Advertisement

ಬೆಳೆಗಳಿಗೆ ಸಮರ್ಪಕ ನೀರು ಒದಗಿಸಿ: ಭಗವಾನರೆಡ್ಡಿ

05:12 PM May 23, 2019 | Naveen |

ವಾಡಿ: ತಾವು ರೈತಪರ ಎಂದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ತಕ್ಷಣ ಸಾಲಮನ್ನಾ ವಿಷಯ ಮುನ್ನೆಲೆಗೆ ತರುತ್ತವೆ. ರೈತನ ಜಮೀನಿನನಲ್ಲಿರುವ ಬೆಳೆ ಸಾಲುಗಳಿಗೆ ನೀರು ಖಾತ್ರಿಪಡಿಸುವ ಜತೆಗೆ ಉತ್ತಮ ಬೆಲೆ ನಿಗದಿ ಮಾಡಿದರೆ ಸಾಲ ಮನ್ನಾ ಕೂಗು ಏಳುವುದಿಲ್ಲ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್‌) ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಹೇಳಿದರು.

Advertisement

ಹಳಕರ್ಟಿ ಗ್ರಾಮದಲ್ಲಿ ಆರ್‌ಕೆಎಸ್‌ ರೈತ ಸಂಘಟನೆ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಥಮ ರೈತ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

ರೈತರ ಆತ್ಮಹತ್ಯೆ ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಸಾಲ ಮನ್ನಾ ಪರಿಹಾರವಲ್ಲ. ಸರಕಾರಗಳಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿಯಿದ್ದರೆ ಕೃಷಿ ಕ್ಷೇತ್ರ ಪ್ರಗತಿಗೆ ಬದ್ಧವಾಗಿದ್ದರೆ ಸಮಗ್ರ ಕೃಷಿ ನೀತಿ ಜಾರಿಗೊಳಿಸಬೇಕು. ರೈತರ ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸಲು ಒಣಬೇಸಾಯ ಪದ್ಧತಿ ಕೊನೆಗಾಣಬೇಕು. ಪ್ರತಿಯೊಬ್ಬ ಬಡ ರೈತನ ಜಮೀನಿಗೆ ನೀರಿನ ಕಾವಲಿ ಹರಿಯುವಂತಾಗಬೇಕು. ವೈಜ್ಞಾನಿಕ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಳೆದ ಬೆಳೆಗೆ ಸರಕಾರ ಉತ್ತಮ ದರ ನಿಗದಿಪಡಿಸಿ ಖರೀದಿಸಬೇಕು. ಅಂದಾಗ ಮಾತ್ರ ರೈತ ಚೇತರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಜಾಗತೀಕರಣ ನೀತಿಗಳಿಂದ ಕೃಷಿ ಕ್ಷೇತ್ರ ತತ್ತರಿಸಿ ಹೋಗಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳ ಕಪಿಮುಷ್ಠಿಗೆ ಸಿಲುಕಿ ಗ್ರಾಮೀಣ ರೈತರು ಆರ್ಥಿಕ ದಿವಾಳಿತನಕ್ಕೆ ಬಲಿಯಾಗುತ್ತಿದ್ದಾರೆ. ವಿದೇಶಗಳಿಂದ ಬರುವ ದುಬಾರಿ ಬೀಜ, ರಸಗೊಬ್ಬರ, ಕೀಟನಾಶಕ ಔಷಧಗಳಿಂದ ಉತ್ತಮ ಫಸಲು ಕೈ ಸೇರುತ್ತಿಲ್ಲ. ಬೆಳೆ ವಿಮೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಕೃಷಿ ಮಾರುಕಟ್ಟೆ ಬಲಪಡಿಸಬೇಕು. ಹಸಿ ಬರ ಮತ್ತು ಒಣ ಬರದಿಂದ ಬೇಸತ್ತ ರೈತರ ಮೇಲೆ ನೂರಾರು ರೈತ ವಿರೋಧಿ ನೀತಿಗಳನ್ನು ಹೇರಿ ಗಾಯಕ್ಕೆ ಮತ್ತಷ್ಟು ಬರೆ ಹಾಕಲಾಗುತ್ತಿದೆ. ಈ ಕಾರಣಕ್ಕೆ ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಷಾಧಿಸಿದರು.

ಜಿಲ್ಲಾ ರೈತ ಮುಖಂಡ ಮಹೇಶ ಎಸ್‌.ಬಿ.ಮಾತನಾಡಿ, ಸಂಘಟಿತ ಹೋರಾಟದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರವಿದೆ. ಕಲಬುರಗಿ ಜಿಲ್ಲೆಯಲ್ಲಿ ನೀರಾವರಿ ಬೇಡಿಕೆ ಹೆಚ್ಚಿದೆ. ಚಿತ್ತಾಪುರ ತಾಲೂಕಿನ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸರಕಾರಗಳ ಗಮನ ಸೆಳೆಯಲು ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.

ಮುಖಂಡರಾದ ರಾಘವೇಂದ್ರ ಅಲ್ಲಿಪುರ, ಮಲ್ಲಣ್ಣ ದಂಡಬಾ, ಗುಂಡಣ್ಣ ಕುಂಬಾರ ಇದ್ದರು.

Advertisement

ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್‌) ಚಿತ್ತಾಪುರ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ರಾಘವೇಂದ್ರ ಅಲ್ಲಿಪುರ (ಅಧ್ಯಕ್ಷ), ಗುಂಡಣ್ಣ ಕುಂಬಾರ, ಎಂ.ಸಿದ್ಧರಾಜ, ಮಲ್ಲಿಕಾರ್ಜುನ ಗಂದಿ (ಉಪಾಧ್ಯಕ್ಷರು), ಮಲ್ಲಣ್ಣ ದಂಡಬಾ (ಕಾರ್ಯದರ್ಶಿ), ವಿಠ್ಠಲ ರಾಠೊಡ (ಜಂಟಿ ಕಾರ್ಯದರ್ಶಿ) ಹಾಗೂ ದೊಡ್ಡಪ್ಪ ಹೊಸೂರ, ಅಯ್ಯಪ್ಪ ಉಳಗೋಳ, ನಾಗಪ್ಪ ಇಸಬಾ, ಭೀಮಪ್ಪ ಮೋಟ್ನಳ್ಳಿ, ಈರಪ್ಪ ಜೈನಾಪುರ, ಭೀಮರಾಯ ಇಸಬಾ, ಮನೋಜ ಕೋಟಗಿ, ಚೌಡಪ್ಪ ಗಂಜಿ, ಈರಣ್ಣ ಲೋಕನಳ್ಳಿ, ನಾಗರಾಜ ಇಸಬಾ, ಕಾಂತಪ್ಪ ನಾಲಡಗಿ, ಬಸಪ್ಪ ನಾಲವಾರ, ಸಾಯಬಣ್ಣ ಛತ್ರಿ, ಆಕಾಶ ಛತ್ರಕಿ, ಮಹೆಬೂಬಸಾಬ ಮೋಮಿನ್‌, ನಜೀರ್‌ ಅಹ್ಮದ್‌, ಮಲ್ಲಿಕಾರ್ಜುನ ಕೋಲಕುಂದಿ, ಶಿವಯೋಗಿ ಬುಳ್ಳಾ, ಶಿವಪ್ಪ ಛತ್ರಿ, ಶರಣಬಸಪ್ಪ ಇಸಬಾ, ಶರಣಪ್ಪ ಜೈನಾಪುರ, ಈರಪ್ಪ ಹಿಟ್ಟಿನ್‌, ರಮೇಶ ಭಟ್ಟ, ನಿಂಗಪ್ಪ ಹಿಟ್ಟಿನ ಸದಸ್ಯರಾಗಿ ಆಯ್ಕೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next