Advertisement

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

12:46 PM May 02, 2024 | Team Udayavani |

ಶಾಲಾ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕಲು ಯಾರಿಗೆ ಇಷ್ಟವಿಲ್ಲ ಹೇಳಿ? ಸಾಗರದಲ್ಲಿ ದೊರಕುವ ಮುತ್ತಿನಂತಹ ಸವಿ ನೆನಪುಗಳ ಭಂಡಾರ ಎಂದೂ ಖಾಲಿಯಾಗದು. ನನ್ನ ಶಾಲಾ ದಿನಗಳ ಒಂದೊಳ್ಳೆ ಘಟನೆಯ ಬಗ್ಗೆ ನಿಮಗೆಲ್ಲಾ ಹೇಳೊ ಇಷ್ಟಪಡುತ್ತೇನೆ.

Advertisement

ಎಲ್ಲ ಶಾಲೆಗಳಂತೆಯೇ, ನಮ್ಮ ಶಾಲೆಯಲ್ಲಿ ಕೂಡ ತುಂಬಾ ಸ್ಪರ್ಧೆಗಳು, ಚಟುವಟಿಕೆಗಳು ನಮಗಾಗಿ ನಡೆಸಲಾಗುತಿತ್ತು. ಅದರಲ್ಲೆಲ್ಲಾ ಭಾಗವಹಿಸುವ ಹುಮ್ಮಸ್ಸು ನನಗೆ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವುದು ಎಂದರೆ ನನಗೆ ಬಹಳ ಇಷ್ಟ. ಅಂದು, ಅನಾಥ ಬದುಕು ಎಂಬ ವಿಷಯದ ಮೇಲೆ ನಾನು ಮಾಡಿದ ಭಾಷಣ ಎಲ್ಲರ ಮನ ಮುಟ್ಟಿತ್ತು. ಏನು ಅಂತ ನಿಮಗೂ ಕುತೂಹಲ ಇದೆ ಅಲ್ವಾ?

ನನ್ನ ಹೆಸರು ಪ್ರೀತಮ್‌ ಅಂತ. ಚಿಕ್ಕಂದಿನಿಂದ ಅನಾಥಾಶ್ರಮದಲ್ಲಿ ಬೆಳೆದ ನನಗೆ, ತಂದೆ ತಾಯಿಯ ಪ್ರೀತಿ-ವಾತ್ಸಲ್ಯ, ಅಕ್ಕ-ತಂಗಿ, ಅಣ್ಣ-ತಮ್ಮಂದಿರ ಕಾಳಜಿ, ಮನೆಯವರ ಬೆಂಬಲ ಮತ್ತು ಸಹಕಾರ ಯಾವತ್ತೂ ಸಿಕ್ಕಿರಲಿಲ್ಲ. ಅಪ್ಪ ಅಮ್ಮನನ್ನು ಕಳೆದುಕೊಂಡ ನಂತರ, ನನಗೆ ಆಸರೆ ಆದದ್ದೇ ಈ ಅನಾಥಾಶ್ರಮ. ನನ್ನೊಂದಿಗೆ ಅದೆಷ್ಟೋ ಮಕ್ಕಳು ನನ್ನಂತೆಯೇ ಇಲ್ಲಿ ಇದ್ದು, ನಾವೆಲ್ಲರೂ ಒಟ್ಟಿಗೆ ಹತ್ತಿರದ ಒಂದು ಶಾಲೆಗೆ ಹೋಗುತ್ತೇವೆ. ಶಾಲೆಯಲ್ಲಿ ಒಬ್ಬರನ್ನೊಬ್ಬರು ನೋಡಿ, ಕೇಳಿ ಕಲಿಯುತ್ತಿದ್ದ ವಿಷಯಗಳು ಬಹಳಷ್ಟಿತ್ತು.

ಅವರನ್ನೆಲ್ಲ ನೋಡಿದಾಗ ನನಗೆ ಬೇಸರ ಆಗುತ್ತಿತ್ತು. ಅವರೆಲ್ಲರೂ ಸಣ್ಣ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ತಾಯಿ ಒಟ್ಟಿಗೆ ಇನ್ನು ಕೆಲವರು ಅಪ್ಪ ಅಮ್ಮನಿಂದ ದೂರ, ಅಂದರೆ ಹಾಸ್ಟೆಲ್ನಲ್ಲಿ ಓದುತ್ತಿದ್ದವರು. ಆದರೆ ಅವರಿಗೆ ಅಪ್ಪ ಅಮ್ಮನ ಪ್ರೀತಿ ಇದ್ಯಲ್ಲಾ ನನಗದಿಲ್ವಲ್ಲಾ ಅನ್ನೋ ಬೇಸರ.

ಆದರೆ ದೊಡ್ಡ ದೊಡ್ಡ ನಗರಗಳಲ್ಲಿ ಬೆಳೆದವರಿಗಂತೂ, ತಮ್ಮ ತಂದೆ ತಾಯಿ, ಕುಟುಂಬದವರ ಜತೆ ಮಾತ್ರವಲ್ಲದೆ, ಅಕ್ಕ ಪಕ್ಕದ ಮನೆಯವರ ಗುರುತಿಲ್ಲದೆ, ತಮ್ಮದೇ ಪ್ರಪಂಚದಲ್ಲಿ ಯಾರ ಗೊಡವೆಯೂ ಇಲ್ಲದೇ ಬದುಕ್ತಾ ಇರೋದನ್ನ ನೋಡ್ದೆ. ಅಪ್ಪ ಅಮ್ಮ ಕೆಲಸಕ್ಕೆ ಹೋಗುವಾಗ ಮಕ್ಕಳಿಗೆ ಟಿ.ವಿ, ಮೊಬೈಲ್‌ ಅನ್ನು ಟೈಂ ಪಾಸ್‌ ಗೆ ನೀಡೋದನ್ನ ಕೇಳಿ ಅಚ್ಚರಿಗೊಂಡೆ.

Advertisement

ಈ ವರ್ಚುವಲ್‌ ಪ್ರಪಂಚದಲ್ಲಿ ಬದುಕನ್ನು ಆಸ್ವಾದಿಸುವ ಕಲೆಯನ್ನು ಮರೆತ ನಾವು, ಈ ನೆಲ- ಜಲ, ಗಿಡ – ಮರ, ಪ್ರಾಣಿ – ಪಕ್ಷಿಗಳು, ಮನುಷ್ಯನ ಪರಿಚಯವನ್ನೇ ಮರೆತಂತಾಗಿದೆ. ಅಲ್ಲವೆ?

ಇನ್ಸ್ಟಾಗ್ರಾಮ್, ಫೇ‌ಸ್ಬುಕ್‌ ಹೀಗೆ ಹತ್ತು ಹಲವು ಸಾಮಾಜಿಕ ಜಾಲತಾಣಗಳಲ್ಲಿ, ನೂರಾರು, ಸಾವಿರಾರು ಅಪರಿಚಿತ ಸ್ನೇಹಿತರೊಂದಿಗೆ ಮಾತನಾಡಲು ನಮಗೆ ಸಮಯವಿದೆ. ಆದರೇ ನಮ್ಮ ನಡುವಿರುವ ನಿಜವಾದ ಸಂಬಂಧಗಳಿಗೆ ಬೆಲೆ ಕೊಡುವಷ್ಟು ಸಮಯ ಇಲ್ಲದೇ ಹೋಗಿದೆ. ಈಗ ನನಗೆ ಕಾಡುವ ಒಂದು ಪ್ರಶ್ನೆ ಏನೆಂದರೆ ಅನಾಥರು ಯಾರಿರಬಹುದು?

ಇದನೆಲ್ಲ ನೋಡಿ ನನಗೆ ಅನಾಥ ಪದದ ನಿಜವಾದ ಅರ್ಥ ತಿಳಿಯಿತು. ನಾನು ಅನಾಥಾಶ್ರಮದಲ್ಲಿ ಹುಟ್ಟಿ ಬೆಳೆದರೂ, ನಿಜವಾದ ಅನಾಥರು ಯಾರು ಗೊತ್ತಾ? ಎಲ್ಲದೂ ಇದ್ದು, ಎಲ್ಲರೊಂದಿಗೆ ಇದ್ದು ಸಹ ಒಬ್ಬಂಟಿ ಆಗಿ ಇರುವವನೇ ನಿಜವಾದ ಅನಾಥ.

ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಾ ಇರುವಾಗ ಬದಲಾವಣೆಗಳು ಸಹಜ. ಆದರೆ ಭಾರತ, ನಂಬಿಕೆಯ ಬುನಾದಿಯ ಅಡಿಯಲ್ಲಿ ಬೆಳೆದು ಬಂದ, ಅತ್ಯಂತ ಸುಸಂಸ್ಕೃತವಾದ, ಶ್ರೀಮಂತ ರಾಷ್ಟ್ರ.

ಎಷ್ಟೇ ದಾಪುಗಾಲು ಹಾಕಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತ, ನಾವು ಮುಂದೆ ಸಾಗಿದರೂ, ನಮ್ಮ ತನವನ್ನು ಬಿಟ್ಟು, ಸಂಬಂಧ, ಭಾವನೆಗಳಿಗೆ, ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿಗೆ ಗೌರವ ಕೊಡದೇ ಇರುವಾಗ ಇದೆಲ್ಲಾ ಶೂನ್ಯಕ್ಕೆ ಸಮಾನವಲ್ಲವೇ? ಒಂದು ಸಮಾಜದ ಅಡಿಪಾಯ ಕೂಡು ಕುಟುಂಬದ ಮೇಲೆ ನಿಂತಿದೆ ಅಂದ್ರೆ ನೀವು ನಂಬುವಿರಾ? ಎಷ್ಟೆಲ್ಲಾ ಕಲಿತು, ಎಲ್ಲ ಗೊತ್ತಿದ್ದು ಮೂಢರಂತೆ ವರ್ತಿಸುವ ನಮಗೆ ಏನೆಂದು ಹೇಳಬೇಕು? ನಾವು ಎತ್ತಕಡೆ ಸಾಗುತ್ತಿದ್ದೇವೆ, ಅದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನಾವೆಲ್ಲಾ ಇಂದು ಯೋಚಿಸಲೇಬೇಕಾಗಿದೆ.

ಈಗ ಹೇಳಿ ಯಾರು ಅನಾಥರು? ಈಗ ಹೇಳಿ ನಿಜವಾದ ಅನಾಥ ನಾನಾ? ಅವರಾ?

ಯಜುಷಾ

ಸಂತ ಆ್ಯಗ್ನೆಸ್‌ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next