Advertisement

ವಿಎ ಹುದ್ದೆಗಳು ಖಾಲಿ: ಕಂದಾಯ ಸೇವೆ ಬಾಧಿತ

10:18 AM Sep 23, 2022 | Team Udayavani |

ಉಡುಪಿ: ಕಂದಾಯ ಸೇವೆ ಸಂಬಂಧಿತ ಸೇವೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಗ್ರಾಮ ಲೆಕ್ಕಿಗರ (ವಿಎ) ಹುದ್ದೆಗಳು ಬಹು ತೇಕ ಖಾಲಿ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಕಂದಾಯ ಸೇವೆ ಬಾಧಿತವಾಗಿದ್ದು, ಸಾರ್ವಜನಿಕರ ಕೆಲಸಕ್ಕೆ ವಿಎಗಳು ಸಿಗುತ್ತಿಲ್ಲ ಎಂದು ದೂರು ಕೇಳಿ ಬಂದಿದೆ.

Advertisement

ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ವಿಎಗಳ ನಿಯೋಜನೆ, ಅನ್ಯ ಇಲಾಖೆ ಕೆಲಸ ಕಾರ್ಯ ನಿರ್ವಹಣೆಯಿಂದಾಗಿ ಒತ್ತಡದಲ್ಲಿ ಸಾರ್ವಜನಿಕರು ಮತ್ತು ಸರಕಾರದ ನಡುವೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ವಿಎಗಳದ್ದು.

ಈ ಹಿಂದೆ ಒಬ್ಬರು ವಿಎ ಒಂದೆರಡು ಕಂದಾಯ ವೃತ್ತಗಳನ್ನು ನಿಭಾಯಿಸುತ್ತಿದ್ದರು. ಪ್ರಸ್ತುತ ಒಬ್ಬರು ವಿಎ ಮೂರ್ನಾಲ್ಕು ವೃತ್ತಗಳಲ್ಲಿ ಕಾರ್ಯನಿರ್ವಹಿಸಬೇಕಿದೆ. ಕಂದಾಯ ಸೇವೆ ಜತೆಗೆ ಕೃಷಿ ಇಲಾಖೆ ಬೆಳೆ ಸಮೀಕ್ಷೆಯ ಕೆಲಸವನ್ನು ವಹಿಸಲಾಗಿರುವುದು ಗ್ರಾಮ ಲೆಕ್ಕಾಧಿಕಾರಿಗಳನ್ನು ಹೈರಾಣಾಗಿಸಿದೆ. ಪರಿಣಾಮ ಸಕಾಲ ವ್ಯಾಪ್ತಿ ಹೊರತುಪಡಿಸಿ ಇತರೆ ಕಂದಾಯ ಸೇವೆಯ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಸಮಸ್ಯೆಯಾಗಿದೆ. ಕಚೇರಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಸೇವೆ ನೀಡಲು ತೊಂದರೆಯಾಗುತ್ತಿದೆ ಎಂಬುದು ಗ್ರಾಮ ಲೆಕ್ಕಿಗರ ಅಭಿಪ್ರಾಯ.

ಶೇ.30ರಷ್ಟು ವಿಎಗಳಿಗೆ ಕಚೇರಿ ಕೆಲಸ

ಜಿಲ್ಲೆಯಲ್ಲಿ ಪ್ರಸ್ತುತ ಮಂಜೂರಾತಿ ಗ್ರಾಮ ಲೆಕ್ಕಿಗ ಹುದ್ದೆ 215 ಇದ್ದು, 168 ಹುದ್ದೆಗಳು ಭರ್ತಿಯಾಗಿವೆ. ಇದರಲ್ಲಿಯೂ ಶೇ.30ರಷ್ಟು ವಿಎಗಳು ಡಿಸಿ ಕಚೇರಿ, ಎಸಿ ಕಚೇರಿ, ತಾ| ಕಚೇರಿ, ನಾಡ ಕಚೇರಿ ಗಳಿಗೆ ನಿಯೋಜಿಸಲ್ಪಟ್ಟಿದ್ದಾರೆ.

Advertisement

ಇಲ್ಲಿನ ಬಹುತೇಕ ವಿಭಾಗದಲ್ಲಿ ಎಫ್ ಡಿಎ, ಎಸ್‌ಡಿಎ, ಕ್ಲರಿಕಲ್‌ ಪೋಸ್ಟ್‌ ಗಳು ಖಾಲಿ ಇದ್ದು, ಇವರ ಕೆಲಸವನ್ನು ವಿಎ ಅವರೇ ನಿರ್ವಹಿಸಬೇಕಿದೆ. ಜಿಲ್ಲೆಯಲ್ಲಿ ಕೊನೆಯದಾಗಿ 2019ರಲ್ಲಿ ವಿಎ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಬಳಿಕ ಕೋವಿಡ್‌ ಕಾರಣಗಳಿಂದ ಎರಡು ವರ್ಷ ತಡವಾಗಿ ಪ್ರಕ್ರಿಯೆ ನಡೆದಿತ್ತು. ರಾಜ್ಯದಲ್ಲಿ ವಿಎಗಳ ನೇಮಕಾತಿ ನಡೆಸುವ ಜಿಲ್ಲಾಧಿಕಾರಿಗಳಿಗಿರುವ ಅಧಿಕಾರವನ್ನು ಇತ್ತೀಚೆಗೆ ಸರಕಾರ ರದ್ದುಗೊಳಿಸಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಏನೆಲ್ಲಾ ಸಮಸ್ಯೆಗಳಾಗುತ್ತಿವೆ ?

* ಜನರಿಗೆ ಸಕಾಲದಲ್ಲಿ ವಿಎಗಳು ಸಿಗದೇ ಆದಾಯ, ಜಾತ್ರಿ ಪ್ರಮಾಣ ಪತ್ರ ಮೊದಲಾದ ಸೌಲಭ್ಯ ಪಡೆಯಲು ವಿಳಂಬ

* ಕೃಷಿ ಜಮೀನಿಗೆ 11ಎ ನಕ್ಷೆ ಕೋರಿ ಬಂದ ಅರ್ಜಿಗಳ ವಿಲೇವಾರಿ ಕೆಲಸದಲ್ಲಿ ಒತ್ತಡ, 7ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ

* ಅಕ್ರಮ-ಸಕ್ರಮ ಕಡತ ವಿಲೇವಾರಿ ಕೆಲಸಗಳಿಗೆ ಹಿನ್ನಡೆ

ಕಂದಾಯ ಸೇವೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡು ಉತ್ತಮ ಸೇವೆ ಕೊಡುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳು ನಿರಂತರ ಶ್ರಮದಿಂದ ಈ ಗುರಿ ಸಾಧ್ಯವಾಗಿದೆ. ವಿಎಗಳ ಕೊರತೆಯಿದ್ದರೂ ಎಲ್ಲವನ್ನು ಸರಿದೂಗಿಸಿಕೊಂಡು ಸಾರ್ವಜನಿಕರಿಗೆ ಸೇವೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದ್ದು, ಜನರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆ ಸೇವೆ ನೀಡಲಿದೆ. ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಎಗಳ ಶೀಘ್ರ ನೇಮಕಾತಿ ಸಂಬಂಧಿಸಿ ಮತ್ತೂಮ್ಮೆ ಸರಕಾರದ ಗಮನಕ್ಕೆ ತರಲಾಗುವುದು. – ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next