಜುಳು ಹರಿವ ತಂಪಾದ ನೀರಿನ ಜತೆ ಜತೆ ನಡೆದು, ತೆವಳಿ ಗುಹೆ ಪ್ರವೇಶಿಸಿದರೆ, ಅಲ್ಲಿ ದೇವಿಯ ಒಂಬತ್ತು ಪಿಂಡಿ (ತಲೆ ಆಕಾರದ ಶಿಲೆ)ಯ ಎದುರಲ್ಲಿ ಬೆನ್ನು ಬಾಗಿ, ಕಣ್ಮುಚ್ಚಿ ನಿಂತಿವೆ ಆ ಅನುಭವ ಮನ ಮೋಹಕವಾಗಿತ್ತು.
ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ತ್ರಿಕುಟ ಪರ್ವತದ ದೇವಿ ಮಂದಿರಕ್ಕೆ ಹಾರಿಕೊಂಡು ಬರುತ್ತಿರುವಾಗ ಹೃದಯ ಬಾಯಿಗೇ ಬಂದಿತ್ತು. ಜೈ ಮಾತಾದಿ ಎನ್ನುವ ನಿರಂತರ ಭಜನೆಯೊಂದಿಗೆ ಗುಹೆ ಪ್ರವೇಶ ಮಾಡಿ ಪವಿತ್ರವಾದ ಮೂರು ಪಿಂಡಿ (ಸರಸ್ವತಿ, ಲಕ್ಷ್ಮೀ, ಕಾಳಿ)ಗಳಿಗೆ ಮಾತ ಟೇಕಿಸಿ (ಹಣೆ ತಾಗಿಸಿ) ಹೊರ ಬಂದಾಗ ಏನೋ ಧನ್ಯತೆಯ ಅನುಭವ. ಎಲ್ಲೆಲ್ಲೂ ಫೋಟೋಗ್ರಫಿ ನಿಷಿದ್ಧ, ಹಾಗಾಗಿ ಫೋಟೋಗಳು ಕೇವಲ ಹೊರಗಿನ ದೃಶ್ಯಕ್ಕೆ ಸೀಮಿತವಾಯಿತು.
Related Articles
ಮಂಜು ಮುಸುಕಿ ಮರು ಪ್ರಯಾಣ ರ¨ªಾದಾಗ, ಹೃದಯ ಢವಗುಟ್ಟುತ್ತಿದ್ದರೂ, 14 ಕಿ.ಮೀ. ನಡೆದೇ ಇಳಿಯಲು ನಿಶ್ಚಯಿಸಿದೆವು. ಇದು ಮಾತ್ರ ನಮ್ಮ ಮುಂದೆ ಅಪೂರ್ವ ಲೋಕವನ್ನೇ ಅನಾವರಣಗೊಳಿಸಿತು. ಬರಿಗಾಲಲ್ಲಿ ನಡೆಯುವವರು, ಊರುಗೋಲಿನ ಆಸರೆಯಿಂದ ನಡೆಯುವ ವಯೋವೃದ್ಧರು, ಹಸುಗೂಸುಗಳನ್ನು ಎದೆಗೊತ್ತಿಕೊಂಡು ಸರಸರನೆ ಮೆಟ್ಟಿಲಿಳಿ ಯುವ ಎಳೆಯ ಅಮ್ಮಂದಿರು, ಭಿಕ್ಷೆ ಬೇಡುವ ಕುಲೀನ ಮನೆತನದ ಹೆಣ್ಣು ಮಕ್ಕಳು (ಇದೂ ಒಂದು ಹರಕೆಯಂತೆ) ಗುಂಪು ಗುಂಪಾಗಿ ಜೈಮಾತಾದಿ ಎನ್ನುತ್ತಾ ಸಾಗುವ ಅದಮ್ಯ ಉತ್ಸಾಹದ ಶಾಲಾ ಮಕ್ಕಳು, ಕುದುರೆಯ ಮೇಲೆ ಕುಳಿತು ಸಾಗುವ ಗಂಭೀರ ( ಭೀತ) ವದನೆಯರು, ಪಲ್ಲಕ್ಕಿ ಅಲಂಕರಿಸಿದ ಸ್ಥೂಲ ದೇಹಿಯರು, ಸಣ್ಣ ಮಕ್ಕಳನ್ನು, ಭಾರವಾದ ಬ್ಯಾಗ್ ಗಳನ್ನು ಹೊತ್ತು ಪಟಪಟನೆ ನಡೆಯುತ್ತಿರುವವರು, ಅಲ್ಲಲ್ಲಿ ಕೂತು ಫೋಟೋ ಸೆಷನ್ ನಡೆಸುವ ತರುಣ-ತರುಣಿಯರು, ದಾರಿಯುದ್ದಕ್ಕೂ ಕೇಳುವ ಭಕ್ತಿ ಗೀತೆಗಳು, ತರತರದ ತಿಂಡಿ ತಿನಿಸುಗಳು, ರಾಶಿ ರಾಶಿ ಅಕ್ರೂಟ್‌ಗಳು, ದಾರಿಬದಿಯಲ್ಲೆ ಇರುವ ಸಣ್ಣಸಣ್ಣ ಗುಡಿ ಗೋಪುರಗಳು ನಮಗಂತೂ ಎಲ್ಲವೂ ಚೋದ್ಯವೆ!
Advertisement
ಅರ್ಧಕುವರಿ ಮಂದಿರಬಂಡೆಗಳಿಂದ ಒಸರುವ ನೀರು ಕಾಲು ತೋಯಿಸಿದರೆ, ಸಾಮಾನ್ಯ ಜನರ ಭಕ್ತಿಯ ಪರಾಕಾಷ್ಠೆ ಕಂಡು ಮನ ಮೂಕವಾಯಿತು. ಜನರಿಗೆ ಬೆಟ್ಟ ಹತ್ತಲು ಸರಕಾರ ಎಲ್ಲ ಅನುಕೂಲ ಮಾಡಿಕೊಟ್ಟಿದೆ. ಹೊಸದಾದ ದಾರಿಯನ್ನೂ ನಿರ್ಮಿಸಿದೆ. ಅರ್ಧ ದಾರಿಯಲ್ಲಿ ಸಿಗುವ ಅರ್ಧಕುವರಿ ಮಂದಿರವೂ ಸೊಗಸಾಗಿದೆ. ಮಧ್ಯಾಹ್ನ 2 ಗಂಟೆಗೆ ಶುರುವಾದ ನಮ್ಮ ಅವರೋಹಣದ ಪಯಣ ರಾತ್ರಿ 8 ಗಂಟೆಗೆ ಮುಕ್ತಾಯವಾಯಿತು. ಮರುದಿನ ಜಮ್ಮುವಿನಲ್ಲಿರುವ 18ನೇ ಶತಮಾನದ, ಮಹಾರಾಜ ರಣಜಿತ್ ಸಿಂಹ ನಿರ್ಮಿಸಿದ ಭವ್ಯ ರಘುನಾಥ್ ಮಂದಿರದಲ್ಲಿನ ಶ್ರೀ ರಾಮನಿಗೆ ನಮಸ್ಕಾರ ಸಲ್ಲಿಸಿದೆವು. ರೂಟ್ ಮ್ಯಾಪ್
·ಮಂಗಳೂರಿನಿಂದ 2900 ಕಿ.ಮೀ. ಪ್ರಯಾಣ
· ಕಾಟ್ರಾದಿಂದ ವೈಷ್ಣೋದೇವಿಗೆ 17ಕಿ.ಮೀ.
· ಎಲ್ಲ ರೀತಿ ಆಹಾರ ದಾರಿಯುದ್ದಕ್ಕೂ ಲಭ್ಯ. ಶಾಂತಲಾ ರಾವ್, ಬೋಳಾರ