Advertisement

ಶಿಕ್ಷಕರಿಗೆ ಯುವಾ ಬ್ರಿಗೇಡ್‌ ಗುರು ಗೌರವ ಕಿಟ್‌ ವಿತರಣೆ

06:30 PM Jun 11, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದ್ದರೂ ಸಂಕಟ ಹೇಳಿಕೊಳ್ಳಲಾಗದೆ-ಇತರರಂತೆ ನೆರವು ಪಡೆಯಲಾಗದೆ ಮನೋವೇದನೆ ಅನುಭವಿಸುತ್ತಿರುವ ರಾಜ್ಯದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಣೆ ಮೂಲಕ ಯುವಾ ಬ್ರಿಗೇಡ್‌ “ಗುರು ಗೌರವ’ ಸಮರ್ಪಣೆ ಸಾರ್ಥಕ ಕಾರ್ಯದಲ್ಲಿ ತೊಡಗಿದೆ.

ತಲಾ ಐದು ಜಿಲ್ಲೆಗಳ ವ್ಯಾಪ್ತಿ ಹೊಂದಿದ ಆರು ವಿಭಾಗಗಳನ್ನಾಗಿ ವಿಂಗಡಿಸಿ ಈ ಕಿಟ್‌ ವಿತರಣೆ ನಡೆದಿದೆ. ನೂರಾರು ಕಾರ್ಯಕರ್ತರು ಕಿಟ್‌ ತಯಾರಿಯಿಂದ ಹಿಡಿದು, ವಿತರಣೆವರೆಗಿನ ಸೇವಾ ಕಾರ್ಯದಲ್ಲಿ ತೊಡಗಿದ್ದು, ಶಿಕ್ಷಕರ ಮಾಹಿತಿ ಪಡೆದು ನೇರವಾಗಿ ಅವರ ಮನೆಗೇ ತೆರಳಿ ಆಹಾರ ಧಾನ್ಯಗಳನ್ನು ತಲುಪಿಸುತ್ತಿದ್ದಾರೆ.

ಉತ್ತರ ಕರ್ನಾಟಕ, ಮಲೆನಾಡು ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ಜಿಲ್ಲೆಗಳು ಅಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ಸುಮಾರು 20 ಜಿಲ್ಲೆಗಳು ಬರುತ್ತಿವೆ. ಉಳಿದಂತೆ ಬೆಂಗಳೂರು, ಮೈಸೂರು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸುಮಾರು 11-12 ಸಾವಿರ ಆಹಾರಧಾನ್ಯಗಳ ಕಿಟ್‌ಗಳನ್ನು ಶಿಕ್ಷಕರ ಮನೆಗಳಿಗೆ ತಲುಪಿಸಲಾಗಿದೆ. ಬೆಂಗಳೂರಿನಲ್ಲಿ ಕೇವಲ 200ರಿಂದ ಆರಂಭವಾದ “ಗುರು ಗೌರವ’ ಅಭಿಯಾನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಿದೆ. ದೂರವಾಣಿಗೆ ಸಂಪರ್ಕಕ್ಕೆ ಸೂಚಿಸಿದ ನಂತರದಲ್ಲಿ ಒಂದೇ ದಿನ ಎರಡು ಸಾವಿರಕ್ಕೂ ಅ ಧಿಕ ಕರೆ ಬಂದಿದೆ. ಒಟ್ಟಾರೆ 12-14 ಸಾವಿರದಷ್ಟು ಕರೆಗಳು ಬಂದಿದ್ದು, ಅದರಲ್ಲಿ ಅತ್ಯವಶ್ಯಕವಾಗಿದ್ದವರನ್ನು ಗುರುತಿಸಿ ಆಹಾರಧಾನ್ಯಗಳ ಕಿಟ್‌ ನೀಡಲಾಗಿದೆ.

ಆಹಾರ ಧಾನ್ಯಗಳ ಕಿಟ್‌ಗಳ ವಿತರಣೆಗೆ ಜಿಲ್ಲೆ ಹಾಗೂ ತಾಲೂಕುವಾರು ಕಾರ್ಯಕರ್ತರನ್ನು ನಿಗದಿಪಡಿಸಲಾಗಿದ್ದು, ಸಣ್ಣ ಜಿಲ್ಲೆ ಗದಗದಲ್ಲಿ ಏಳು ಜನ ಕಾರ್ಯಕರ್ತರಿದ್ದರೆ, ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಸುಮಾರು 46 ಜನ ಕಾರ್ಯಕರ್ತರಿದ್ದಾರೆ. ಒಂದು ಜಿಲ್ಲೆಗೆ ಸರಾಸರಿ 20ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Advertisement

ಹುಬ್ಬಳ್ಳಿ ಕೇಂದ್ರ: ಉತ್ತರ ಕರ್ನಾಟಕದ ಜಿಲ್ಲೆಗಳ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ತಯಾರಿಸಲು ಹಾಗೂ ಸಾಗಣೆಗೆ ಅನುಕೂಲವಾಗುವಂತೆ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೇ ಕಿಟ್‌ಗಳನ್ನು ಸಿದ್ಧ ಪಡಿಸಲಾಗುತ್ತಿದೆ. ಸುಮಾರು 55 ಜನ ಕಾರ್ಯಕರ್ತರು ಕಿಟ್‌ಗಳನ್ನು ತಯಾರಿಸಿದ್ದಾರೆ.

ಒಂದು ಕಿಟ್‌ 10 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ, 2 ಕೆಜಿ ಬೇಳೆ, 2 ಕೆಜಿ ರವೆ, 2 ಕೆಜಿ ಗೋದಿ  ಹಿಟ್ಟು, ಒಂದು ಲೀಟರ್‌ ಅಡುಗೆ ಎಣ್ಣೆ ಹೊಂದಿದ್ದು, ಒಬ್ಬ ಶಿಕ್ಷಕರ ಕುಟುಂಬಕ್ಕೆ ಒಂದು ತಿಂಗಳಿಗೆ ಸಾಕಾಗುವ ಲೆಕ್ಕಾಚಾರದಲ್ಲಿ ತಯಾರಿಸಲಾಗಿದೆ. ಇನ್ನೊಂದೆಡೆ ಈ ಕಿಟ್‌ ನೀಡುವ ವೇಳೆ ಕೋವಿಡ್‌ ಮೂರನೇ ಅಲೆ ಬಗ್ಗೆ ತಮ್ಮ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಲಾಗುತ್ತಿದೆ. ಮಕ್ಕಳಿಗೆ ಯೋಗ, ವ್ಯಾಯಾಮ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ, ತರಬೇತಿ ನೀಡುವ ಕಾರ್ಯ ಮಾಡಬೇಕೆಂದೂ ಕೋರಲಾಗುತ್ತಿದ್ದು; ಇದಕ್ಕೆ ಅನೇಕ ಶಿಕ್ಷಕರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next