Advertisement

ಕೃಷಿ ಇಲಾಖೆಯಲ್ಲಿ ಶೇ.70 ಹುದ್ದೆ ಖಾಲಿ!

05:55 PM Jun 29, 2022 | Team Udayavani |

ಕಾರವಾರ: ಜನರಿಗೆ ಬೇಡವಾದ ಯೋಜನೆಗಳನ್ನು ತಂದು ಜಿಲ್ಲೆಯ ಜನರನ್ನು ಮತ್ತೆ ಮತ್ತೆ ನಿರಾಶ್ರಿತರನ್ನಾಗಿ ಮಾಡದಂತೆ ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ ಮತ್ತು ವಿವಿಧ ಸಂಘಗಳು ಸೇರಿ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿತಲ್ಲದೆ, ಹಾಲಿ ಸರ್ಕಾರಕ್ಕೆ ಹಿಡಿಶಾಪ ಹಾಕಿದವು.

Advertisement

ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು. ಬಹುತೇಕ ಇಲಾಖೆಗಳಲ್ಲಿ ಶೇ.70 ಹುದ್ದೆ ಖಾಲಿ ಇವೆ. ಹೊರಗುತ್ತಿಗೆಯವರು ಅಧಿಕಾರವನ್ನು ಹೇಗೋ ನಡೆಸಿಕೊಂಡು ಹೋಗುತ್ತಿದ್ದಾರೆ. ರೈತರ ಗೋಳು ಕೇಳುವವರೇ ಇಲ್ಲ. ಹಾಗಾಗಿ ರೈತರಿಗೆ ಸ್ಪಂದಿ ಸುವಂತೆ ಉತ್ತರ ಕನ್ನಡ ಜಿಲ್ಲಾ ಭಾರತೀಯ ಕಿಸಾನ್‌ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದರು.

ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ಶಿವರಾಮ ನೇತೃತ್ವವಹಿಸಿ, ಜಿಲ್ಲೆಯಲ್ಲಿ ಕೈಗಾ, ಸೀಬರ್ಡ್‌, ಸೂಪಾ, ಬೊಮ್ಮನಹಳ್ಳಿ, ಕದ್ರಾ ಜಲವಿದ್ಯುತ್‌ ಸೇರಿದಂತೆ ಹತ್ತಾರು ಬೃಹತ್‌ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದೆಲ್ಲ ಯೋಜನೆಗಳಿಗೂ ಜಿಲ್ಲೆಯ ಜನರು ತಮ್ಮ ಮನೆ ಜಮೀನು ತ್ಯಾಗ ಮಾಡಿದ್ದಾರೆ. ಹೆಗ್ಗಾರ, ಕಲ್ಲೇಶ್ವರ, ಹಳವಳ್ಳಿಯಲ್ಲಿ ಆಶ್ರಯ ಪಡೆದು ತೋಟ ಮಾಡಿಕೊಂಡಿದ್ದಾರೆ. ಇಂತಹ ಜನರಿಗೆ ವಿಶೇಷ ಸೌಲತ್ತುಗಳನ್ನು ಕಲ್ಪಿಸಬೇಕಿದ್ದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತೆ ಇದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯ ಜನರಿಗೆ, ರೈತರಿಗೆ ಸಿಗಬೇಕಾದ ಯಾವುದೇ ಯೋಜನೆಗಳು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅನೇಕ ಇಲಾಖೆಗಳಲ್ಲಿ ಶೇ.70 ರಷ್ಟು ಹುದ್ದೆಗಳು ಖಾಲಿ ಇದೆ. ಇದರಿಂದ ರೈತರಿಗೆ ತಲುಪಬೇಕಾದ ಸರ್ಕಾರದ ಯಾವುದೇ ಯೋಜನೆ ಮತ್ತು ಮಾಹಿತಿಗಳು ಸರಿಯಾಗಿ ತಲುಪುತ್ತಿಲ್ಲ. ಕೂಡಲೇ ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಕಳೆದ ಜುಲೈನಲ್ಲಿ ಸುರಿದ ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು ಇದರಲ್ಲಿ ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ಮತ್ತು ಪುನರ್ವಸತಿ ಒದಗಿಸಬೇಕು. ನಮ್ಮ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಿಎಸ್‌ಎನ್‌ಎಲ್‌ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿದ್ಯುತ್‌ ಇದ್ದಾಗ ಮಾತ್ರ ಮೊಬೈಲ್‌ ಟಾವರ್‌ಗಳು ಕೆಲಸ ಮಾಡುತ್ತಿದ್ದು ವಿದ್ಯುತ್‌ ಅಭಾವದಲ್ಲಿ ಟವರ್‌ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಅತಿಯಾಗಿದ್ದು ಇದರ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಾಡು ಪ್ರಾಣಿಗಳಿಂದ ರೈತರಿಗೆ ಉಂಟಾದ ನಷ್ಟಕ್ಕೆ ವೈಜ್ಞಾನಿಕ ರೀತಿಯ ಬೆಲೆ ನಿಗದಿಪಡಿಸಿ ಪರಿಹಾರ ನೀಡಬೇಕು. ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದಲ್ಲಿ ಕೆಲ ಉದ್ಯಮಿಗಳು ರಾಜಕಾಲುವೆ ಬಂದ್‌ ಮಾಡಿದ ಕಾರಣ ರೈತರ ಜಮೀನಿಗೆ ಉಪ್ಪುನೀರು ನುಗ್ಗಿ ಬೆಳೆ ಬಾರದಂತಾಗಿದೆ. ಕೂಡಲೇ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಪುನರ್‌ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಭಟ್ಕಳ ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ಅಭಯಾರಣ್ಯಕ್ಕೆ ಸೇರಿಸುವ ಹುನ್ನಾರ ನಡೆಯುತ್ತಿದ್ದು ಈ ಯೋಜನೆ ತಕ್ಷಣ ಕೈಬಿಡಬೇಕು. ಮತ್ತು ಈಗಾಗಲೇ ಜಾರಿಯಾಗಿರುವ ದಾಂಡೇಲಿ ಅಭಯಾರಣ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಶಿವರಾಮ್‌, ನಾರಾಯಣ ಭಟ್‌, ಡಿ.ಎಂ. ನಾಯ್ಕ, ಗಣಪತಿ ನಾಯ್ಕ, ವಿಘ್ನೇಶ್ವರ ಭಟ್‌, ರಾಘವೇಂದ್ರ ಗಾಂವಕರ್‌, ವಿಷ್ಣು ಹೆಗಡೆ, ಶ್ರೀಕಾಂತ ಹೆಗಡೆ ಸೇರಿದಂತೆ ಹಲವರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next