Advertisement

ಲಸಿಕೆ ಅಭಿಯಾನ: ಶೀಘ್ರ ಶೇ. 100 ಗುರಿ ಸಾಧನೆ: ಜಿಲ್ಲಾಧಿಕಾರಿ ವಿಶ್ವಾಸ

08:48 PM Dec 04, 2021 | Team Udayavani |

ಉಡುಪಿ: ಕೋವಿಡ್‌ನಿಂದ ಗರಿಷ್ಠ ಸುರಕ್ಷತೆ ಪಡೆಯಲು 2 ಡೋಸ್‌ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದೆ. ಜಿಲ್ಲಾಡಳಿತ ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ಆರಂಭಿಸಿ, ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ, ಅವರ ಮನವೊಲಿಸಿ ಲಸಿಕೆ ನೀಡುತ್ತಿದೆ. ಎಲ್ಲರ ಸಹಕಾರದೊಂದಿಗೆ ಶೀಘ್ರ ಶೇ.100ರಷ್ಟು ಲಸಿಕೆ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ.

Advertisement

ಮೊದಲನೇ ಡೋಸ್‌ ಪಡೆದವರು, ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಂಡಿದ್ದು, ಕೋವಿಡ್‌ ಸೋಂಕು ತಗುಲಿದರೂ ನಮಗೆ ಯಾವುದೇ ಅಪಾಯವಿಲ್ಲ, ಎರಡನೇ ಡೋಸ್‌ ಪಡೆಯಬೇಕಾಗಿಲ್ಲ ಎಂಬ ಭಾವನೆಯಿಂದ, ಮೊದಲ ಡೋಸ್‌ ಪಡೆದು ಅವಧಿ ಮೀರಿದ್ದರೂ ಲಸಿಕಾ ಕೇಂದ್ರಗಳಿಗೆ ಬರುತ್ತಿರಲಿಲ್ಲ. ಇದಕ್ಕಾಗಿ ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ಆರಂಭಿಸಿ, ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ, ಅವರ ಮನವೊಲಿಸಿ ಲಸಿಕೆ ನೀಡುತ್ತಿರುವುದರಿಂದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ನ. 22 ರಿಂದ 30 ರವರಗೆ ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿರುವ, ಪಡೆಯದವರ ಬಗ್ಗೆ ಪರಿಶೀಲನೆ ನಡೆಸಲಾಗಿದೆ. 158 ಗ್ರಾ.ಪಂ. ಗಳ 1,111 ಮತಗಟ್ಟೆ ವ್ಯಾಪ್ತಿಯಲ್ಲಿ 10,11,885 ಮಂದಿ ಲಸಿಕೆ ಪಡೆಯಲು ಅರ್ಹರಿದ್ದರು. ಹೊರ ಜಿಲ್ಲೆ/ರಾಜ್ಯ/ದೇಶದಲ್ಲಿ 96,377 ಮಂದಿ ಇದ್ದಾರೆ. ಮೃತಪಟ್ಟವರು ಮತ್ತು ಜಿಲ್ಲೆಯಿಂದ ಹೊರಗಿರುವವರನ್ನು ಹೊರತುಪಡಿಸಿದರೆ 8,97,728 ಮಂದಿ ಪ್ರಥಮ ಡೋಸ್‌ ಪಡೆಯಲು ಅರ್ಹರಿದ್ದರು. ಇದರಲ್ಲಿ 8,70,423 ಮಂದಿ ಪ್ರಥಮ ಡೋಸ್‌, 7,38,220 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 27,305 ಮಂದಿ ಪ್ರಥಮ ಡೋಸ್‌ ಮತ್ತು 1,32,203 ಮಂದಿ ಎರಡನೇ ಡೋಸ್‌ ಪಡೆಯಲು ಬಾಕಿ ಇದೆ.  ಒಂದೇ ವಾರದಲ್ಲಿ ಜಿಲ್ಲೆಯ ಪ್ರಥಮ ಡೋಸ್‌ ಲಸಿಕೆ ಪ್ರಮಾಣ ಶೇ 93ರಿಂದ ಶೇ 94.02ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ 11,620 ಮಂದಿ ಹಾಗೂ ಎರಡನೇ ಡೋಸ್‌ ಲಸಿಕೆ ಪಡೆಯುವವರ ಪ್ರಮಾಣ ಶೇ 67ರಿಂದ ಶೇ72ಕ್ಕೆ  ಏರಿಕೆಯಾಗಿದ್ದು, 64,118 ಮಂದಿ ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮ ಡೋಸ್‌ ಲಸಿಕೆ ಪಡೆದು ಹೊರ ಜಿಲ್ಲೆ/ ರಾಜ್ಯಗಳಿಗೆ ತೆರಳಿರುವ ನಾಗರಿಕರು ತಾವು ಇರುವಲ್ಲಿಯೇ 2 ನೇ ಡೋಸ್‌ ಲಸಿಕೆ ಪಡೆಯಬೇಕು. ಇದುವರೆಗೂ ಪ್ರಥಮ ಡೋಸ್‌ ಪಡೆಯಲು ಬಾಕಿ ಇರುವ ಹಾಗೂ ಎರಡನೇ ಡೋಸ್‌ ಪಡೆಯಲು ಅರ್ಹರಿರುವ ಸಾರ್ವಜನಿಕರು ಆದ್ಯತೆಯ ಮೇಲೆ ಲಸಿಕೆ ಪಡೆದರೆ  ಜಿಲ್ಲೆಯ ಲಸಿಕೆ ಪ್ರಮಾಣ ಶೇ 100ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next