Advertisement

ವೈಕುಂಠ ಏಕಾದಶಿ ವ್ರತಾಚರಣೆ ಸರ್ವಶ್ರೇಷ್ಠ

01:51 PM Jan 13, 2022 | Team Udayavani |

ವಿಷ್ಣುವಿನ ಆರಾಧಕರಿಗೆ ಏಕಾದಶಿ ಅದರಲ್ಲೂ ವೈಕುಂಠ ಏಕಾದಶಿ ಅತ್ಯಂತ ಮಹತ್ವದ ದಿನ. ಈ ದಿನದಂದು ವೈಕುಂಠ ಅಂದರೆ ಸ್ವರ್ಗದ ಬಾಗಿಲು ತೆರೆಯುವ ದಿನ. ಈ ದಿನದಂದು ವ್ರತಸ್ಥರಾಗಿ ವಿಷ್ಣು ದೇವಾಲಯಕ್ಕೆ ತೆರಳಿ ಉತ್ತರ ದ್ವಾರದಿಂದ ಶ್ರೀಮನ್ನಾರಾಯಣನ ದರ್ಶನ ಪಡೆಯಬೇಕು. ಸಾಧನೆಗೆ ವ್ರತ, ನಿಯಮಗಳ ಆಚರಣೆಯೇ ಮಾರ್ಗ. ವೈಕುಂಠ ಏಕಾದಶಿಯಂದು ಉಪವಾಸ ವ್ರತಾಚರಣೆಗೈದು ವಿಷ್ಣುವಿನ ದರ್ಶನಗೈದರೆ ನಮ್ಮೆಲ್ಲ ಸಂಕಷ್ಟಗಳು ಪರಿಹಾರವಾಗಿ, ಆಯುರಾರೋಗ್ಯ, ಸುಖ ಸಮೃದ್ಧಿಗಳಿಂದ ಕೂಡಿದ ಜೀವನ ನಮ್ಮದಾಗುತ್ತದೆ ಮಾತ್ರವಲ್ಲದೆ ಮೋಕ್ಷವೂ ಪ್ರಾಪ್ತಿಯಾಗುತ್ತದೆ ಎಂಬುದು ಸಮಸ್ತ ಆಸ್ತಿಕ ಬಾಂಧವರ ನಂಬಿಕೆ.

Advertisement

ಹಿಂದೂಗಳಲ್ಲಿ ಅತ್ಯಂತ ಮುಗ್ಧ ಮತ್ತು ಸಾಮಾನ್ಯ ವ್ಯಕ್ತಿಯ ದೃಷ್ಟಿಯಲ್ಲಿ ಕೂಡ ಏಕಾದಶಿ ಮತ್ತು ಉಪವಾಸ ಎರಡು ಒಂದೇ ಅರ್ಥವುಳ್ಳ ಶಬ್ದಗಳು. ಆಧ್ಯಾತ್ಮಿಕ ಸಾಧನೆಯಲ್ಲಿ ಆದ ಪಾಪಗಳು, ಪ್ರಾಯಶ್ಚಿತ್ತಕ್ಕಾಗಿಯೂ ಅಥವಾ ಮನೋ ವೃತ್ತಿಗಳ ನಿಯಂತ್ರಣಗಳ ಮೂಲಕ ಆತ್ಮ ಸಂಯಮದ ಪ್ರಾಪ್ತಿಗಾಗಿಯೂ ನಿರಶನ ವ್ರತ ಸಹಕಾರಿ ಎನ್ನುವುದು ಹಿಂದೂಗಳ ಶ್ರದ್ಧೆಯಾಗಿದೆ. ನಿರಾಹಾರದಿಂದ ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಮನದ ನಿಯಮನ ಸುಲಭವಾಗುತ್ತದೆ. ಅಂತರಾತ್ಮದ ಕಡೆ ಅಭಿಮುಖವಾಗಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ.

ಧರ್ಮಶಾಸ್ತ್ರಗಳು ಹೇಳುವಂತೆ;ಅಶ್ವಮೇಧ ಸಹಸ್ರಾಣಿ, ವಾಜಪೇಯಾ ಯುತಾನಿಚ | ಏಕಾದಶೋ ಉಪವಾಸಸ್ಯ ಕಲಂ ನಾರಹಂತಿ ಷೋಡಶಿಃ|ಎಂದರೆ ಏಕಾದಶಿ ಉಪವಾಸವೆಂಬುದು ಅಶ್ವಮೇಧಯಾಗ ಹಾಗೂ ವಾಜಪೇಯ ಯಾಗಕ್ಕೆ ಸಮಾನವಾದದ್ದು.ಮಾನವನಿಂದ ಹನ್ನೊಂದು ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳಿಂದ ಆದ ಪಾಪವನ್ನು ಏಕಾದಶಿ ವ್ರತದಿಂದ ನಾಶಪಡಿಸಬಲ್ಲದು ಎಂದು ಶಾಸ್ತ್ರಗಳು ಪ್ರಮಾಣೀಕರಿಸಿದೆ.

ಏಕಾದಶೇಂದ್ರಿಯೇ ಪಾಪಂ ಯತ್ಕೃತಂ ಭವತಿ ಪ್ರಭೋ | ಏಕಾದಶಿ ಉಪವಾಸನ್‌ ತತ್‌ ಸರ್ವಂ ವಿಲೆಯಂ ವಜೇತ್‌ |
ಎಂದರೆ ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪಕಾರ್ಯಗಳಿಗೆ, ಪ್ರಾಯಶ್ಚಿತ್ತ ಆಗಬೇಕಾದರೆ “ಏಕಾದಶಿ ವ್ರತ’ ಮಾಡಬೇಕು. ಅದರಲ್ಲೂ ವೈಕುಂಠ ಏಕಾದಶಿ ಸರ್ವಶ್ರೇಷ್ಠವಾಗಿದೆ.

ಪ್ರತೀ ತಿಂಗಳಿಗೆ ಶುಕ್ಲಪಕ್ಷ, ಕೃಷ್ಣಪಕ್ಷದಲ್ಲಿ ತಲಾ ಒಂದೊಂದರಂತೆ ಎರಡು ಏಕಾದಶಿಗಳು ಬರುತ್ತವೆ. ಅಂದರೆ ವರ್ಷಕ್ಕೆ 24 ಏಕಾದಶಿಯಾಗುತ್ತದೆ. ಪ್ರತಿಯೊಂದೂ ಏಕಾದಶಿಯೂ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ ಮಾತ್ರವಲ್ಲದೆ ಪ್ರತೀ ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಈ ಎಲ್ಲ ಏಕಾದಶಿಗಳಲ್ಲಿ ವೈಕುಂಠ ಏಕಾದಶಿಗೆ ಮತ್ತು ಈ ದಿನದಂದು ಕೈಗೊಳ್ಳುವ ವ್ರತಾಚರಣೆ ಶ್ರೇಷ್ಠವಾದುದು ಎಂಬ ಉಲ್ಲೇಖಗಳು ಧರ್ಮ ಶಾಸ್ತ್ರಗಳಲ್ಲಿ ಸಾಕಷ್ಟು ಸಿಗುತ್ತವೆ.

Advertisement

ಪದ್ಮ ಪುರಾಣದಲ್ಲಿ ಬರುವ ಕಥೆಯೊಂದರಲ್ಲಿ ಉಲ್ಲೇಖಿಸಲಾಗುವಂತೆ ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ನೀಡುತ್ತಿದ್ದ. ಆಗ ವಿಷ್ಣುವೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನೆ. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ “ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರೀತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು “ಯಾರು ವೈಕುಂಠ ಏಕಾದಶಿ ದಿನದಂದು ವ್ರತವನ್ನು ಆಚರಿಸಿ ನಿನ್ನ ಸ್ಮರಣೆ ಮಾಡುತ್ತಾರೋ ಅವರಿಗೆಲ್ಲ ಮೋಕ್ಷವನ್ನು ಕರುಣಿಸು’ ಎಂದು ಬೇಡುತ್ತಾಳೆ. ಅದರಂತೆ ವಿಷ್ಣು ಆಕೆಗೆ ವರ ನೀಡುತ್ತಾನೆ.

ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ ಹಿಂದೆ ಒಬ್ಬ ರಕ್ಕಸಿಯ ಕಾಟದಿಂದ ಏಕಾದಶಿ ವ್ರತವನ್ನು ತ್ಯಜಿಸಿ, ಉಪವಾಸ ಆದಿ ವ್ರತಗಳನ್ನು ಮಾಡದೇ ವ್ರತಭ್ರಷ್ಟನಾದಂತಹ ತನ್ನ ಭಕ್ತ ರುಕಾ¾ಂಗಧನನ್ನು ವಿಷ್ಣುವು ಉದ್ಧರಿಸಿ ವೈಕುಂಠಕ್ಕೆ ಕರೆದೊಯ್ದ ದಿನ ಕೂಡ “ವೈಕುಂಠ ಏಕಾದಶಿ’ಯಾಗಿತ್ತು. ಹೀಗೆ ವೈಕುಂಠ ಏಕಾದಶಿಯಂದು ಯಾರು ಉಪವಾಸ ವ್ರತ ಕೈಗೊಳ್ಳುತ್ತಾರೋ ಅವರಿಗೆ ಭಗವಾನ್‌ ವಿಷ್ಣುವು ಜೀವನದುದ್ದಕ್ಕೂ ಸಂಪತ್ತು, ಸುಖಶಾಂತಿ, ನೆಮ್ಮದಿ, ಆಯುರಾರೋಗ್ಯ ಭಾಗ್ಯ ಮತ್ತು ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಭಕ್ತರದು.

ವ್ರತವನ್ನಾಚರಿಸುವ ರೀತಿ ಈ ಏಕಾದಶಿಯನ್ನು “ಮುಕ್ಕೋಟಿ ಏಕಾದಶಿ’, “ಮೋಕ್ಷ ಏಕಾದಶಿ’ ಎಂದೂ ಕರೆಯು ತ್ತಾರೆ. ಅಂದು ರಾಜಸ, ತಾಮಸ ಪದಾರ್ಥ ಗಳನ್ನು ಸ್ವೀಕರಿಸದೇ ಅಶಕ್ತರು, ರೋಗಿ ಗಳು, ಹಾಲು, ಹಣ್ಣು, ಸಾಬಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಉಪಯೋ ಗಿಸಬಹುದು. ಅನ್ನ ಸ್ವೀಕಾರ ನಿಷಿದ್ಧ. ಮದ್ಯ ಪಾನ, ಮಾಂಸಾಹಾರ ಸೇವನೆ ನಿಷಿದ್ಧ. ದೇಹದ ಆತ್ಮದ ನಿಗ್ರಹಕ್ಕಾಗಿ ಆ ದಿನ ಉಪ ವಾಸವಿದ್ದರೆ ತುಂಬಾ ಉತ್ತಮ ಎಂದು ನಮ್ಮ ಸಂಪ್ರದಾಯ ಹೇಳುತ್ತದೆ.

ಈ ದಿನದಂದು ಭಗವಾನ್‌ ವಿಷ್ಣುವಿಗೆ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ, ಮನೆಯಲ್ಲಿ ಘಂಟಾನಾದ (ಮನೆಯ ದೇವರಿಗೆ ಪೂಜೆ) ಮತ್ತು ವೈಕುಂಠ ದ್ವಾರದ ಮೂಲಕ (ಉತ್ತರದ್ವಾರದ) ಭಗವಂತನ ದರ್ಶನ ಮಾಡಬೇಕು. ವೈಕುಂಠ ಏಕಾದಶಿ ಆದಿ ಯಾಗಿ ಪ್ರತಿಯೊಂದೂ ಏಕಾದಶಿಯಂದು ನಾವು ಸೇವಿಸುವ ಆಹಾರ ಪದಾರ್ಥಗಳು ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್ , ಬೀಟ್‌ರೂಟ್‌ಗಳಿಂದ ಕೂಡಿರಬಾರದು. ಅನ್ನದಿಂದ ಮಾಡಿದ ಆಹಾರಗಳನ್ನು ಸ್ವೀಕರಿಸದೇ ಅವಲಕ್ಕಿ, ಸಾಬಕ್ಕಿಯಿಂದ ಮಾಡಿದ ಪದಾರ್ಥ ವನ್ನಷ್ಟೇ ಸ್ವೀಕರಿಸಬೇಕು. ಏಕಾದಶಿ ದಿನದಂದು ಹಣ್ಣು ಹಂಪಲು, ಹಾಲು ಮತ್ತು ನೀರನ್ನು ಮಾತ್ರ ಸೇವಿಸುವ ಆಚರಣೆ ಕೂಡ ಇದೆ. ಅಷ್ಟು ಮಾತ್ರವಲ್ಲದೆ ಕಠಿನ ವ್ರತಾಧಾರಿಗಳು ನೀರನ್ನೂ ಸೇವಿಸದೇ ಮರುದಿನ ಸೂರ್ಯೋದಯದ ಬಳಿಕವೇ ಆಹಾರ ಸೇವಿಸುತ್ತಾರೆ.

ದಕ್ಷಿಣ ಭಾರತದ ತಿರುಪತಿ, ತಮಿಳುನಾಡಿನ ರಂಗನಾಥ ದೇವಾಲಯದಲ್ಲಿ ವೈಕುಂಠ ಏಕಾದಶಿ ದಿನದಿಂದ 21 ದಿನಗಳ ವರೆಗೂ ವಿಶೇಷ ಪೂಜೆ ಇರುತ್ತದೆ. ಹಾಗೆಯೇ ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ಗೀತೆಯ ಭೋಧನೆ ಮಾಡಿದ ದಿನವು ಇದೇ ಆಗಿದೆ. ಅದಕ್ಕಾಗಿ ವೈಕುಂಠ ಏಕಾದಶಿಯಂದು ಗೀತಾಜಯಂತಿಯನ್ನು ಆಚರಿಸುತ್ತಾರೆ. ಅಂದು ಗೀತಾ ಪಾರಾಯಣವನ್ನು ಮಾಡಲಾಗುತ್ತದೆ.

ಉಪವಾಸ ವ್ರತಾಚರಣೆ ವೇಳೆ ದಿನವಿಡೀ ದೇವರ ಧ್ಯಾನವನ್ನು ಮಾಡಿದರೆ ನಮ್ಮ ಮನಸ್ಸಿನಲ್ಲಿನ ಕ್ಲೇಶ- ಕಲ್ಮಶಗಳೂ ದೂರವಾಗುತ್ತವೆ ಎಂಬುದು ಪ್ರತೀತಿ. ಉಪವಾಸ ನಮ್ಮ ಆರೋಗ್ಯ ವೃದ್ಧಿಗೆ ಸಹಕರಿಸಿದರೆ ಧ್ಯಾನ ಮನಸ್ಸನ್ನು ಹಗುರವಾಗಿಸಿ ಆಯುಷ್ಯವೃದ್ಧಿಗೆ ಕಾರಣವಾಗುತ್ತದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಇವೆಲ್ಲವುಗಳನ್ನು ನಂಬಿಕೆಯ ನೆಲೆ ಗಟ್ಟಿನಲ್ಲಿ ಆಚ ರಿಸಲಾಗುತ್ತಿತ್ತಾದರೂ ಇವೆಲ್ಲದರ ಹಿಂದಿನ ವೈಜ್ಞಾನಿಕ ಮಹತ್ವ ಅಗಾಧವಾದುದು. ಯಾವುದು ಅಪಥ್ಯ ಎಂದು ನಾವು ಈ ಎಲ್ಲ ಆಚರಣೆ, ನಂಬಿಕೆಗಳಿಂದ ಹಿಂದೆ ಸರಿದಿದ್ದೆವೋ ಈಗ ಇವೆಲ್ಲದರ ಮಹತ್ವ, ಅನಿವಾರ್ಯತೆ ಅರ್ಥವಾಗತೊಡಗಿದೆ.

ವೈಕುಂಠ ಏಕಾದಶಿಯಂಥ ಒಂದು ವಿಶಿಷ್ಟ ದಿನ ವನ್ನು ಸಾಂಪ್ರದಾಯಿಕವಾಗಿ ಆಚರಿಸೋಣ ಹಾಗೂ ಉತ್ತರದ್ವಾರದಿಂದ ವಿಷ್ಣುವಿನ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾಗಿ ಆಯುರಾರೋಗ್ಯ, ನೆಮ್ಮ ದಿಯ ಜೀವನವನ್ನು ನಮ್ಮದಾಗಿಸಿಕೊಳ್ಳೋಣ.

-ಪುಂಡಲೀಕ ಪೈ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next