Advertisement

ಉಡುಪಿ: ಬೀದಿ ನಾಯಿಗಳಿಗೆ ಲಸಿಕೆ ಸವಾಲು

12:08 PM Oct 09, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ರೇಬಿಸ್‌ ಲಸಿಕ ಅಭಿಯಾನದಡಿ ಇದುವರೆಗೆ 8,100 ನಾಯಿಗಳಿಗೆ ಲಸಿಕೆ ಹಾಕಲಾಗಿದ್ದು, ಅಭಿಯಾನವನ್ನು ಇನ್ನೂ ವಿಸ್ತರಿಸಲಾಗಿದೆ. ಇದೀಗ ಸಾಕು ನಾಯಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಬೀದಿ ನಾಯಿಗಳಿಗೆ ಲಸಿಕೆ ನೀಡುವುದು ಸವಾಲಿನ ಪ್ರಕ್ರಿಯೆ.

Advertisement

1.18 ಲಕ್ಷ ಸಾಕು ಮತ್ತು ಬೀದಿ ನಾಯಿಗಳು ಜಿಲ್ಲೆಯಲ್ಲಿವೆ. ಇದರಲ್ಲಿ ಬೀದಿನಾಯಿಗಳ ಸಂಖ್ಯೆ ಸಿಂಹಪಾಲು. ಬೀದಿ ನಾಯಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ನಗರಸಭೆ, ಪ.ಪಂ., ಪುರಸಭೆ, ಗ್ರಾ.ಪಂ. ಸಹಿತ ಸ್ಥಳೀಯಾಡಳಿತ ಮುಖ್ಯ ಪಾತ್ರವಹಿಸುತ್ತದೆ. ನಾಯಿಗಳನ್ನು ಹಿಡಿದುಕೊಡುವ ವ್ಯವಸ್ಥೆ ಇವರಿಂದ ಆಗಬೇಕಿದೆ. ಪಶು ವೈದ್ಯಕೀಯ ಇಲಾಖೆ ಲಸಿಕೆ ವಿತರಣೆಗೆ ಇತರ ತಾಂತ್ರಿಕ ಸಹಕಾರ ನೀಡುತ್ತಾರೆ. ಪ್ರಸ್ತುತ ಪಶು ಸಂಗೋಪನೆ ಇಲಾಖೆ ವತಿಯಿಂದ ಉಡುಪಿ ತಾಲೂಕಿನಲ್ಲಿ 2,000, ಕಾಪು 800, ಬ್ರಹ್ಮಾವರ 1,000, ಕಾರ್ಕಳ 1,000, ಹೆಬ್ರಿ 1,260, ಕುಂದಾಪುರ 1,700, ಬೈಂದೂರಲ್ಲಿ 500 ಸಾಕು ನಾಯಿಗಳಿಗೆ ರೇಬಿಸ್‌ ಲಸಿಕೆ ನೀಡಲಾಗಿದೆ.

ಬೀದಿ ನಾಯಿಗಳು ಹಿಡಿಯುವುದು, ನಿರ್ವಹಿಸುವುದು ತುಂಬಾ ಕಷ್ಟವಾಗಿದೆ. ಬೀದಿ ನಾಯಿಗಳನ್ನು ಹಿಡಿದು ಲಸಿಕೆ ಕೊಡುವುದು ಮತ್ತು ಸಂತಾನ ಶಕ್ತಿಹರಣ ಚಿಕಿತ್ಸೆಗೆ ಟೆಂಡರ್‌ ಆಹ್ವಾನಿಸಿದಲ್ಲಿ ಯಾವ ಎನ್‌ಜಿಒ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಈಗಾಗಲೆ ಉಡುಪಿ ನಗರಸಭೆ ವ್ಯಾಪ್ತಿ 15 ಲಕ್ಷ ರೂ. ವೆಚ್ಚದ ಈ ಕಾರ್ಯಕ್ಕೆ ಎರಡು ಬಾರಿ ಟೆಂಡರ್‌ ಆಹ್ವಾನಿಸಿದ್ದರೂ, ಯಾವ ಸಂಸ್ಥೆಯೂ ಮುಂದೆ ಬಂದಿಲ್ಲ. ಇದೀಗ ಮೂರನೇ ಬಾರಿ ಟೆಂಡರ್‌ ಕರೆಯಲಾಗಿದೆ. ಗ್ರಾ. ಪಂ. ಮಟ್ಟದಲ್ಲಿ ಕ್ರಿಯಾಯೋಜನೆ ಅಡಿಯಲ್ಲಿ ಬೀದಿನಾಯಿಗಳ ಲಸಿಕೆ, ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಅನುದಾನವೇ ಇಡುವುದಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ನಿಯಂತ್ರಣವೇ ಸವಾಲು, ಸಮಸ್ಯೆಗಳು ನೂರು

ಮಣಿಪಾಲ, ಮಲ್ಪೆ, ಉಡುಪಿ ನಗರ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಬೆಳ್ಮಣ್‌, ಬ್ರಹ್ಮಾವರ ಸಹಿತ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿ ಬೆಳೆದಿದೆ. ರಸ್ತೆಗಳಲ್ಲಿ ಕೂಗಾಟ, ವಾಹನಗಳನ್ನು ಬೆನ್ನಟ್ಟಿ ಬರುವುದು. ಮಕ್ಕಳಿಗೆ ಕಚ್ಚುವ ಘಟನೆಗಳು ನಡೆಯುತ್ತಿದೆ. ಪ್ರತೀವರ್ಷ ಸಂತಾನಶಕ್ತಿಹರಣ ಚಿಕಿತ್ಸೆ ಹೆಸರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಲಕ್ಷಾಂತರ ರೂ. ವ್ಯಯಿಸುತ್ತಿದೆ. ಆದರೆ ಬೀದಿನಾಯಿಗಳ ವಿಷಯದಲ್ಲಿ ಫ‌ಲಿತಾಂಶ ಉತ್ತಮವಾಗಿಲ್ಲ. ಪ್ರತೀವರ್ಷ ಶೇ. 20ರಿಂದ 30 ರಷ್ಟು ಬೀದಿನಾಯಗಳ ಸಂಖ್ಯೆ ಹೆಚ್ಚಳ ಕಂಡುಬರುತ್ತಿದೆ. ಉಡುಪಿ, ಮಣಿಪಾಲ ಪರಿಸರದಲ್ಲಿ ಹಲವಾರು ಮಂದಿ ಬೀದಿ ನಾಯಿಗಳಿಂದ ಅಪಘಾತಗೊಳಪಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷದಲ್ಲಿ ಸಾಕಷ್ಟು ಮಂದಿ ಕೈ, ಕಾಲು ಮುರಿದುಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Advertisement

ತಾಂತ್ರಿಕ ಸಹಕಾರ: ರೇಬಿಸ್‌ ಲಸಿಕೆ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಸಾಕು ನಾಯಿಗಳ ಪ್ರಮಾಣ ಹೆಚ್ಚು. ಬೀದಿ ನಾಯಿಗೆ ಲಸಿಕೆ ನೀಡುವುದು ಕಷ್ಟವಲ್ಲ ಅವುಗಳನ್ನು ಹಿಡಿಯುವ ಪ್ರಕ್ರಿಯೆ ಸವಾಲು. ನಗರ, ಪಟ್ಟಣ ಹೊರತುಪಡಿಸಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮಸ್ಯೆ ಹೆಚ್ಚುತ್ತಿರುವ ದೂರು ಕೇಳಿ ಬರುತ್ತಿದೆ. ಲಸಿಕೆ, ಸಂತಾನಶಕ್ತಿಹರಣ ಚಿಕಿತ್ಸೆ ಸಂಬಂಧಿಸಿ ಸ್ಥಳೀಯಾಡಳಿತ ಸಂಸ್ಥೆಗಳು ನಿರ್ವಹಿಸಬೇಕಿದ್ದು, ಇದಕ್ಕೆ ಬೇಕಾದ ತಾಂತ್ರಿಕ ಸಹಕಾರವನ್ನು ಪಶುಸಂಗೋಪನೆ ಇಲಾಖೆ ನೀಡುತ್ತದೆ. – ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ

ಹೊಸ ಟೆಂಡರ್‌: ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ನಗರದಲ್ಲಿನ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮತ್ತು ರೇಬಿಸ್‌ ಲಸಿಕೆ ನೀಡುವ ಯೋಜನೆಗೆ ಈಗಾಗಲೆ ಎರಡು ಬಾರಿ ಟೆಂಡರ್‌ ಆಹ್ವಾನಿಸಲಾಗಿತ್ತು. ಯಾರು ಇದಕ್ಕೆ ಮುಂದೆ ಬಂದಿಲ್ಲ. ಇದೀಗ ಮತ್ತೆ ಹೊಸ ಟೆಂಡರ್‌ ಕರೆಯಲಾಗಿದೆ. – ಸುಮಿತ್ರಾ ಎಸ್‌. ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next