ವಾಡಿ: ನಿರ್ವಹಣೆ ಕೊರತೆಯಿಂದ ಕಸದ ತೊಟ್ಟಿಯಂತಾಗಿದ್ದ ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಮೂಲಕ ಸಂತ ನಿರಂಕಾರಿ ಬಾಬಾ ಸೇವಕರು ಆದರ್ಶ ಮೆರೆದಿದ್ದಾರೆ.
ಎಲ್ಲೆಂದರಲ್ಲಿ ಹರಡಿಕೊಂಡಿದ್ದ ಔಷಧ-ಮಾತ್ರೆಗಳ ಪೊಟ್ಟಣ, ಇಂಜೆಕ್ಷನ್, ಸಿರಿಂಜ್, ಕಸ, ಧೂಳು ತೆರವು ಮಾಡಿದ ಸೇವಕರು, ನೀರಿಲ್ಲದೆ ಮಲಮೂತ್ರಗಳಿಂದ ಗಬ್ಬು ನಾರುತ್ತಿದ್ದ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸೇವಾ ಮನೋಭಾವ ಪ್ರದರ್ಶಿಸಿದರು.
ಸಂತ ನಿರಂಕಾರಿ ಬಾಬಾ ಹರದೇವಸಿಂಗ್ ಅವರ 66ನೇ ಜನ್ಮದಿನದ ಅಂಗವಾಗಿ ರವಿವಾರ ಬೆಳಗ್ಗೆ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ 52 ಜನರಿರುವ ನಿರಂಕಾರಿ ಬಾಬಾ ಸೇವಕರ ತಂಡ ಶುಚಿತ್ವ ಕಾರ್ಯಕ್ಕೆ ಮುಂದಾಯಿತು. ಆಸ್ಪತ್ರೆಯ ಭವ್ಯ ಕಟ್ಟಡದ ಒಳಾಂಗಣ, ಹೊರಾಂಗಣವನ್ನು ತೊಳೆದು ಥಳಥಳ ಹೊಳೆಯುವಂತೆ ಮಾಡಿದರು. ಕಟ್ಟಡದ ಸುತ್ತಲೂ ಬೆಳೆದು ನಿಂತಿದ್ದ ಮುಳ್ಳುಕಂಟಿ ಗಿಡಗಳನ್ನು ಕತ್ತರಿಸಿದರು. ಶವ ಸಂಸ್ಕಾರದ ಸುತ್ತಲೂ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿದರು. ನೀರಿನ ಸೌಕರ್ಯವಿಲ್ಲದೇ ಹದಗೆಟ್ಟಿದ್ದ ಒಳ ಮತ್ತು ಹೊರ ರೋಗಿಗಳ ಶೌಚಾಲಯಗಳ ದುಸ್ಥಿತಿಗೆ ಮರುಗಿದ ಸೇವಕರು, ಕಿಂಚಿತ್ತೂ ಹೇಸಿಕೊಳ್ಳದೆ ಆಸ್ಪತ್ರೆಯ ಸಿಬ್ಬಂದಿಗಳನ್ನು ದೂರದೇ ಪಿನಾಯಿಲ್ ಹಾಕಿ ಶುಚಿಗೊಳಿಸಿದರು.
ಹೆರಿಗೆ ಕೋಣೆಯೊಳಗಿನ ನೆಲ ಹಾಸಿಗೆಯನ್ನು ರಾಸಾಯನಿಕ ತೈಲ ಸಿಂಪರಣೆಯಿಂದ ಸ್ವಚ್ಛಗೊಳಿದರು. ಹೀಗೆ ಸುಮಾರು ಎರಡು ತಾಸು ಸಮಯದಲ್ಲಿ ಇಡೀ ಆಸ್ಪತ್ರೆ ಹೊಳೆಯುವಂತೆ ಮಾಡುವ ಮೂಲಕ ವೈದ್ಯಾಧಿ ಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ನಿರಂಕಾರಿ ಸೇವಕರ ನಿಸ್ವಾರ್ಥ ಸೇವೆಗೆ ಆಸ್ಪತ್ರೆಯ ಡಾ| ಜುನೈದ್ ಖಾನ್ ಶ್ಲಾಘನೆ ವ್ಯಕ್ತಪಡಿಸಿದರು.
ಸಂತ ನಿರಂಕಾರಿ ಸೇವಾ ಕೇಂದ್ರದ ಸಂಯೋಜಕ ಶಿವರಾಮ ಪವಾರ, ನಗರ ಸಂಚಾಲಕ ಪ್ರಕಾಶ ಪವಾರ, ಚಿತ್ತಾಪುರ ಸಂಚಾಲಕ ವೇಣುಗೋಪಾಲ ಜಾಧವ, ರೂಪಸಿಂಗ್ ರಾಠೊಡ, ತುಳಸಿರಾಮ ರಾಠೊಡ, ಗೋವಿಂದ ಚವ್ಹಾಣ ಹಾಗೂ ಯುವಕರು, ಯುವತಿಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಸೇವಾಲಾಲ ನಗರದ ಸೇವಾಲಾಲ ಭವನ ಆವರಣ ಶುಚಿಗೊಳಿಸಲಾಯಿತು.