ಮನೋವಿಜ್ಞಾನದಲ್ಲಿ “ಇದ್, ಇಗೋ, ಸೂಪರ್ ಇಗೋ’ ಮನುಷ್ಯನ ಅಹಂಕಾರವನ್ನು ಈ ಮೂರು ವಿಧದಲ್ಲಿ ವಿವರಿಸಿದ್ದಾರೆ. ಮನೋವಿಜ್ಞಾನಿಗಳು ಮನುಷ್ಯನ ಗುಣ, ಅಹಂ, ಸ್ವಭಾವ ಅವನ ಆಲೋಚನೆಗಳಿಂದ ಬರುವಂತಹದ್ದೆ ಹೊರತು ಯಾರೋ ಹೇಳಿ ಕೊಟ್ಟು ಬರುವಂತಹದ್ದಲ್ಲ ಅನ್ನೋ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ “ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೂ’ ಎನ್ನುವ ಗಾದೆಯೂ ಇದೆ. ಮನುಷ್ಯರನ್ನು ನೋಡಿದಾಗ ಇದೆಲ್ಲಾ ಸತ್ಯ ಎಂದನಿಸುತ್ತದೆ.
ಎಲ್ಲರೂ “ಮಗು ನೋಡಿ ಕಲಿಯುತ್ತೆ’ ಎಂದು ಹೇಳುತ್ತಾರೆ. ಅದು ಸತ್ಯವೇ ಇರಬಹುದು. ಆದರೆ ಅದು ಬುದ್ಧಿ ಬರುವವರೆಗೆ ಮಾತ್ರ. ಮಗುವಿಗೆ ಬುದ್ಧಿ ಬಂದು ಅದು ಸ್ವಂತವಾಗಿ ಯೋಚಿಸೋಕೆ ಪ್ರಾರಂಭಿಸಿದಂತೆ ಗುಣಗಳು, ಸ್ವಭಾವಗಳು ಹೀಗೆ ಒಂದೊಂದನ್ನೇ ಕಲಿಯುತ್ತಾ ಹೋಗುತ್ತದೆ. ಇದನ್ನು ತಂದೆ-ತಾಯಿಯರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. “ನಾವು ಹೇಳಿದ ಹಾಗೆಯೇ ಕೇಳಬೇಕು’ ಎನ್ನುವ ಮಾತು ಒಂದು ಕಡೆಯಾದರೆ, ನಾವು ಹೇಳಿದ ಹಾಗೆ ಮಕ್ಕಳು ಕೇಳ್ಳೋದೇ ಇಲ್ಲ’ ಎನ್ನುವುದು ಇನ್ನೊಂದು. ಆದರೆ “ನಿನ್ನ ಆಲೋಚನೆ ಏನು ಅಂತ ಕೇಳುವ ತಂದೆ-ತಾಯಂದಿರು ಅಪರೂಪದಲ್ಲಿ ಅಪರೂಪ.
ಮಕ್ಕಳ ಯೋಚನಾಲಹರಿ ಯಾವ ರೀತಿ ಇರುತ್ತದೆ ಎಂದು ತಂದೆ-ತಾಯಿಯರಿಗೆ ಗೊತ್ತಿರುವುದಿಲ್ಲ . ಬುದ್ಧಿ ಬಂದ ಮೇಲೂ ಕೂಡ ಅವರು ಇನ್ನೊಬ್ಬರನ್ನು ನೋಡಿ ಕಲಿಯುತ್ತಾ ಅವರಂತೆಯೇ ಮಾಡುವವರು ಇದ್ದಾರೆ. ಅವರೆಲ್ಲಾ ಇಪ್ಪತ್ತು – ಇಪ್ಪತ್ತರೆಡು ವಯಸ್ಸಿನವರೇ ಆಗಿರುತ್ತಾರೆ ಹೊರತು ಚಿಕ್ಕ ಮಕ್ಕಳಲ್ಲ.
ಆರೇಳು ವರ್ಷದವರಾಗಿದ್ದರೆ ಬುದ್ಧಿ ಕಡಿಮೆ ಎಂದು ಹೇಳಬಹುದು. ಬೆಳೆಯುತ್ತ ಬೆಳೆಯುತ್ತ ಸ್ವಂತವಾಗಿ ಯೋಚಿಸುವವರು ಕಡಿಮೆ ಎನ್ನಬಹುದು, ಯಾರೋ ಹೇಳಿದ ಮಾತು ಕೇಳಿಕೊಂಡು ಮನೆ ಹಾಳುಮಾಡಿಕೊಂಡವರು ನಮ್ಮ ನಡುವೆಯೇ ಇರುತ್ತಾರೆ.
ಹಾಗಾಗಿ ನಮ್ಮ ಬುದ್ಧಿ ನಮ್ಮ ಕೈಯಲ್ಲಿದ್ದಾಗ ಯಾರದೇ ಮಾತು ಕೇಳುವ ಮುಂಚೆ ಅವರ ಮಾತಲ್ಲಿ ಸತ್ಯ ಇದೆಯೇ ಅಂತ ಸ್ವಲ್ಪ ಮೌನವಾಗಿ ಯೋಚಿಸಿದರೆ ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ ಎಂದನ್ನಿಸದೆ ಇರಲ್ಲ.
ಭೂಮಿಕಾ
ತುರಗನೂರು