ಬೆಂಗಳೂರು: ಡಿ ಕೆ ಶಿವಕುಮಾರ್ ಅವರ ವಿಚಾರವಾಗಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತ ಹೇಳಿದ್ದಾರೆ. ನಿಮ್ಮ ಮುಖ್ಯಮಂತ್ರಿ ಗಳು ಜೈಲಿಗೆ ಹೋಗಿದ್ದರಲ್ಲಾ ಅವರು ಉಪ್ಪು ತಿಂದಿದ್ದರಾ, ಡಿಸಿಎಂ ಸವದಿ ಯಾಕೆ ರಾಜಿನಾಮೆ ಕೊಟ್ಟಿದ್ದರು ಅವರು ಉಪ್ಪು ತಿಂದಿದ್ದರಾ ಸಕ್ಕೆರೆ ತಿಂದಿದ್ದರಾ ಎಂದು ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಪ್ರಶ್ನಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮನತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ತಾವು ಶಾಸಕರಾಗುವ ಮೊದಲು ತಮ್ಮ ಆಸ್ತಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿತ್ತು ಎಂದು ಹೇಳಬೇಕು. ಇದು ಓಪನ್ ಚಾಲೆಂಜ್ ಎಂದರು.
ನಮ್ಮ ಪಕ್ಷಕ್ಕೆ ಇರುವ ಮಾಹಿತಿಯ ಪ್ರಕಾರ ಡಿ.ಕೆ.ಶಿವಕುಮಾರ್ ಆರ್ಥಿಕ ಅಪರಾಧ ಮಾಡಿಲ್ಲ. ಅವರ ತಂದೆ ಕಾಲದಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಗ್ರಾನೈಟ್, ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡಿದ್ದಾರೆ. ಅವರು ಮನೆಯಲ್ಲಿ ಸಿಕ್ಕ ಹಣಕ್ಕೆ ಟ್ಯಾಕ್ಸ್ ಕಟ್ಟಿರುವುದಾಗಿ ಹೇಳಿದ್ದರೂ ಅವರ ಸುದೀರ್ಘ ವಿಚಾರಣೆ ಮಾಡಲಾಗುತ್ತಿದೆ. ಇತಿಹಾಸದಲ್ಲಿ ಈ ಮಟ್ಟದಲ್ಲಿ ವಿಚಾರಣೆ ಮಾಡಿಲ್ಲ ಎಂದು ಉಗ್ರಪ್ಪ ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಬಹಳ ಕಳವಳಕಾರಿಯಾಗಿದೆ. ದೇಶದ ಇತಿಹಾಸದಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ನೋಡಿಲ್ಲ. ಜಿಡಿಪಿ, ೫ ಕ್ಕಿಂತ ಕಡಿಮೆಯಾಗಿದೆ. ಡಾಲರ್ ದಾಖಲೆ ಮಟ್ಟದಲ್ಲಿ ಏರುತ್ತಿದೆ. ಬೆಳ್ಳಿ ಬಂಗಾರ ಬೆಲೆ ದಾಖಲೆ ಮಾಡಿದೆ. ಸ್ಟೀಲ್ ಇಂಡಸ್ಟ್ರೀ ಉತ್ಪಾದನೆ ಕಡಿಮೆಯಾಗಿದೆ. ಅಟೊಮೊಬೈಲ್, ಜವಳಿ ಉದ್ಯಮ, ಸಿಮೆಂಟ್, ಬಿಸ್ಕೆಟ್ ಉದ್ಯಮ ಉತ್ಪಾದನೆ ಕಡಿಮೆ ಆಗುತ್ತಿದೆ. ಇದರಿಂದ ಉದ್ಯೋಗ ಕಡಿತ ಆಗುತ್ತಿದೆ. ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ದೇಶದ ಸ್ಥಿತಿ ಕಳವಳಕಾರಿಯಾಗಿದೆ. ಇದಕ್ಕೆ ಬಿಜೆಪಿಯ ತಪ್ಪು ನಿರ್ಣಯಗಳು ಕಾರಣ. ನೋಟು ಅಮಾನ್ಯೀಕರಣ, ಖೋಟಾ ನೋಟು ತಡೆಯುವುದು, ವಿದೇಶದಲ್ಲಿರುವ ಕಪ್ಪು ಹಣ ತರುವುದು, ಭ್ರಷ್ಟಾಚಾರ ನಿಯಂತ್ರಣ ಹಾಗೂ ಭಯೋತ್ಪಾದನೆ ತೆಡೆಯುವುದಾಗಿ ಹೇಳಿದ್ದರು. ಅದ್ಯಾವುದೂ ಕಾರ್ಯ ರೂಪಕ್ಕೆ ಬರಲಿಲ್ಲ ಎಂದು ಕೇಂದ್ರ ಸರಕಾರದ ಮೇಲೆ ಹರಿಹಾಯ್ದರು.
ರಿಸರ್ವ್ ಬ್ಯಾಂಕ್ ನಲ್ಲಿನ 1.72 ಲಕ್ಷ ಕೋಟಿ ಹಣ ಹಣ ಪಡೆದುಕೊಂಡಿದ್ದಾರೆ. ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದ ಜನ ಸಾಮಾನ್ಯರ ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರ ಹೊಣೆ ಬಿಜೆಪಿ ಹೊರಬೇಕು. ಆರ್ಥಿಕ ಪರಿಸ್ಥಿತಿ ಹಿಂಜರಿತ ಮರೆ ಮಾಚಲು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ, ಆರ್ಥಿಕ ತಜ್ಞರ ಸಲಹೆ ಪಡೆದು ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.