Advertisement

ಸುಗಮ ಆಡಳಿತಕ್ಕೆ ಖಾಲಿ ಹುದ್ದೆಗಳೇ ಅಡ್ಡಿ!

11:23 AM Jul 22, 2017 | Team Udayavani |

ಬೆಂಗಳೂರು: ಬಿಬಿಎಂಪಿಯ ವಲಯಗಳ ಸಂಖ್ಯೆ ಎಂಟರಿಂದ ಹತ್ತಕ್ಕೆ ಏರಿಕೆಯಾಗಿದೆ. ಆದರೆ, ಪಾಲಿಕೆಯಲ್ಲಿನ ಒಟ್ಟು ಹುದ್ದೆಗಳಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹೀಗಾಗಿ ವಲಯ ವಿಂಗಡಣೆ ನಂತರ ಆಡಳಿತ ಸುಗಮವಾಗುವುದೇ ಅಥವಾ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದೇ ಎಂಬ ಪ್ರಶ್ನೆ ಎದುರಾಗಿದೆ.

Advertisement

ಪಾಲಿಕೆಯ ಆಡಳಿತಾತ್ಮಕ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ಉದ್ದೇಶದಿಂದ ಇತ್ತೀಚೆಗೆ ರಾಜ್ಯ ಸರ್ಕಾರ ಪಾಲಿಕೆಯ ಎಂಟು ವಲಯಗಳನ್ನು ಹತ್ತು ವಲಯಗಳಾಗಿ ವಿಂಗಡಿಸಿ ಆದೇಶ ಹೊರಡಿಸಿದೆ. ಅದರಂತೆ ಹೊಸ ಎರಡು ವಲಯಗಳಿಗೆ ಅಗತ್ಯ ಅಧಿಕಾರಿ, ನೌಕರರನ್ನು ನಿಯೋಜಿಸಬೇಕಿದೆ. ಆದರೆ ಹೊಸ ಹುದ್ದೆಗಳನ್ನು ಸೃಷ್ಟಿಸದೆ, ಹಾಲಿ ಇರುವ ಅಧಿಕಾರಿಗಳಲ್ಲೇ ಕಾರ್ಯಭಾರ ಹಂಚಿಕೆದರೆ ಆಡಳಿತ ಯಂತ್ರದ ವೇಗ ತಗ್ಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಪಾಲಿಕೆಯ ವಿಸ್ತೀರ್ಣವನ್ನು 250 ಚದರ ಮೀಟರ್‌ಗಳಿಂದ 800 ಚದರ ಮೀಟರ್‌ಗಳಿಗೆ ಹೆಚ್ಚಿಸಿ ವರ್ಷಗಳೇ ಕಳೆದಿದ್ದರೂ, ಪಾಲಿಕೆಗೆ ಮಂಜೂರಾದ ಹುದ್ದೆಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗಿಲ್ಲ. ಇದರೊಂದಿಗೆ ಪಾಲಿಕೆಗೆ ಈಗಾಗಲೇ ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ.50ಕ್ಕಿಂತ ಹೆಚ್ಚಿನ ಹುದ್ದೆಗಳು ಹಲವಾರು ವರ್ಷಗಳಿಂದ ಭರ್ತಿಯಾಗಿಲ್ಲ. ಹಾಲಿ ಪಾಲಿಕೆ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಗಿದೆ. 

ಪಾಲಿಕೆಗೆ ಒಟ್ಟಾರೆಯಾಗಿ 17,235 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 8,242 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 9,002 ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಉಳಿದಿದ್ದು, ಪ್ರಮುಖ ವಿಭಾಗಗಳಾದ ಆರೋಗ್ಯ, ಕಾಮಗಾರಿ, ಸಾಮಾನ್ಯ ಆಡಳಿತ, ಶಿಕ್ಷಣ ವಿಭಾಗಗಳಲ್ಲಿಯೇ ಹೆಚ್ಚಿನ ಪ್ರಮಾಣದ ಖಾಲಿ ಹುದ್ದೆಗಳಿರುವುದು ಆಡಳಿತದ ಮೇಲೆ ದುಷ್ಟರಿಣಾಮ ಬೀರುವಂತಾಗಿದೆ. 

ಇದರೊಂದಿಗೆ ಎಂಜಿನಿಯರ್‌ಗಳು, ಫೀಲ್ಡ್‌ ಅಧಿಕಾರಿಗಳು ಹೊರತುಪಡಿಸಿ ಉಳಿದ ಸಿಬ್ಬಂದಿ ಕಚೇರಿ ವೇಳೆಯಲ್ಲಿ ಹಾಗೂ ಸಾರ್ವಜನಿಕ ಭೇಟಿಗೆ ನಿಗದಿಪಡಿಸಿರುವ ವೇಳೆಯಲ್ಲಿ ಹಾಜರಿರಬೇಕು ಎಂಬ ನಿಯಮಗಳು ಪಾಲನೆಯಾಗುತ್ತಿಲ್ಲ. ಹಲವು ಬಾರಿ ಮೇಯರ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರು ದಿಢೀರ್‌ ಪರಿಶೀಲನೆ ನಡೆಸಿದಾಗ ನೌಕರರು ಕಚೇರಿ ಖಾಲಿಯಿರುವುದು ಬೆಳಕಿಗೆ ಬಂದಿದೆ.

Advertisement

ವಲಯಗಳನ್ನು ಹತ್ತಕ್ಕೆ ಹೆಚ್ಚಿಸಿರುವುದು ಆಡಳಿತಾತ್ಮಕ ದೃಷ್ಟಿಯಿಂದ ಉತ್ತಮ ನಿರ್ಧಾರ. ಆದರೆ, ಪ್ರತಿ ವಾರ್ಡ್‌ಗೆ ಎಷ್ಟು ಸಿಬ್ಬಂದಿ ಇರಬೇಕು ಎಂಬ ಬಗ್ಗೆ ಈವರೆಗೆ ಒಂದೂ ಸರ್ವೇ ನಡೆದಿಲ್ಲ. ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆಯಿದ್ದು, ಸಿಬ್ಬಂದಿಯಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆ ಮೂಡಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ.
-ಕೆ.ಜಯರಾಜ್‌, ಬಿಬಿಎಂಪಿ ಮಾಜಿ ಆಯುಕ್ತರು

ಹಲವು ವರ್ಷಗಳಿಂದ ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಈಗಾಗಲೇ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಕಾನೂನು ಕೋಶ, ಪಾಲಿಕೆಯಿಂದ ನೇರವಾಗಿ ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆ ಮಾಡಿಕೊಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ.
-ಜಿ.ಪದ್ಮಾವತಿ, ಪಾಲಿಕೆ ಮೇಯರ್‌ 

ನೆರೆಯ ಸ್ಥಳೀಯ ಪಾಲಿಕೆಗೆ ಹೋಲಿಸಿದರೆ ಬಿಬಿಎಂಪಿಯಲ್ಲಿ ನೌಕರ, ಸಿಬ್ಬಂದಿ ಪ್ರಮಾಣ ಕಡಿಮೆಯಿದೆ. ಆ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳನ್ನು ತುಂಬುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇದರೊಂದಿಗೆ ಇತ್ತೀಚೆಗೆ ಸರ್ಕಾರ ನಾಲ್ಕು ಸಾವಿರ ಪೌರಕಾರ್ಮಿಕ ನೇಮಕಕ್ಕೂ ಒಪ್ಪಿಗೆ ಸೂಚಿಸಿರುವುದರಿಂದ ಸಿಬ್ಬಂದಿ ಕೊರತೆ ನೀಗಲಿದೆ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಅಂಕಿ-ಸಂಖ್ಯೆ
-17,235- ಪಾಲಿಕೆಗೆ ಮಂಜೂರಾದ ಒಟ್ಟು ಹುದ್ದೆಗಳು
-8,242- ಹಾಲಿ ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ
-9,002- ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳು

ಇಲಾಖೆ    ಮಂಜೂರಾದ ಹುದ್ದೆ    ಭರ್ತಿಯಾದ ಹುದ್ದೆ    ಖಾಲಿಯಿರುವ ಹುದ್ದೆ
-ಸಾಮಾನ್ಯ ಆಡಳಿತ    2303    1460    843
-ಲೆಕ್ಕಪತ್ರ ಇಲಾಖೆ    128    86    42
-ಕಾನೂನು ವಿಭಾಗ    25    11    14
-ಕಂದಾಯ ಇಲಾಖೆ    1325    1097    228
-ಅರಣ್ಯ ಇಲಾಖೆ    12    13    8
-ಕಾಮಗಾರಿ ಇಲಾಖೆ    1392    1109    283
-ಆರೋಗ್ಯ ಇಲಾಖೆ    10,124    3648    6476
-ವಿದ್ಯಾ ಇಲಾಖೆ    951    453    498
-ಒಟ್ಟು    17,235    8242    9002

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next