ಬೆಂಗಳೂರು: ಪಾದಯಾತ್ರೆ, ಭಾರೀ ಸಮಾವೇಶ ನಡೆಸಿ 2ಎ ಮೀಸಲಾತಿಗಾಗಿ ಒತ್ತಾಯಿಸಿ ಮಾ. 4ರ ವರೆಗೆ ರಾಜ್ಯ ಸರಕಾರಕ್ಕೆ ಗಡುವು ನೀಡಿರುವ ಪಂಚಮಸಾಲಿ ಹೋರಾಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಧರಣಿಯಿಂದ ದೂರ ಉಳಿದಿರುವ ಹರಿಹರ ಪಂಚಮಸಾಲಿ ಮಠಾಧೀಶ ವಚನಾನಂದ ಶ್ರೀಗಳು, ಯಾರದೋ ತೇಜೋವಧೆಯಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಹೋರಾಟದಲ್ಲಿ ರಾಜಕಾರಣ ಬಂದಾಗ ನಾವು ಹಿಂದೆ ಸರಿಯುತ್ತೇವೆ. ಸಮುದಾಯದ ವಿಚಾರದಲ್ಲಿ ಮುಂಚೂಣಿಯಲ್ಲಿರುತ್ತೇವೆ ಎಂದಿದ್ದಾರೆ.
“ವಚನಾನಂದ ಶ್ರೀಗಳ ನಿರ್ಗಮನ’ದ ಬಗ್ಗೆ ಪ್ರತಿಕ್ರಿಯಿಸಿರುವ ಕೂಡಲಸಂಗಮ ಮಠಾಧೀಶ ಜಯಮೃತ್ಯುಂಜಯ ಶ್ರೀ, “ಅವರಿಗೆ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ತೆರಳಿದ್ದಾರೆ. ಆದರೆ ನಾನು ಸಮಾಜದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ’ ಎಂದು ಹೇಳಿದರು.
ಇದಕ್ಕೆ ಮೊದಲು ವಿಧಾನಸೌಧದಲ್ಲೇ ಪತ್ರಿಕಾ ಗೋಷ್ಠಿ ನಡೆಸಿದ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್‌ನ ಬಿ ಟೀಂನಂತೆ ಕೆಲಸ ಮಾಡುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಅವರು ವಿಜಯಾನಂದ ಕಾಶಪ್ಪನವರ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ ಎಂದು ಟೀಕಿಸಿದರು. ಈ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟ ಹೊಸ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಯತ್ನಾಳ್ ಅವರು ಸಮುದಾಯದ ಶಾಸಕರ ರಾಜೀನಾಮೆ ಕೇಳಿದ್ದಾರೆ. ಅವರು ಗೆದ್ದು ಬಂದಿರುವುದು ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಸಂಘ ಪರಿವಾರದ ಶ್ರಮದಿಂದ. ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಆರಿಸಿಬರಲಿ. ಹಿಂದೆ ಪಕ್ಷೇತರರಾಗಿ ಆರಿಸಿ ಬರಲು ಅವರು ಯಾರ ಕೈ ಕಾಲು ಹಿಡಿದಿದ್ದರು ಎಂಬುದು ಗೊತ್ತಿದೆ.
-ಮುರುಗೇಶ್ ನಿರಾಣಿ, ಸಿ.ಸಿ.ಪಾ ಟೀಲ್, ಸಚಿವರು