Advertisement

ಕೋವಿಡ್‌ ವಿರುದ್ಧ ಸರಕಾರಿ ನೌಕರರ ಸಂಘ ಕಹಳೆ

07:34 PM Apr 30, 2021 | Team Udayavani |

ಗದಗ: ರಾಜ್ಯ ಸರಕಾರಿ ನೌಕರರ ಸಂಬಳ ಹೆಚ್ಚಳ, ಎನ್‌ಪಿಎಸ್‌ ರದ್ದತಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಬೀದಿಗಿಳಿಯುತ್ತಿದ್ದ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕ ಇದೀಗ ಕೋವಿಡ್‌ ವಿರುದ್ಧವೂ ಕಹಳೆ ಮೊಳಗಿಸಿದೆ.

Advertisement

ಜಿಲ್ಲೆಯ ಎಲ್ಲ ಸರಕಾರಿ ನೌಕರರು ಹಾಗೂ ಅರ್ಹ ಅವಲಂಬಿತರಿಗೆ ಕೋವಿಡ್‌-19 ಲಸಿಕೆ ಹಾಕಿಸಲು ಪಣ ತೊಟ್ಟಿದ್ದು, ವಿಶೇಷ ಅಭಿಯಾನ ಕೈಗೊಂಡಿದೆ. ಜಿಪಂ ಅ ಧೀನದಲ್ಲಿ 38 ಇಲಾಖೆಗಳು ಸೇರಿದಂತೆ ಸುಮಾರು 48 ಇಲಾಖೆಗಳು ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಆರೋಗ್ಯ ಇಲಾಖೆ, ಕಂದಾಯ, ನಗರ ಸ್ಥಳೀಯ ಸಂಸ್ಥೆ ಮತ್ತು ಜಿಪಂ, ತಾಪಂ ಹಾಗೂ ಗ್ರಾಪಂನಲ್ಲಿ ಗುರುತಿಸಲಾದ ಕೊರೊನಾ ವಾರಿಯರ್ಗಳು ಈಗಾಗಲೇ ಎರಡು ಹಂತದ ವ್ಯಾಕ್ಸಿನ್‌ ಪಡೆದಿದ್ದಾರೆ.

ಇನ್ನುಳಿದಂತೆ ಶಿಕ್ಷಣ ಇಲಾಖೆ ಗರಿಷ್ಠ ಪ್ರಮಾಣದ ನೌಕರರನ್ನು ಹೊಂದಿದೆ. ಪ್ರಾಥಮಿಕ ಹಂತದಲ್ಲಿ 5 ಸಾವಿರ ಮತ್ತು ಪ್ರೌಢಶಾಲೆಯಲ್ಲಿ 2 ಸಾವಿರ ಸೇರಿ 7 ಸಾವಿರ ಮಂದಿ ಶಿಕ್ಷಕರು ಲಸಿಕೆ ಪಡೆಯಬೇಕಿದೆ. ಕೃಷಿ, ತೋಟಗಾರಿಕೆ, ಅಬಕಾರಿ, ಪಪೂ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತಿತರೆ ಇಲಾಖೆಗಳಲ್ಲಿ ಸುಮಾರು 3 ಸಾವಿರಕ್ಕಿಂತ ಹೆಚ್ಚು ನೌಕರರು ಹಾಗೂ ಅವರ ಕುಟುಂಬದ ಅರ್ಹರು ಲಸಿಕೆ ಪಡೆಯಬೇಕಿದೆ. ಅದಕ್ಕಾಗಿ ರಾಜ್ಯ ಸರಕಾರಿ ನೌಕರ ಸಂಘ ಇನ್ನೂ ಲಸಿಕೆ ಪಡೆಯದ ನೌಕರರು ಮತ್ತು 18 ವರ್ಷ ಮೀರಿದ ಅವಲಂಬಿತರನ್ನು ಗುರುತಿಸಲು ವಿಶೇಷ ಸಮೀಕ್ಷೆ ಕೈಗೊಂಡಿದೆ.

ಸಮೀಕ್ಷೆಯಲ್ಲಿ ವ್ಯಕ್ತವಾಗುವ ಬೇಡಿಕೆಗೆ ಅನುಗುಣವಾಗಿ ಲಸಿಕಾ ವಿಶೇಷ ಅಭಿಯಾನಕ್ಕೆ ಸಂಘ ಚಿಂತನೆ ನಡೆಸಿದೆ. ಸರಕಾರದ ಕೋವಿಡ್‌ ಮಾರ್ಗಸೂಚಿ ಅನ್ವಯ ನಿಗದಿತ ಸ್ಥಳದಲ್ಲೇ ಪ್ರತ್ಯೇಕ ಸಮಯ ಕಲ್ಪಿಸಲು ಉದ್ದೇಶಿಸಿದೆ. ಈ ವಿಶೇಷ ಪ್ರಯತ್ನಕ್ಕೆ ವಿವಿಧ ಇಲಾಖೆಗಳ ನೌಕರರಿಂದಲೂ ಸಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next