Advertisement

ಪಶು ಇಲಾಖೆಯಲ್ಲಿ ಖಾಲಿ ಕುರ್ಚಿ ಸ್ವಾಗತ!

08:05 PM Nov 20, 2020 | Suhan S |

ಗದಗ: ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿ ಕೊರತೆಯಿಂದ ಖಾಲಿ ಕುರ್ಚಿಗಳದ್ದೇ ಕಾರುಬಾರು ಎನ್ನುವಂತಾಗಿದೆ.

Advertisement

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಜಿಲ್ಲೆಯಲ್ಲಿ 1 ಪಾಲಿಕ್ಲಿನಿಕ್‌, 4 ತಾಲೂಕು ಪಶು ಆಸ್ಪತ್ರೆ, ಹೋಬಳಿ, ಗ್ರಾ.ಪಂ. ಮಟ್ಟದಲ್ಲಿ 62 ಪಶು ಚಿಕಿತ್ಸಾಲಯಗಳು, 8 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಮತ್ತು 5 ಸಂಚಾರಿ ಪಶು ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಗೆ ಮಂಜೂರಾದ ಒಟ್ಟು 382 ಹುದ್ದೆಗಳಲ್ಲಿ 134 ಸ್ಥಾನಗಳು ಭರ್ತಿಯಾಗಿದ್ದು, 250 ಹುದ್ದೆಗಳು ಖಾಲಿ ಉಳಿದಿವೆ.

ವರ್ಷದಲ್ಲಿ ನಾಲ್ಕು ಬಾರಿ ಲಸಿಕೆ ಅಭಿಯಾನ, ಸಭೆಗಳಿಗೆ ಹಾಜರಾಗುವುದು, ಆಕಸ್ಮಿಕವಾಗಿ ಕುರಿ, ಮೇಕೆ, ಜಾನುವಾರು ಮೃತಪಟ್ಟರೆ ಮಹಜರ್‌ ನಡೆಸಿ ವರದಿ ನೀಡುವುದು ಸೇರಿದಂತೆ ವಿಮೆ ದೃಢೀಕರಣ ಕೆಲಸವನ್ನು ವೈದ್ಯರೇ ಮಾಡಬೇಕಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹುದ್ದೆಗಳು ಖಾಲಿ ಇರುವುದರಿಂದ ಕಾಲು ಬಾಯಿ ಜ್ವರ ಹಾಗೂ ಇತರೆ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಪಶು ವೈದ್ಯರು, ಸಿಬ್ಬಂದಿಗೆ ಎರಡ್ಮೂರು ಪಶು ಆಸ್ಪತ್ರೆಗಳ ಪ್ರಭಾರ ವಹಿಸಲಾಗಿದೆ. ವಾರದಲ್ಲಿ ಎರಡು, ಮೂರು ದಿನಕ್ಕೊಮ್ಮೆ ಆಸ್ಪತ್ರೆಗೆ ಹಾಜರಾಗುತ್ತಿದ್ದಾರೆ. ಇದು ರೈತಾಪಿ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಪಶು ಆಸ್ಪತ್ರೆಗೆ ಅಟೆಂಡರ್‌ಗಳೇ ಆಸರೆ: ಇಲಾಖೆಯಲ್ಲಿವೈದ್ಯರು, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಇಲಾಖೆಯಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 60 ಜನ ಅಟೆಂಡರ್‌ಗಳನ್ನು ನೇಮಿಸಿಕೊಂಡಿದೆ. ಅವರಿಂದ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ, ಲಸಿಕೆ, ವಿವಿಧ ಚುಚ್ಚುಮದ್ದುಅಭಿಯಾನಗಳ ನಿರ್ವಹಿಸಲಾಗುತ್ತಿದ್ದು, ರೈತರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಪಶು ವೈದ್ಯರು ಮಾಡಬೇಕಾದ ಕೆಲಸಗಳನ್ನು ಇತರರಿಂದ ನಿರ್ವಹಿಸುತ್ತಿರುವುದು ಸರಿಯಲ್ಲ. ಆದಷ್ಟು ಬೇಗ ಇಲಾಖೆಗೆ ಪೂರ್ಣಾವ ಧಿ ವೈದ್ಯರು, ಸಿಬ್ಬಂದಿಯನ್ನು ಒದಗಿಸಬೇಕೆಂಬುದು ರೈತರ ಒತ್ತಾಯ.

ಇತರೆ ಇಲಾಖೆಗಳಿಗೆ ಪ್ರಭಾರ ಸೇವೆ : ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ನೂರಾರು ಹುದ್ದೆಗಳು ಖಾಲಿ ಇದ್ದರೂ ಕೆಲವರು ಇತರೆ ಇಲಾಖೆಗಳಿಗೆ ಪ್ರಭಾರ ಸೇವೆ ಸಲ್ಲಿಸುತ್ತಿದ್ದಾರೆ. ಗದಗ ತಾಲೂಕಿನ ಹೊಂಬಳ ಪಶು ಆಸ್ಪತ್ರೆ ವೈದ್ಯರಾದ ಡಾ| ಜಿನಗಿ, ಶಿರಹಟ್ಟಿಯ ಹೊಳೆ ಇಟಗಿಯ ಪಶು ವೈದ್ಯಾಧಿಕಾರಿ ಡಾ| ಎಂ.ಬಿ. ಓಲೇಕಾರ ಅವರು ಪಶು ವೈದ್ಯಕೀಯ ಇಲಾಖೆಯ ಶಿರಹಟ್ಟಿ ಸಹಾಯಕ ನಿರ್ದೇಶಕರ(ಪ್ರಭಾರಿ) ಹುದ್ದೆಯೊಂದಿಗೆ ಶಿರಹಟ್ಟಿ ತಾಪಂ ಇಒ ಆಗಿದ್ದಾರೆ. ಶಿರಹಟ್ಟಿ ಜಾನುವಾರು ಅಧಿ ಕಾರಿ ಆರ್‌.ವೈ.ಗುರಿಕಾರ ಲಕ್ಷ್ಮೇಶ್ವರ ತಾಪಂ ಇಒ(ಪ್ರಭಾರಿ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲೇ ಖಾಲಿ ಹುದ್ದೆಗಳಿಂದ ಬಳಲುತ್ತಿರುವ ಪಶು ಇಲಾಖೆ ಅಧಿಕಾರಿಗಳು ಇತರೆ ಇಲಾಖೆಗಳಿಗೆ ತೆರಳಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎನ್ನಲಾಗಿದೆ.

Advertisement

ಎಷ್ಟೇ ಹುದ್ದೆಗಳು ಖಾಲಿ ಇದ್ದರೂ ನಿರೀಕ್ಷೆಗೂ ಮೀರಿ ಸೇವೆ ಒದಗಿಸುತ್ತಿದ್ದೇವೆ. ಇತ್ತೀಚೆಗೆ ಚರ್ಮಗಂಟು ರೋಗ ಉಲ್ಬಣದಿಂದ ಇತರೆ ಜಿಲ್ಲೆಗಳಲ್ಲಿ ಸಮಸ್ಯೆಯಾದರೂ, ನಮ್ಮಲ್ಲಿ ಒಂದೇ ಒಂದು ಜಾನುವಾರು ಸಾವಿಗೀಡಾಗದಂತೆ ಕ್ರಮ ವಹಿಸಿದ್ದೇವೆ. ಈಗಾಗಲೇ ಖಾಲಿ ಹುದ್ದೆಗಳ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.  –ಡಾ|ಜಿ.ಪಿ.ಮನಗೂಳಿ, ಉಪ ನಿರ್ದೇಶಕ, ಪಶು ವೈದ್ಯಕೀಯ ಇಲಾಖೆ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next