Advertisement

ಕುಸಿಯುತ್ತಿದೆ ವಡೇರಹೋಬಳಿ ರಸ್ತೆ ಸಂಪರ್ಕ 

08:07 PM Nov 25, 2021 | Team Udayavani |

ಕುಂದಾಪುರ:  ಇಲ್ಲಿನ  ಪುರಸಭೆ ವ್ಯಾಪ್ತಿಯ ವಡೇರಹೋಬಳಿಯಲ್ಲಿ ರಸ್ತೆ ಸಂಪರ್ಕ  ಕುಸಿಯಲು ಆರಂಭಿಸಿದೆ. ಅಲ್ಲೇ ಪಕ್ಕದಲ್ಲಿ ಚರಂಡಿಯಲ್ಲೇ ವಿದ್ಯುತ್‌ ಕಂಬಗಳನ್ನು ನೆಡಲಾಗಿದೆ. ಪರಿಣಾಮ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯಲ್ಲಿ ಹರಿಯುತ್ತದೆ.

Advertisement

ಚರಂಡಿಯಲ್ಲಿ  ವಿದ್ಯುತ್‌ ಕಂಬಗಳು:

ಭಂಡಾರ್‌ಕಾರ್ಸ್‌ ಕಾಲೇಜಿನ ಸಮೀಪದಿಂದ ಹಾದುಹೋಗಿ, ಕುಂದೇಶ್ವರ ದೇವಾಲಯದ ಹಿಂದಿನ ರಸ್ತೆ ಮೂಲಕ ವ್ಯಾಸರಾಜ ಮಠ, ಎಲ್‌ಐಸಿ ರಸ್ತೆಯನ್ನು ಸಂಪರ್ಕಿಸಬಹುದು. ಅಂತೆಯೇ ವಡೇರಹೋಬಳಿ ಶಾಲೆ, ಬಿಎಸ್‌ಎನ್‌ಎಲ್‌

ಮೂಲಕವೂ ನೆಹರೂ ಮೈದಾನ ಬಳಿಗೂ ಬರಬಹುದು. ಈ ರಸ್ತೆ ಪಕ್ಕದಲ್ಲಿ  ಹಾದು ಹೋದ ಚರಂಡಿಯಲ್ಲಿ ವಿದ್ಯುತ್‌ ಕಂಬಗಳನ್ನು ನೆಡಲಾಗಿದೆ. ಒಂದು ಕಡೆಯಿಂದ ಹಾಸ್ಟೆಲ್‌, ಪಿಜಿ ಇತ್ಯಾದಿಗಳ ನೀರು ಈ ಚರಂಡಿ ಮೂಲಕ ಬರುತ್ತದೆ. ಮತ್ತೂಂದು ಕಡೆಯಿಂದ ಹೊಟೇಲ್‌ನ ಸಂಸ್ಕರಿತ ನೀರು ಇದೇ ಚರಂಡಿಯಲ್ಲಿ   ಹರಿಯುತ್ತದೆ. ಈ ವಿದ್ಯುತ್‌ ಕಂಬಗಳಿಗೆ  ಕಾಂಕ್ರಿಟ್‌ ಸ್ಲಾéಬ್‌ ಅಳವಡಿಸಲಾಗಿದೆ. ಹಾಗಾಗಿ ಚರಂಡಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ ಚರಂಡಿ ಸ್ಲಾéಬ್‌ನ ಮೇಲೆಯೇ ಹರಿಯುತ್ತದೆ. ಈ ಕಂಬಗಳನ್ನು ಸ್ಥಳಾಂತರಿಸಲು ಸ್ಥಳೀಯರು  ಹಲವು ಬಾರಿ ಮಾಡಿದ ಮನವಿ ನಿರರ್ಥಕವಾಗಿದೆ.

ಕುಸಿದ ಸ್ಲ್ಯಾಬ್‌:

Advertisement

ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆಗಳಷ್ಟೇ ಓಡಾಟಕ್ಕೆ ಮುಕ್ತವಾಗಿದ್ದು ಒಂದು ಸರ್ವಿಸ್‌  ರಸ್ತೆಯಿಂದ ಇನ್ನೊಂದು ರಸ್ತೆಗೆ ಫ್ಲೈ ಒವರ್‌ ಹಾಗೂ ಅಂಡರ್‌ಪಾಸ್‌ ಮೂಲಕವೇ ಬರಬೇಕಾಗುತ್ತದೆ. ಇದರಿಂದಾಗಿ ಎಲ್‌ಐಸಿ  ರಸ್ತೆ, ಲೋಕೋಪಯೋಗಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಡೇರಹೋಬಳಿ ರಸ್ತೆ, ವ್ಯಾಸರಾಜ ಮಠ ಮೊದಲಾದೆಡೆಗೆ ಬರುವವರು ಶಾಸ್ತ್ರಿ  ಸರ್ಕ್‌ಲ್‌ನಿಂದ ಫ್ಲೈಒವರ್‌ ಅಡಿಯಲ್ಲಿ ಸಾಗಿ ಬಸ್ರೂರು ಮೂರು ಕೈ ತಲುಪಿ ಅಂಡರ್‌ಪಾಸ್‌ ಮೂಲಕ ಇನ್ನೊಂದು ಬದಿಯ ಸರ್ವಿಸ್‌ ರಸ್ತೆಗೆ ಬಂದು ಬೊಬ್ಬರ್ಯನಕಟ್ಟೆ ತಲುಪಬೇಕಾಗುತ್ತದೆ. ಕೊಂಕಣ ಸುತ್ತಿ ಮೈಲಾರ ಬರುವ ವ್ಯವಸ್ಥೆ ಬೇಡ ಎಂದು ಅನೇಕರು ಈಗ ಸುತ್ತುಬಳಸುವ ದಾರಿ ಬದಲು ಭಂಡಾರ್‌ಕಾರ್ಸ್‌ ಕಾಲೇಜು ಸಮೀಪದ ರಸ್ತೆ ಮೂಲಕ ಕಾಲೇಜಿನ ಹಿಂದಿನಿಂದಾಗಿ ವ್ಯಾಸರಾಜ ಮಠದ ರಸ್ತೆ ಮೂಲಕ ಎಲ್‌ಐಸಿ ರಸ್ತೆ ತಲುಪುತ್ತಿದ್ದಾರೆ. ಅಥವಾ ವಡೇರಹೋಬಳಿ ಶಾಲೆ ಬಳಿಯ ರಸ್ತೆಯಿಂದಾಗಿ ತೆರಳುತ್ತಾರೆ.  ಹೀಗೆ ಹೋಗುವಲ್ಲಿ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಸರಾಜ ಮಠದ ಮೂಲಕ ಸಾಗುತ್ತದೆ. ಅಲ್ಲಿ ಚರಂಡಿಗೆ ಹಾಕಿದ ಸ್ಲ್ಯಾಬ್‌ ಕುಸಿದಿದೆ. ಪಕ್ಕನೆ ನೋಡುವಾಗ ರಸ್ತೆಯೇ ಕುಸಿದಂತಿದೆ. ಸಣ್ಣಪುಟ್ಟ ವಾಹನಗಳು, ಕಾರು ಈ ರಸ್ತೆ ಮೂಲಕ ಹೋಗುವಾಗ  ಅದರ ಅಡಿಭಾಗ ರಸ್ತೆಗೆ ತಾಗುತ್ತದೆ. ಇದರಿಂದ ನಿಯಂತ್ರಣ ತಪ್ಪುತ್ತದೆ. ಈ ಕುರಿತು ಪುರಸಭೆ ಗಮನ ಹರಿಸಿದಂತಿಲ್ಲ. ಇಲ್ಲಿ ವಾಹನಗಳ ಓಡಾಟ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದ್ದರಿಂದ ದುರಸ್ತಿ ಅನಿವಾರ್ಯವಾಗಿದೆ.

ಚರಂಡಿಯಲ್ಲಿಯೇ ವಿದ್ಯುತ್‌ ಕಂಬ  ಇರುವುದು, ರಸ್ತೆ ಕುಸಿತಕ್ಕೊಳ ಗಾಗಿರುವುದು ತಿಳಿದುಬಂದಿದ್ದು ಪುರಸಭೆ ಗಮನಕ್ಕೆ ತರಲಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.-ರೋಹಿಣಿ ಉದಯ ಕುಮಾರ್‌, ಸದಸ್ಯರು, ಪುರಸಭೆ

ವಡೇರಹೋಬಳಿ ಬಳಿ ರಸ್ತೆ  ಕುಸಿತ ಹಾಗೂ ವಿದ್ಯುತ್‌ ಕಂಬ ಚರಂಡಿಯಲ್ಲಿ ಇರುವ  ಕುರಿತು ಎಂಜಿನಿಯರ್‌ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ಸರಿಪಡಿಸಲಾಗುವುದು.-ವೀಣಾ ಭಾಸ್ಕರ ಮೆಂಡನ್‌,ಅಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next