ವಾಡಿ: ಮಂಗ, ಕಾಡು ಹಂದಿ, ಹೆಗ್ಗಣ ಹೀಗೆ ಪ್ರಾಣಿಗಳು ಮತ್ತು ಕಾಳು ಕಡಿಯುವ ಕೀಟಗಳಿಂದ ಬಿತ್ತಿದ ಬೆಳೆ ರಕ್ಷಣೆ ಮಾಡುವುದು ಎಂದರೆ ರೈತರ ಪಾಲಿಗೆ ದೊಡ್ಡ ಸವಾಲೇ ಸರಿ. ಇಂತಹದ್ದರಲ್ಲಿ ಹರಕೆ ಗೂಳಿಗಳಿಂದ ಬೆಳೆ ರಕ್ಷಿಸುವುದೇ ಇನ್ನೊಂದು ಸವಾಲಾಗಿದ್ದು, ಇದರಿಂದ ನಾಲವಾರ ವಲಯದ ವಿವಿಧ ಗ್ರಾಮಗಳ ರೈತರು ಕಂಗೆಟ್ಟಿದ್ದಾರೆ.
Advertisement
ಸುಗೂರು (ಎನ್), ಮಾರಡಗಿ, ತುನ್ನೂರ, ಮಳಗ ಹೀಗೆ ಕೆಲ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲೀಗ ಹರಕೆ ಗೂಳಿಗಳ ಉಪಟಳ ಹೆಚ್ಚಾಗಿ ಕಂಡು ಬರುತ್ತಿದ್ದು, ಬೆಳೆ ರಕ್ಷಿಸಲು ರೈತರು ಹಗಲು ರಾತ್ರಿ ನಿದ್ದೆಗೆಟ್ಟು ಕಾವಲು ಕಾಯುವಂತಾಗಿದೆ. ಸಾಮೂಹಿಕವಾಗಿ ದಾಳಿಯಿಡುವ ಈ ಗೂಳಿಗಳ ಹಿಂಡು ಫಸಲನ್ನೇ ಕಿತ್ತು ಬೀಸಾಡುತ್ತಿವೆ. ಬೆಳೆಗಳ ಪೈರು ಕಿತ್ತು ಹೊಲ ನಾಶಗೊಳಿಸುತ್ತಿವೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
Related Articles
Advertisement
ಗೂಳಿಗಳಿಗೆ ಹೆದರಿ ನಾಲವಾರ, ಸುಗೂರು (ಎನ್), ಮಾರಡಗಿ ಗ್ರಾಮದ ರೈತರು ಜೋಳ ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಯಾವುದೇ ಬೆಳೆ ಬೆಳೆದರೂ ಹೊಲಕ್ಕೆ ತಂತಿ ಬೇಲಿ ಹಾಕುವುದು ಕಡ್ಡಾಯವಾಗಿದೆ. ರಾತ್ರಿ ಹಗಲು ಹೊಲದ ಸುತ್ತ ಗಸ್ತು ತಿರುಗದಿದ್ದರೆ ಗೂಳಿ ದಾಳಿಗೆ ಇಡೀ ಹೊಲ ಸರ್ವನಾಶ ಹೊಂದುವ ಆತಂಕ ರೈತರಲ್ಲಿ ಮನೆಮಾಡಿದೆ. ಬಿತ್ತನೆ ಮಾಡಿದ ದಿನದಿಂದ ರಾಶಿಯಾಗಿ ದವಸಧಾನ್ಯ ಮನೆ ಸೇರುವವರೆಗೂ ಗೂಳಿಗಳಿಂದ ಬೆಳೆ ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ರೈತರ ನೋವಿಗೆ ಕಾರಣವಾಗಿದೆ.