Advertisement

ಹುಲ್ಲು ಕಟಾವಿಗಾಗಿ ಯಂತ್ರ ಹಿಡಿದ ವಡಭಾಂಡೇಶ್ವರ ವಾರ್ಡ್‌ ಸದಸ್ಯ

11:13 PM Nov 13, 2019 | Sriram |

ಮಲ್ಪೆ: ಜನಪ್ರತಿನಿಧಿಗಳು ಅಂದ್ರೆ ಹೇಗಿರಬೇಕು ಎಂಬುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ. ನಗರಸಭೆ ಸದಸ್ಯರೊಬ್ಬರು, ಆಡಳಿತ ವ್ಯವಸ್ಥೆಯಲ್ಲಿ ಸೂಕ್ತ ಸಮಯದಲ್ಲಿ ಕಾರ್ಮಿಕರು ಸಿಗದಿದ್ದಾಗ ಅವರನ್ನು ಕಾಯದೇ ಜನರ ಹಿತದೃಷ್ಟಿಯಿಂದ ಹುಲ್ಲು ಕತ್ತರಿಸುವ ಯಂತ್ರವನ್ನು ಹಿಡಿದು ವಾರ್ಡ್‌ನ ಸುತ್ತಮುತ್ತ ತಾವೇ ಖುದ್ದಾಗಿ ಹುಲ್ಲು ಕತ್ತರಿಸುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ವಡಭಾಂಡೇಶ್ವರ ವಾರ್ಡ್‌ನ ಸದಸ್ಯ ಯೋಗೀಶ್‌ ಸಾಲ್ಯಾನ್‌ ವಾರ್ಡ್‌ನ ನಿವಾಸಿಗಳ ಮೆಚ್ಚುಗೆ ಪಡೆದವರು. ನಗರಸಭೆಯ ವತಿಯಿಂದ ಪೌರ ಕಾರ್ಮಿಕರಿಂದ ನಡೆಯಬೇಕಾಗಿದ್ದ ವಾರ್ಡ್‌ನ ಎಲ್ಲ ರಸ್ತೆಗಳ ಕೆಲಸವನ್ನು ತನ್ನ ಬಿಡುವಿನ ಸಮಯದಲ್ಲಿ ಇದೀಗ ತಾವೇ ನಿರ್ವಹಿಸುತ್ತಿದ್ದಾರೆ.

ವಾರ್ಡ್‌ನ ಕೆಲವೊಂದು ಭಾಗದಲ್ಲಿ ಆಳೆತ್ತರಕ್ಕೆ ಹುಲ್ಲುಗಳು ಬೆಳೆದಿವೆ. ಇದು ವಾಹನ ಸವಾರರಿಗೆ ಮುಂದೆ ಬರುವ ವಾಹನಗಳು ಕಾಣಿಸದೆ ಎಷ್ಟೋ ಸಲ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಬಗ್ಗೆ ದಿನನಿತ್ಯ ನಾಗರಿಕರು ವಾರ್ಡ್‌ ಸದಸ್ಯ ಯೋಗೀಶ್‌ ಅವರಲ್ಲಿ ದೂರು ನೀಡುತ್ತಿದ್ದರು. ಆದರೆ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರಕ್ಕೆ ಒಂದು (ಸೋಮವಾರ) ದಿನ ಮಾತ್ರ ಕಾರ್ಯ ನಡೆಯುತ್ತಿತ್ತು. ಅದು ಕೆಲವೇ ಗಂಟೆಗಳು ಮಾತ್ರವಾಗಿತ್ತು.

ಮಲ್ಪೆ ಮೀನುಗಾರಿಕೆಗೆ ಬಂದರಿನಲ್ಲಿ ಮೀನು ವ್ಯಾಪಾರದ ವೃತ್ತಿಯನ್ನು ನಡೆಸುತ್ತಿರುವ ಅವರು ಮುಂಜಾನೆ 4 ರಿಂದ ಪೂರ್ವಾಹ್ನ 11ರವರೆಗೆ ಬಂದರಿನಲ್ಲಿ ಕೆಲಸ ಮಾಡುತ್ತಾರೆ. ಆನಂತರ ತನ್ನ ವಾರ್ಡ್‌ಗೆ ಬಂದು ಸಂಜೆ 3ಗಂಟೆಯ ವರೆಗೆ ಕಟಾವು ಯಂತ್ರ ಹಿಡಿದು ರಸ್ತೆ ಬದಿಯ ಹುಲ್ಲು ಕಟಾವಿನಲ್ಲಿ ನಿರತರಾಗುತ್ತಾರೆ.

ಹೊಸ ಕಟಾವು ಯಂತ್ರ ಖರೀದಿ
ಈ ಕೆಲಸಕ್ಕಾಗಿ ಕೃಷಿ ಇಲಾಖೆಯಲ್ಲಿ 30 ಸಾವಿರ ರೂಪಾಯಿ ಬೆಲೆಯ ಹೊಸ ಕಟಾವು ಯಂತ್ರವನ್ನು ಖರೀದಿಸಿದ್ದಾರೆ. ತನಗೆ ಬೇಕಾಗುವಷ್ಟು ಭೂಮಿ ಇಲ್ಲದ್ದರಿಂದ ಸಬ್ಸಿಡಿಗಾಗಿ ಸ್ನೇಹಿತನ ಕೃಷಿ ಭೂಮಿಯ ಆಧಾರದಲ್ಲಿ ಯಂತ್ರವನ್ನು ಖರೀದಿಸಿದ್ದಾರೆ. ಪ್ರತಿನಿತ್ಯ ಇದಕ್ಕೆ ಬೇಕಾಗುವ ಪೆಟ್ರೋಲಿನ ವೆಚ್ಚವನ್ನು ತಾವೇ ಭರಿಸುತ್ತಾರೆ.

Advertisement

20 ಕಿ.ಮೀ. ದೂರದ ರಸ್ತೆ
ವಡಭಾಂಡೇಶ್ವರ ವಾರ್ಡ್‌ನಲ್ಲಿ ಮುಖ್ಯ ರಸ್ತೆ ಸೇರಿ ಸುಮಾರು 14 ರಸ್ತೆಗಳಿವೆ. ಸುಮಾರು 20 ಕಿ.ಮೀ. ಉದ್ದದ ರಸ್ತೆ ಇದೆ. ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಹೆಚ್ಚುವರಿ ಕಾರ್ಮಿಕರನ್ನು ನೇಮಿಸಿ ಕೆಲಸ ನಿರ್ವಹಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ, ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತ ಯೋಗೀಶ್‌ ಸಾಲ್ಯಾನ್‌ ಅವರು ಹುಲ್ಲು ಕತ್ತರಿಸುವ ಯಂತ್ರಯನ್ನು ತಾನೆ ಹಣಕೊಟ್ಟು ಖರೀದಿಸಿ ಸ್ವತಃ ತಾವೇ ಯಂತ್ರದ ಮೂಲಕ ಕತ್ತರಿಸಲು ಆರಂಭಿಸಿದರು.

ನಿರಂತರ ಕೆಲಸ
ಸಮಸ್ಯೆಯ ಕುರಿತು ಸಾಕಷ್ಟು ಕರೆಗಳು ಬರುತ್ತಿತ್ತು. ನಮ್ಮ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭಾ ಸದಸ್ಯನಾದವನು ಪೌರಕಾರ್ಮಿಕ ಮಾಡುವ ಕೆಲಸಕ್ಕೂ ಸಿದ್ಧನಿರಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದೇªನೆ. ಎರಡು ದಿನದ ಹಿಂದೆ ಕಟಾವು ಕೆಲಸ ಆರಂಭಿಸಿದ್ದೇನೆ. ನನ್ನ ಸದಸ್ಯ ಅವಧಿಯವರೆಗೂ ನಿರಂತರ ಈ ಕೆಲಸ ಮುಂದುವರಿಯುತ್ತದೆ.
-ಯೋಗೀಶ್‌ ಸಾಲ್ಯಾನ್‌,
ನಗರಸಭಾ ಸದಸ್ಯರು ವಡಭಾಂಡೇಶ್ವರ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next