Advertisement

UV Fuision: ಇರುವುದೆಲ್ಲವ ಬಿಟ್ಟು..!

03:07 PM Sep 15, 2024 | Team Udayavani |

ಬದುಕು ಎಂದರೆ ಹೀಗೆ ಎಂದು ಹೇಳುವುದು ಎಷ್ಟು ಕಷ್ಟವೋ ಬದುಕಿನಲ್ಲಿ ಏನು ಬೇಕು ಎಂದು ಹೇಳುವುದು ಕೂಡ ಅಷ್ಟೇ ಕಷ್ಟ. ಮನುಷ್ಯನ ಆಸೆಗಳಿಗೆ ಎಂದೂ ಮಿತಿ ಇಲ್ಲ. ಒಬ್ಬನಿಗೆ ಹೊತ್ತು ಊಟದ ಚಿಂತೆಯಾದರೆ ಮತ್ತೂಬ್ಬನಿಗೆ ಹೊತ್ತು ಕಳೆಯುವ ಚಿಂತೆಯಾಗಿರುತ್ತದೆ ಬಡವ ಶ್ರೀಮಂತನನ್ನು ನೋಡಿ ಇದ್ದರೆ ಆತನಂತೆ ಇರಬೇಕು ಎಂದುಕೊಂಡರೆ ಶ್ರೀಮಂತನಿಗೆ ಅದೇ ಶ್ರೀಮಂತಿಕೆಯ ಬದುಕು ಬೇಸರ ಹಿಡಿಸುತ್ತದೆ. ಯಾರಿಗೆ ಗೊತ್ತು ಕೆಲವೊಮ್ಮೆ ಹಣ, ಜಮೀನು, ಐಶಾರಾಮಿ ಬದುಕು ನಡೆಸುತ್ತಿರುವನಿಗೆ ಇಲ್ಲದ ಖುಷಿ ನೆಮ್ಮದಿ ಹರಕು ಗುಡಿಸಿಲಿನಲ್ಲಿ ಮುದ್ದೆ ಉಣ್ಣುವ ಬಡವನಿಗಿರಬಹುದು. ಆದರೆ ನಮ್ಮಲ್ಲಿನ ವಸ್ತುಗಳಿಗಿಂತ ನಮಗೆ ಯಾವಾಗಲೂ ಪರರ ವಸ್ತುಗಳೇ ಸುಂದರದಂತೆ ತೋರುತ್ತಿರುತ್ತದೆ. ಪರರ ಸುಖ ನೆಮ್ಮದಿಯೆ ಚಂದ ಅನಿಸುತ್ತಿರುತ್ತದೆ.

Advertisement

ಲೋಕದ ಕಷ್ಟ ಸುಖಗಳು ಯಾವ ಮನುಷ್ಯನನ್ನು ಬಿಟ್ಟಿಲ್ಲ. ವಿಧಿಯ ಆಟಕ್ಕೆ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಶರಣಾದವರೇ.ಆದರೆ ಶ್ರೇಷ್ಠ, ಕನಿಷ್ಠ ಎಂಬ ತರ್ಕಗಳು ಮನುಷ್ಯನನ್ನು ತನ್ನ ಬಳಿ ಇಲ್ಲದ ವಸ್ತುಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಎಷ್ಟೋ ಭಾರಿ ದ್ವೇಷ, ಅಸೂಯೆ, ಮೌನ, ಕೋಪ ತಾಪಗಳು ನಮ್ಮಿಂದ ನಮ್ಮನ್ನೇ ಬಹು ದೂರ ಸರಿಸಿ ಈ ಕ್ಷಣದ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ಅನುಭವಿಸದೇ ಇರುವಂತೆ ನಮ್ಮನ್ನು ಕಟ್ಟಿ ಹಾಕುತ್ತದೆ. ಎಷ್ಟೋ ಭಾರಿ ಬದುಕಿನ ಸುಂದರ ಕ್ಷಣಗಳನ್ನು ಕಟ್ಟಬೇಕಾದ ನಾವು ಯಾವುದೋ ಅತಿಯ ಚಿಂತೆಯಲ್ಲಿ ಮುಳುಗಿ ಅಮೂಲ್ಯ ಕ್ಷಣಗಳನ್ನೆಲ್ಲ ಹಾಳು ಮಾಡಿಕೊಂಡಿರುತ್ತೇವೆ.

ಈಗಿನ ಕಾಲದಲ್ಲಂತೂ ಬಹಳಷ್ಟು ಜನ  ಮಾನಸಿಕ  ಖನ್ನತೆಗೆ ಒಳಗಾಗಿ ಒಳಗೊಳಗೇ ನರಳುತ್ತಿರುತ್ತಾರೆ.ಕಡ್ಡಿಯಿಂದ ಹೋಗುವ ಕೆಲಸಕ್ಕೆ ಗುಡ್ಡದಷ್ಟು ಚಿಂತಿಸುತ್ತಿರುತ್ತಾರೆ. ಯಾರದೋ ಒಟ್ಟಿಗಿನ ಜಗಳವೋ, ಮನಸ್ತಾಪವೋ, ಅನುಮಾನವೋ, ಅಸಮಾಧಾನವೋ ಮನುಷ್ಯನ ಆಲೋಚನೆಗಳನ್ನು ನಿಯಂತ್ರಿಸಿಕೊಳ್ಳದಷ್ಟರ ಮಟ್ಟಿಗೆ ದುರ್ಬಲರನ್ನಾಗಿಸಿ ಬಿಡುತ್ತದೆ. ಆದರೆ ಆ ಕ್ಷಣದಲ್ಲಿ ಒಳಗೊಳಗೇ ಮರುಗಿ ದುಃಖ ಪಡುವ ಬದಲು ಒಂದು ಕ್ಷಣ ಮನಸು ಬಿಚ್ಚಿ ಮಾತಾಡಿದರೆ ಅಂದಿಗೆ ಕಳಚಿ ಹೋಗಬೇಕಿದ್ದ ಎಷ್ಟೋ ಸಂಬಂಧಗಳು ಮತ್ತೆ ಜತೆಗೂಡುತ್ತದೆ. ಸುಮ್ಮನೆ ಇಲ್ಲ ಸಲ್ಲದ ಆಲೋಚನೆಗಳಿಗೆ ಇರುವುದೆಲ್ಲವ ಬಿಟ್ಟು ಚಿಂತಿಸುತ್ತ ಕೂರುವ ಸಮಯ ಮುಗಿದು ಹೋಗುತ್ತದೆ.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುರೇಕೋ ವಿಶಿಷ್ಯತೇ ಚಿತಾ ದಹತಿ ನಿರ್ಜೀವಂ ಚಿಂತಾ ತು ಸಜೀವಕಂ ಎನ್ನುತ್ತಾರೆ. ಅಂದರೆ ಚಿಂತೆಗು ಚಿತೆಗು ಒಂದು ಸೊನ್ನೆಯಷ್ಟೇ ವ್ಯತ್ಯಾಸ ಆದರೆ ಚಿತೆ ಶವವನ್ನು ಸುಟ್ಟರೆ ಚಿಂತೆ ಜೀವಂತ ದೇಹವನ್ನು ಸುಡುತ್ತದೆ. ಕಾಲ ಸರಿದಂತೆ ನಮ್ಮ ಬದುಕಿನಲ್ಲಿ ಬರುವ ಜನಗಳು ಬರುತ್ತಾರೆ, ಬದಲಾಗುತ್ತಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ಅಭಿರುಚಿಗಳು ಬದಲಾಗುತ್ತವೆ.ಇದು ನಮ್ಮೆಲ್ಲರ ಸ್ವಾಭಾವಿಕ ಗುಣ.ಜೀವನದಲ್ಲಿ ಹಣಕ್ಕಿಂತ ಗುಣ ಮೇಲು ಎಂದು ಈ ಕ್ಷಣ ನಾವು ಹೇಳಿದರೆ ಅರೆ ಗಳಿಗೆ ಬಿಟ್ಟು “ದುಡ್ಡೇ ದೊಡ್ಡಪ್ಪ’ಎಂದರೂ ಎನ್ನಬಹುದು. ಶ್ರೀಮಂತನ ಕಾರಿನ ಮೇಲೆ ಬಾರದ ಆಕರ್ಷಣೆ ಬಡವ ಮಾರುವ ಬಲೂನಿನ ಮೇಲೆ ಸುಳಿಯಬಹುದು.ಎಲ್ಲವೂ ಅವರವರ ಸನ್ನಿವೇಶ ಹಾಗೂ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು.ಆದರೆ ಕಾರಿನ ಮೋಹಕ್ಕೆ ಸಿಲುಕಿದಾಗ ಬಲೂನು ಕೊಡುವ ಸಣ್ಣ ಖುಷಿಯನ್ನು ಮರೆಯಬಾರದು.

ಬದುಕನ್ನು ಸುಂದರಗೊಳಿಸುವುದು ಎಂದರೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು. ನಮಗೆ ಯಾವುದೋ ಒಂದು ವಿಷಯದಲ್ಲಿ ಸಂತೋಷ ಸಿಗುತ್ತದೆ ಎಂದರೆ ಇನ್ನೊಬ್ಬರ ಮಾತಿಗೆ ತಲೆ ಕೊಡದೇ ಅದನ್ನು ಒಪ್ಪಿಕೊಳ್ಳುವುದು. ಗಂಧ ತೇದಷ್ಟು ಪರಿಮಳವೇ. ಹಾಗೆ ನಮ್ಮದು ನಮ್ಮವರು ಎನ್ನುವವರು ನಮ್ಮ ಜೊತೆಗಿದ್ದಷ್ಟು ಸಂತೋಷವೇ.ಆಡಂಬರದ ಬದುಕು ಖುಷಿ ಕೊಡಬಹುದಷ್ಟೇ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಇದ್ದುದ್ದನ್ನು ಉಳಿಸಿಕೊಳ್ಳುವ, ಜೋಪಾನವಾಗಿಸುವ ಜಾಣ್ಮೆ ನಮ್ಮಲ್ಲಿರಬೇಕು.ಏಕೆಂದರೆ ಇಂದು ನಾವು ಬದುಕುತ್ತಿರುವ ಬದುಕು ಅದೆಷ್ಟೋ ಜನರ ಕನಸಾಗಿರುತ್ತದೆ.ಇರುವುದೆಲ್ಲವ ಬಿಟ್ಟು ಇರದೇ ಇರುವುದಕ್ಕೆ ತುಡಿಯುವುದು ಕೇವಲ ಬದುಕು ಅಷ್ಟೇ. ಸಾರ್ಥಕತೆ ಅಲ್ಲ.

Advertisement

-ಶಿಲ್ಪಾ ಪೂಜಾರಿ

ಎಂ.ಎಂ., ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.