ಮಣಿಪಾಲ: ಮಹಿಳೆಯ ಅಂತರಾಳವನ್ನು ಸಾಹಿತಿ ವೈದೇಹಿ ಗ್ರಾಮ್ಯ ಭಾಷೆಯಲ್ಲಿ ಅರ್ಥ ಪೂರ್ಣವಾಗಿ ಅರ್ಥೈಸುವ ಕಾರ್ಯವನ್ನು ತಮ್ಮ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದು ಗಣಕ ಲಿಪಿತಜ್ಞ ಪ್ರೊ| ಕೆ.ಪಿ. ರಾವ್ ಹೇಳಿದರು.
ಮಾಹೆ ವಿ.ವಿ.ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಪಿಕಲ್ ಆರ್ಟ್ಸ್ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಮಣಿಪಾಲದ ಪ್ಲಾನಿ ಟೇರಿಯಂ ಸಭಾಂಗಣದಲ್ಲಿ ಹಮ್ಮಿಕೊಂಡಿರುವ “ವೈದೇಹಿ ಜಗತ್ತು’- ಕನ್ನಡದ ಖ್ಯಾತ ಲೇಖಕಿ ವೈದೇಹಿಯವರ ಸಾಹಿತ್ಯದ ಕುರಿತ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಡುಗೆ ಮನೆಯಲ್ಲಿ ಮಹಿಳಾ ಲೋಕ, ಹಿತ್ತಲಿನಲ್ಲಿ ಹರಟೆ ಮತ್ತು ಅಂಗಳದಲ್ಲಿ ಜೀವನ ಎಂಬ ಮೂರು ಸ್ತರಗಳ ಬದುಕಿನ “ಧ್ವನಿ ರೂಪ’ವನ್ನು ವೈದೇಹಿ ನಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಓದಲು ಮತ್ತು ಬರೆಯಲು ಬಾರದವರ ಜಗತ್ತನ್ನು ವೈದೇಹಿ ಸೆರೆಹಿಡಿದಿರುವುದೇ ಅವರ ವಿಶೇಷತೆ ಎಂದರು.
ವೈದೇಹಿ ಕನ್ನಡದಲ್ಲಿ ಸಾಮಾಜಿಕ ಕಾದಂಬರಿಗಳ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಕಥೆಗಳನ್ನು ತಮ್ಮದೇ ಆದ ಭಾಷೆಯಲ್ಲಿ ಬರೆಯುವ ಅವರದು ಹೃದಯದ ಧ್ವನಿಯೇ ವಿನಾ ನಾಲಿಗೆಯದಲ್ಲ ಎಂದು ವಿಶ್ಲೇಷಿಸಿದರು.
Related Articles
ಬದುಕಿನ ರೂಪಕ
ಉದ್ಘಾಟನೆಯ ಅನಂತರ ವಿಮ ರ್ಶಕ ಪ್ರೊ| ರಾಜೇಂದ್ರ ಚೆನ್ನಿಯವರು ವೈದೇಹಿ ಅವರ ಸಣ್ಣ ಕಥೆಗಳ ಕುರಿತು ಮಾತನಾಡಿ, ಅವರ ಸಾಹಿತ್ಯವು ಸಾಮಾನ್ಯ ಬದುಕಿನ ಶ್ರೇಷ್ಠ ರೂಪಕಗಳಾಗಿವೆ ಎಂದರು.
ಕವಿತೆ ಮಹಿಳೆಯರ ಭಾಷೆ
ವೈದೇಹಿ ಅವರ ಕವನಗಳ ಕುರಿತು ಆಶಾದೇವಿ ಮಾತನಾಡಿ, ಪುರುಷ ಪ್ರಧಾನ ಜಗತ್ತಿನಲ್ಲಿ ಯಾವುದೇ ಆಕ್ಷೇಪಣೆ ಪ್ರಮಾಣಪತ್ರವನ್ನು ಸ್ವೀಕರಿ ಸಲು ವೈದೇಹಿ ನಿರಾಕರಿಸುತ್ತಾರೆ. “ಕವಿತೆ ನಿರ್ದಿಷ್ಟವಾಗಿ ಮಹಿಳೆಯರ ಭಾಷೆ’ ಎಂದು ಅವರು ಭಾವಿಸಿ, ಬರೆದಿದ್ದಾರೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ| ವರದೇಶ್ ಹಿರೇಗಂಗೆ, ಪ್ರೊ| ಮನು ಚಕ್ರವರ್ತಿ, ಪ್ರೊ| ಫಣಿರಾಜ್, ಪ್ರೊ| ತುಂಗೇಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವೈದೇಹಿ ಅವರ ಸಣ್ಣ ಕಥೆಗಳು ಮತ್ತು ಕವನಗಳ ಕುರಿತು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಶ್ರಾವ್ಯಾ ಬಾಸ್ರಿ ವೈದೇಹಿ ಕವನ ವಾಚಿಸಿದರು. ಅಭಿನಯಾ, ಗೌತಮಿ, ಅಪೂರ್ವಾ, ಆಲಿಸ್ ಚೌವ್ಹಾಣ್, ಸುಹಾನಿ ರಜಪೂತ್ ಮತ್ತು ಆಕರ್ಷಿಕಾ ಸಿಂಗ್ ಕಾರ್ಯಕ್ರಮ ನಿರ್ವಹಿಸಿದರು.
ಇಂದಿನ ಕಾರ್ಯಕ್ರಮ
ಪ್ರೊ| ಎನ್. ಮನು ಚಕ್ರವರ್ತಿ ಅವರು ವೈದೇಹಿ ಅವರ ಕಾದಂಬರಿ – “ಅಸ್ಪೃಶ್ಯರು’ (ಇಂಗ್ಲಿಷ್‌ನಲ್ಲಿ “ವಾಸುದೇವಾಸ್ ಫ್ಯಾಮಿಲಿ’) ಕುರಿತು ನ. 12ರ ಬೆಳಗ್ಗೆ 10.15ಕ್ಕೆ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ “ಅಮ್ಮಚ್ಚಿ ಎಂಬ ನೆನಪು’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ, ಅನಂತರ ವೈದೇಹಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಮಾರೋಪದಲ್ಲಿ ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕೆಎಸ್‌ಡಿಎಸ್‌ಯುನ ವಿಶ್ರಾಂತ ಕುಲಪತಿ ಪ್ರೊ| ನೀಲಿಮಾ ಸಿನ್ಹಾ ಪಾಲ್ಗೊಳ್ಳಲಿದ್ದಾರೆ.