Advertisement

ಜಿಲ್ಲೆಯ 5 ತಾಲೂಕಲ್ಲಿ ಸಿಡಿಪಿಒ ಹುದ್ದೆ ಖಾಲಿ

02:17 PM Jan 26, 2022 | Team Udayavani |

ಚಿಕ್ಕಬಳ್ಳಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನೇಮಕ ಮಾಡಿದೆ.

Advertisement

(ಸಿಡಿಪಿಒ) ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳ ಪೈಕಿ ಐದು ತಾಲೂಕುಗಳಲ್ಲಿ ಶಾಶ್ವತ ಸಿಡಿಪಿಒ ಅಧಿಕಾರಿಗಳು ಇಲ್ಲದೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ.

ಗಮನ ಹರಿಸಿಲ್ಲ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಿತ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಪ್ರಭಾರ ಅಧಿಕಾರಿಗಳನ್ನು ಇಟ್ಟುಕೊಂಡು ಇಲಾಖೆ ಕಾರ್ಯಕ್ರಮಗಳು ಮತ್ತು ಯೋಜನೆ ಅನುಷ್ಠಾನಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಮಾತ್ರ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದಂತೆ ಬೇರೆ ತಾಲೂಕುಗಳಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಪ್ರಭಾರ ಸಿಡಿಪಿಒ ಅಧಿಕಾರಿಗಳಾಗಿ ನೇಮಕ ಮಾಡಿ ಇಲಾಖೆ ಹಿರಿಯ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ.

ಹಲವು ಜವಾಬ್ದಾರಿ: ಸಾಮಾನ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ವಿಶೇಷವಾಗಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ನೀಡುವ ಸಲುವಾಗಿ ಪೌಷ್ಟಿಕ ಅಭಿಯಾನ ನಡೆಸಲಾಗುತ್ತದೆ. ಅದಲ್ಲದೆ ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆ, ಮಾತೃವಂದನಾ ಯೋಜನೆ ಅನುಷ್ಠಾನ, ಬಾಲ್ಯವಿವಾಹಗಳ ತಡೆಗಟ್ಟುವಿಕೆ, ಗರ್ಭಿಣಿಯರು, ಕಿಶೋರಿಯರಿಗೆ ಪೂರಕ ಪೌಷ್ಟಿಕ ಆಹಾರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಜವಾಬ್ದಾರಿಯನ್ನೂ ನೀಡಲಾಗಿದೆ.

ಜಿಲ್ಲೆಯಲ್ಲಿ ಸುಮಾರು ತಿಂಗಳಿಂದ ಪ್ರಭಾರ ಅಧಿಕಾರಿಗಳನ್ನು ಇಟ್ಟುಕೊಂಡು ಇಲಾಖೆಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಇದರಿಂದ ಪ್ರಗತಿ ಕುಂಠಿತವಾಗಿದೆ ಎಂಬ ದೂರು ಕೇಳಿಬರುತ್ತಿದೆ. ಇಲಾಖೆಯ ಅಧಿಕಾರಿಗಳು ಶಾಶ್ವತ ಸಿಡಿಪಿಒ ಅಧಿಕಾರಿ ಇಲ್ಲದ ಕುರಿತು ಹಿರಿಯಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಇದುವರೆಗೂ ಶಾಶ್ವತ ಅಧಿಕಾರಿಗಳನ್ನು ನೇಮಕಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಆಡಳಿತ ವ್ಯವಸ್ಥೆ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಿಡಿಪಿಒ ಮತ್ತು ಮೇಲ್ವಿಚಾರಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ

ಮೇಲ್ವಿಚಾರಕ ಹುದ್ದೆಗಳೂ ಖಾಲಿ: ಅಧಿಕಾರಿಗಳ ನಿರ್ಲಕ್ಷ್ಯ:

ಜಿಲ್ಲೆಯಲ್ಲಿ ಸುಮಾರು 1961 ಅಂಗನವಾಡಿ ಕೇಂದ್ರಗಳಿದ್ದು ಈ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಹೊಂದಿದ್ದಾರೆ. ದುರಾದೃಷ್ಟವಶಾತ್‌ ಒಂದು ಕಡೆ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳ ಭಾಗ್ಯವಿಲ್ಲದಂತಾಗಿದೆ. ಮತ್ತೂಂದೆಡೆ ಜಿಲ್ಲಾದ್ಯಂತ 75 ಮೇಲ್ವಿಚಾರಕರ ಪೈಕಿ 52 ಮೇಲ್ವಿಚಾರಕಿಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇಲಾಖೆಯಲ್ಲಿ ಖಾಲಿ ಇರುವ ಅಧಿಕಾರಿಗಳು, ಸಿಬ್ಬಂದಿ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 5ತಾಲೂಕುಗಳಲ್ಲಿ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳು ಇಲ್ಲ. ಎಸಿಡಿಪಿಒಗಳನ್ನು ಪ್ರಭಾರ ಅಧಿಕಾರಿಗಳಾಗಿ ನೇಮಕಮಾಡಲಾಗಿದೆ. ಜತೆಗೆ ಮೇಲ್ವಿಚಾರಕರಹುದ್ದೆಗಳೂ ಖಾಲಿ ಇದ್ದು ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.ಲಕ್ಷ್ಮೀದೇವಮ್ಮ, ಜಿಲ್ಲಾ ಅಧ್ಯಕ್ಷರು, ಸಿಐಟಿಯು ಸಂಘಟನೆ ಚಿಕ್ಕಬಳ್ಳಾಪುರ

ಜಿಲ್ಲೆಯ 5 ತಾಲೂಕುಗಳಲ್ಲಿ ಶಾಶ್ವತವಾಗಿ ಸಿಡಿಪಿಒ ಅಧಿಕಾರಿಗಳುಇಲ್ಲದ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಪ್ರಸ್ತುತ ಎಸಿಡಿಪಿಗಳನ್ನು ಪ್ರಭಾರ ವಹಿಸಿ ಇಲಾಖೆಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅಶ್ವತ್ಥಮ್ಮ, ಉಪನಿರ್ದೇಶಕಿ, ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ

ಎಂ.ಎ.ತಮೀಮ್‌ ಪಾಷಾ

Advertisement

Udayavani is now on Telegram. Click here to join our channel and stay updated with the latest news.

Next