ಚಾಮರಾಜನಗರ: ಮುಂಬರುವ ದಿನಗಳಲ್ಲಿ ಲಭ್ಯವಾಗಬಹುದಾದ ಕೋವಿಡ್ ಲಸಿಕೆಯನ್ನು ಪ್ರಥಮ ಹಂತದಲ್ಲಿ ನೀಡಲು ಆದ್ಯತಾ ಪಟ್ಟಿ ತಯಾರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೋವಿಡ್-19 ಲಸಿಕೆ ಲಭ್ಯವಾದಲ್ಲಿ ಅದನ್ನು ಕೋವಿಡ್ ನಿರ್ವಹಣೆಯಲ್ಲಿ ನಿರತರಾಗಿರುವ ಆರೋಗ್ಯ ಸೇವೆಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದು ಈಗಾಗಲೇ ಸೂಚನೆ ಬಂದಿದೆ. ಇದಕ್ಕಾಗಿ ಆರೋಗ್ಯ ಸೇವೆಯಲ್ಲಿ ತೊಡಗಿರುವವರ ನಿಖರ ಮಾಹಿತಿ ಯನ್ನೊಳಗೊಂಡ ಆದ್ಯತಾ ಪಟ್ಟಿಸಲ್ಲಿಸಬೇಕೆಂದರು.
ಪ್ರಥಮ ಹಂತದಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ ಆಸ್ಪತ್ರೆ ಮತ್ತು ಡಿಸ್‌ಪೆನ್ಸ್‌ಸರಿಸ್ ಗಳು, ಕಾರ್ಪೊàರೇಟ್ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಹೋಂ, ಕ್ಲಿನಿಕ್‌ಗಳಲ್ಲಿ ಇರುವ ಎಲ್ಲಾ ಆರೋಗ್ಯ ಸಂಬಂಧಿ ಸೇವಾ ಕಾರ್ಯ ಕರ್ತೆಯರನ್ನು ಒಳಗೊಂಡ ಆದ್ಯತಾ ಪಟ್ಟಿ ತಯಾರಿಸಬೇಕು ಎಂದರು.
ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಅಧಿಕಾರಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್ ತೆರೆದು ಲಸಿಕೆ ಕುರಿತು ಹೆಚ್ಚಿನ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕಂಟ್ರೋಲ್ ರೂಂ ತೆರೆಯಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣ ರಾವ್, ಡಿಎಚ್‌ಒ ಡಾ.ಎಂ.ಸಿ.ರವಿ, ವಿಶ್ವ ಆರೋಗ್ಯ ಸಂಸ್ಥೆಯ ಮೈಸೂರು ಸರ್ವಲೆನ್ಸ್ ಅಧಿಕಾರಿ ಡಾ. ಸುಧೀರ್ ನಾಯಕ್, ಜಿಲ್ಲಾ ಲಸಿಕಾಧಿಕಾರಿ ವಿಶ್ವೇಶ್ವರಯ್ಯ, ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಡಾ. ಮಹೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಮುರಳೀಕೃಷ್ಣ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ. ಸುರೇಶ್, ಪಿಯು ಡಿಸಿ ಕೃಷ್ಣಮೂರ್ತಿ, ಡಿಡಿಪಿಐ ಟಿ. ಜವರೇಗೌಡ ಇತರರು ಹಾಜರಿದ್ದರು