Advertisement
ಸಿಲಿಕಾನ್ ಸಿಟಿಯ ಪಾರಂಪರಿಕ ಸ್ಥಳಗಳಲ್ಲಿ ಒಂದಾದ ವಿ.ವಿ.ಪುರಂ ಅಥವಾ ವಿಶ್ವೇಶ್ವರಪುರಂ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ವಿವಿ ಪುರಂನ ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದವರೆಗಿನ ಹಾದಿಯ ತುಂಬೆಲ್ಲಾ ಎಲ್ಲಿ ನೋಡಿದರೂ ತಿಂಡಿ-ತಿನಿಸುಗಳೇ ಕಾಣುತ್ತವೆ. ಇಲ್ಲಿನ ಕೆಲವೊಂದು ಅಂಗಡಿ- ಬೇಕರಿಗಳು ದಶಕಗಳ ಇತಿಹಾಸ, ಖ್ಯಾತಿ ಪಡೆದಿದ್ದು, ಇಂದಿಗೂ ಅದರದ್ದೇ ಆದ ರುಚಿ-ಶುಚಿಯನ್ನು ಕಾಪಾಡಿಕೊಂಡು ಬಂದಿವೆ. ನಗರ ನಿವಾಸಿಗಳು ಮಾತ್ರವಲ್ಲದೇ ವಿದೇಶಿಯರೂ ಇಲ್ಲಿಗೆ ತಮ್ಮಗಿಷ್ಟವಾದ ಖಾದ್ಯಗಳನ್ನು ಸವಿಯಲು ಭೇಟಿ ನೀಡುತ್ತಾರೆ.
Related Articles
Advertisement
ಏನೆಲ್ಲಾ ಇರಲಿದೆ?: 5 ಮೀ. ಅಗಲದ ರಸ್ತೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಅಂದಾಜು 3 ಮೀ. ಅಗಲದ ಪಾದಚಾರಿ ಮಾರ್ಗವನ್ನು ಸಿದ್ಧಗೊಳಿಸಲಾಗುತ್ತಿದೆ. ರಸ್ತೆಯನ್ನು ವೈಟ್ ಟ್ಯಾಪಿಂಗ್‌ನಿಂದ ಹಾಗೂ ಫುಟ್‌ಪಾತ್ ಅನ್ನು ಒರಟು ಗ್ರ್ಯಾನೈಟ್ ಕಲ್ಲುಗಳಿಂದ ನಿರ್ಮಿಸಲಾಗುತ್ತಿದ್ದು, ಪ್ರತಿ ಅಂಗಡಿಯ ಮುಂದೆ ಕೂರಲು ಕಲ್ಲಿನ ಬೆಂಚ್‌ಗಳು, ಕೈತೊಳೆಯಲು ಕೊಳಾಯಿಗಳ ವ್ಯವಸ್ಥೆ, ಆಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಮಳೆ ನೀರು ಚರಂಡಿ ಮತ್ತು ಒಳಚರಂಡಿ ಕೊಳವೆ ಮಾರ್ಗಗಳ ಪುನರ್ ವಿನ್ಯಾಸ, ಅಲ್ಲಿಯ ಮಳಿಗೆಗಳ ಹೊರಾಂಗಣ ಗೋಡೆಗಳಿಗೆ ಬಣ್ಣ ಒಳಗೊಂಡಂತೆ ಫುಡ್‌ಸ್ಟ್ರೀಟ್‌ಗೆ ಮುಖ್ಯದ್ವಾರ(ಆರ್ಚ್) ನಿರ್ಮಿಸಲಾಗುತ್ತದೆ ಎಂದು ಬಿಬಿಎಂಪಿ ಎಂಜಿನಿಯರ್ ತಿಳಿಸುತ್ತಾರೆ.
ಪಾರ್ಕಿಂಗ್ ವ್ಯವಸ್ಥೆಯಿಲ್ಲ! : ಮೊದಲು ಫುಡ್‌ಸ್ಟ್ರೀಟ್‌ಗೆ ಬರುವ ಸಾರ್ವಜನಿಕರು ಸಜ್ಜನ್‌ರಾವ್ ವೃತ್ತ ಅಥವಾ ಮಿನರ್ವ ವೃತ್ತದ ಬಳಿ ಎಲ್ಲೆಂದರೆ ಬೈಕ್-ಕಾರುಗಳನ್ನು ನಿಲ್ಲಿಸಿ, ತಿಂಡಿ-ತಿನಿಸುಗಳನ್ನು ತಿನ್ನಲು ಬರುತ್ತಿದ್ದರು. ಆದರೆ, ಈಗ ಬಿಬಿಎಂಪಿಯು ಫುಡ್‌ಸ್ಟ್ರೀಟ್ ಅನ್ನು ಆಧುನೀಕರಣಗೊಳಿಸಲಾಗುತ್ತಿದೆ. ಆದರೂ, ಪಾರ್ಕಿಂಗ್ ವ್ಯವಸ್ಥೆ ಇಲ್ಲವಾಗಿದೆ. ಬಹುತೇಕರು ಬೈಕ್, ಕಾರುಗಳಲ್ಲಿ ಆಗಮಿಸುತ್ತಾರೆ. ಇಲ್ಲಿ ಯವುದೇ ವಯೋಮಿತಿಯಿಲ್ಲದೇ ಮಕ್ಕಳು, ವಯಸ್ಸಾದವರೂ ವಿವಿಧ ತಿಂಡಿಗಳನ್ನು ತಿನ್ನಲು ಬರುತ್ತಾರೆ. ಆದರೆ, ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೇ, ಮತ್ತೆ ವೃತ್ತಗಳಲ್ಲಿ ಹಾಗೂ ಫುಡ್ ಸ್ಟ್ರೀಟ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ.
ಜು.15ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಶ್ರಮ : ಪಾರ್ಕಿಂಗ್, ರಸ್ತೆ ಹಾಗೂ ಕೊಳಚೆ ನೀರಿನ ಅವ್ಯವಸ್ಥೆ, ತಿಂಡಿ-ತಿನಿಸು ಗಳನ್ನು ಸೇವಿಸಲು ಬಂದಂತಹ ಆಹಾರ ಪ್ರಿಯರಿಗೆ ಸರಿಯಾಗಿ ನಿಂತು ಆಹಾರ ತಿನ್ನಲು ಜಾಗದ ಅನನುಕೂಲತೆ, ಹೀಗೆ ನಾನಾ ಕಾರಣಗಳಿಂದಾಗಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಆಧುನಿಕತೆಯನ್ನು ನೀಡುವ ಉದ್ದೇಶದಿಂದ 2022ರ ಡಿಸೆಂಬ ರ್‌ನಲ್ಲಿ ಟೆಂಡರ್ ಕರೆಯಲಾಯಿತು. ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಿದ್ಧತೆ ನಡೆದಿದ್ದು, ಡಿಸೆಂಬರ್‌ನಲ್ಲಿಯೇ ಕಾಮಾಗಾರಿಯನ್ನು ಆರಂಭಿಸಲಾಯಿತು. 3-4 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, ಅಕಾಲಿಕ ಮಳೆ, ಚುನಾವಣಾ ನೀತಿ ಸಂಹಿತೆ, ನಂತರ ಚುನಾವಣೆ ಹೀಗೆ ವಿವಿಧ ಕಾರಣಗಳಿಂದ ಕಾಮಗಾರಿ ತಡವಾಗಿದ್ದು, ಮುಂದಿನ ತಿಂಗಳು ಜುಲೈ 15ರಷ್ಟೊತ್ತಿಗೆ ಎಲ್ಲಾ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗುತ್ತದೆ. ಕೊಳಚೆ ನೀರು, ಮಳೆ ನೀರು, ವಿದ್ಯುತ್ ಕೇಬಲ್ ಸೇರಿದಂತೆ ಎಲ್ಲಾ ಪೈಪ್ ಲೈನ್‌ಗಳನ್ನು ಪುನರ್‌ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಗಿಡಗಳನ್ನೂ ಹಾಕಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರಸ್ತೆ, ಒಳಚರಂಡಿ, ಕೇಬಲ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ವೈಟ್‌ಟ್ಯಾಪಿಂಗ್, ಲೈಟಿಂಗ್ ಸೇರಿದಂತೆ ಇನ್ನಿತರೆ ಕೆಲಸಗಳು ಆಗಬೇಕಿದೆ. ಚುನಾವಣಾ, ಮಳೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಕಾಮಗಾರಿ ತಡವಾಗಿದ್ದು, ಜು.15ರೊಳಗಾಗಿ ವಿವಿ ಪುರಂ ಫುಡ್‌ಸ್ಟ್ರೀಟ್‌ನ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗುತ್ತದೆ. ಜತೆಗೆ ಇಲ್ಲಿನ ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ● ಮಹಾಂತೇಶ್, ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್
ನಿತ್ಯ ಸಾವಿರಾರು ಜನ ವಿವಿಧ ಬಗೆಯ ತಿಂಡಿಗಳನ್ನು ತಿನ್ನಲೆಂದು ಆಸೆಯಿಂದ ಬರುತ್ತಾರೆ. ಆದರೆ, ಈಗ ಸುಮಾರು ಶೇ.60-70 ಜನ ಬರುವುದು ಕಡಿಮೆಯಾಗಿದೆ. ನಾಲ್ಕು ತಿಂಗಳಿಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ ಬಿಬಿಎಂಪಿ ಆರೇಳು ತಿಂಗಳುಗಳಾದರೂ ಇನ್ನೂ ರಸ್ತೆಯಾಗಿಲ್ಲ. ಇದರಿಂದ ಧೂಳು, ನಿಲ್ಲಲು ಜಾಗವಿಲ್ಲದೆ ಎಲ್ಲೆಡೆ ಕಲ್ಲು, ತಗ್ಗು ಇರುವುದರಿಂದ ಜನ ಬರಲು ನಿರಾಕರಿಸುತ್ತಿದ್ದಾರೆ. ● ಲಕ್ಷ್ಮೀನಾರಾಯಣ , ವ್ಯಾಪಾರಿ
ಒಂದು ರಸ್ತೆ ನಿರ್ಮಾಣ ಮಾಡಲು ಆರು ತಿಂಗಳುಗಳಷ್ಟು ಕಾಲಾವಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಬೇಕರಿಗೆ ಬರುವ ದಾರಿಯಲ್ಲಿಯೇ ಕಲ್ಲು, ಮಣ್ಣಿನ ಗುಡ್ಡೆ ಹಾಕಿದ್ದು, ಗ್ರಾಹಕರು, ಅದರಲ್ಲೂ ವಯಸ್ಸಾದವರು ಬರಲು ಕಷ್ಟವಾಗುವುದರಿಂದ ವ್ಯಾಪಾರವೇ ಇಲ್ಲದಂತಾಗಿದೆ. ದಿನಕ್ಕೆ 10 ರೂ. ವ್ಯಾಪಾರ ಆಗುವ ಜಾಗದಲ್ಲಿ 3 ರೂ. ಆಗುವುದು ಕಷ್ಟವಾಗಿದೆ. ● ನಾಗೇಶ್, ವಿ.ಬಿ. ಬೇಕರಿ ವ್ಯಾಪಾರಿ
ಏನಾದರೂ ತಿನ್ನಬೇಕೆನಿಸಿದರೆ ನೆನಪಾಗುವುದೇ ವಿ.ವಿ. ಪುರಂ ಫುಡ್‌ಸ್ಟ್ರೀಟ್. ಕುಟುಂಬಸ್ಥರೊಂದಿಗೆ ಅಥವಾ ಸ್ನೇಹಿತರೊಂದಿಗೆ ಫುಡ್‌ಸ್ಟ್ರೀಟ್‌ಗೆ ಧಾವಿಸುತ್ತಿದ್ದೆ. ಆದರೆ, ಈಗ ಕೆಲವು ತಿಂಗಳುಗಳಿಂದ ಕೆಲಸ ನಡೆಯುತ್ತಿರುವುದರಿಂದ ಅಲ್ಲಿನ ಧೂಳು, ಜಲ್ಲಿ ಕಲ್ಲು-ಮಣ್ಣು ಎಲ್ಲೆಂದರಲ್ಲೆ ಇರುವುದರಿಂದ ಸ್ವತ್ಛತೆಯಿಲ್ಲದಿರುವ ಕಾರಣ ತಿನ್ನಲು ಬರುವುದೇ ಕಡಿಮೆ ಮಾಡಲಾಗಿದೆ. ● ನಿಸರ್ಗ, ಗ್ರಾಹಕರು
ಮೊದಲು ಫುಡ್‌ಸ್ಟ್ರೀಟ್‌ನಲ್ಲಿ ಸ್ವತ್ಛತೆ, ನೀರಿನ ಕೊಳಾಯಿ ಸೇರಿದಂತೆ ಅನೇಕ ತೊಂದರೆಗಳಿದ್ದವು. ಈಗ ಅದಕ್ಕೆಲ್ಲ ಒಂದು ಪರಿಹಾರವನ್ನು ನೀಡುತ್ತಿದ್ದಾರೆ. ಕೆಲಸ ತಡವಾಗುತ್ತಿದೆ, ಆದರೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಇದರಿಂದ ಅನುಕೂಲವಾಗಬಹುದು. – ನವೀನ್, ಗ್ರಾಹಕರು
– ಭಾರತಿ ಸಜ್ಜನ್