ಚೆನ್ನೈ: ದೇಶದ್ರೋಹದ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಎಂಡಿಎಂಕೆ ಮುಖ್ಯಸ್ಥ ವೈಕೋಗೆ ತಮಿಳುನಾಡು ವಿಶೇಷ ನ್ಯಾಯಾಲಯ ಶುಕ್ರವಾರ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನೂ ನೀಡಿದೆ. 2009ರಲ್ಲಿ ಚೆನ್ನೈನಲ್ಲಿ ನಡೆದ ‘ನಾನ್ ಕುಟ್ರಂ ಸತ್ತುಗಿರೇನ್’ (ನಾನು ಆರೋಪ ಮಾಡು ತ್ತಿದ್ದೇನೆ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೈಕೋ ಎಲ್ಟಿಟಿಇ ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದರು. ಆ ಸಮಯ ದಲ್ಲಿ ಶ್ರೀಲಂಕಾ ಸರ್ಕಾರ ಮತ್ತು ಎಲ್ಟಿಟಿಇ ನಡುವೆ ಯುದ್ಧ ಉತ್ತುಂಗದಲ್ಲಿತ್ತು. ಹೀಗಾಗಿ ವೈಕೋ ವಿರುದ್ಧ ಚೆನ್ನೈ ಪೊಲೀಸರು ದೇಶದ್ರೋಹ ಕೇಸು ದಾಖಲಿಸಿದ್ದರು. ವಿಶೇಷ ಎಂದರೆ, ಜು.18ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ತಮಿಳುನಾಡಿನಿಂದ ವೈಕೋ ಅವರು ನಾಮ ನಿರ್ದೇಶನಗೊಂಡಿದ್ದಾರೆ. ಇವರಿಗೆ ಡಿಎಂಕೆ ಕೂಡ ಬೆಂಬಲ ಸೂಚಿಸಿದೆ. ಶನಿವಾರ ಅವರು ನಾಮಪತ್ರ ಸಲ್ಲಿಸುವವರಿದ್ದು, ಈಗ ಅವರಿಗೆ ಜೈಲು ಶಿಕ್ಷೆಯಾಗಿರುವ ಕಾರಣ, ಮುಂದೇನಾಗುತ್ತದೆ ಎಂಬ ಗೊಂದಲ ಮೂಡಿದೆ.