ಬೆಂಗಳೂರು: ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ ಸೇವಾ ಶುಲ್ಕವನ್ನು 100 ರೂ.ನಿಂದ 200 ರೂ.ಗೆ ಹೆಚ್ಚಿಸಿರುವ ರಾಜ್ಯ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರ ರಾಜ್ಯದ ಜನರ ಹಿತಾಸಕ್ತಿ ಕಾಪಾಡುತ್ತಿದೆಯೋ ಅಥವಾ ಖಾಸಗಿ ಆಸ್ಪತ್ರೆಗಳಧ್ದೋ ಎಂದು ಪ್ರಶ್ನಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ 100 ರೂ. ಸೇವಾ ಶುಲ್ಕ ನಿಗದಿಪಡಿಸಿದ್ದರೂ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವ ಆರೋಪ ಇತ್ತು. ಇದೀಗ ಸರ್ಕಾರವೇ ದುಪ್ಪಟ್ಟು ನಿಗದಿಪಡಿಸಿ ಸುಲಿಗೆಯನ್ನು ಬೆಂಬಲಿಸಿದೆ ಎಂದು ದೂರಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದರೂ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ಸುಲಿಗೆ ಬೆಂಬಲಿಸುತ್ತಿರುವುದು ನಿರ್ಲಜ್ಜದ ಪರಮಾವಧಿ. ರಾಜ್ಯದ ಜನತೆಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಕೊರೊನಾ ಲಸಿಕೆ ಸಿಗುವಂತೆ ಮಾಡಬೇಕಿದ್ದ ಆರೋಗ್ಯ ಸಚಿವ ಸುಧಾಕರ್ ಅವರೇ ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಇವರು ಸಚಿವರೋ ಖಾಸಗಿ ಆಸ್ಪತ್ರೆಗಳ ಪ್ರಚಾರಕರೋ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಶ : ಚಾಲಕ ಪರಾರಿ
ಖಾಸಗಿ ಆಸ್ಪತ್ರೆಗಳು ಲಸಿಕಾ ತಯಾರಿಕಾ ಸಂಸ್ಥೆ ನಿಗದಿಪಡಿಸಿರುವ ಮೊತ್ತದ ಜತೆಗೆ 100 ರೂ. ಸೇವಾ ಶುಲ್ಕ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ 900 ರೂ.ಗೆ ಮಾರಾಟ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದ್ದಾರೆ.