Advertisement

UV Fusion: ಕಳಿಯಾಟಂ – ದೈವಗಳ ಆಂತರಿಕ ಶಕ್ತಿ ರೂಪ

03:53 PM Nov 30, 2024 | Team Udayavani |

ಉತ್ತರ ಕೇರಳ ಭಾಗವನ್ನು ಮಲಬಾರ್‌ ಭಾಗವೆಂದು  ಕರೆಯುತ್ತಾರೆ. ಇಲ್ಲಿನ ಆಚಾರ ವಿಚಾರ ಭಾಷಾ ವೈವಿಧ್ಯತೆ ಭ್ರಾತೃತ್ವ ಸುಮಧುರತೆ ವೈಶಿಷ್ಟವಾಗಿದೆ. ಕಲೆಗಳ ಬೀಡು ಸಪ್ತ ಭಾಷೆ ಸಂಗಮ ಗೂಡು ಕಾಸರಗೋಡು ಕೂಡ ಈ ಮಲಬಾರ್‌ ಭಾಗದಲ್ಲಿ ಬರುತ್ತದೆ. ಇಲ್ಲಿನ ಆಚಾರ ವಿಚಾರಗಳನ್ನು ನಿಮ್ಮ ಜತೆ ಒಂದಿಷ್ಟು ಹಂಚಿಕೊಳ್ಳಲು ಬಯಸುತ್ತಿದ್ದೇನೆ.

Advertisement

ಶಕ್ತಿ ಚೈತನ್ಯಗಳ ಆರಾಧನೆ, ಭಕ್ತಿ ಸತ್ಯಕ್ಕೆ ಶ್ರದ್ಧೆಗೆ ನೀಡುವ ಹೊಸ ಕಲ್ಪನೆ ದಶಕಗಳ ಹಿಂದೆ ಮರೆಯಾದ ಸತ್ಯ ಕಥೆಗಳನ್ನು ಸತ್ಯದರ್ಶನ ಮಾಡಿಸಿ  ಕಾರ್ಣಿಕ ಶಕ್ತಿಯನ್ನು ಮೆರೆದು ಭಕ್ತಗಣ ಭಾವನೆ ಒಳಗೆ ತಾನು ಶಾಶ್ವತವಾಗಿ ನೆಲೆಸುವಂತೆ ಮಾಡುವ ಸುಮಧುರ ಕ್ಷಣಗಳಿಗೆ ಸಾಕ್ಷಿ ಈ ದೈವರಾಧನೆ.

ಹೌದು, ಮಲಬಾರ್‌  ಭಾಗದವನೇ ಆದ ನನಗೂ ಈ ದೈವ ಕೋಲಗಳನ್ನು ವರ್ಷಕೊಮ್ಮೆ ಸಮೀಪದ ದೇವಾಲಯಗಳಲ್ಲಿ ನೋಡುವ ಸೌಭಾಗ್ಯ ಸಿಗುತ್ತದೆ. ಕೊರೆಯುವ ಚಳಿ ಇದ್ದರೂ, ತಲೆ ಕರಗಿಸುವಂತಹ ಬಿಸಿಲಿದ್ದರೂ, ಮನ ಹೆದರಿಸುವಂತಹ ಬಿರುಗಾಳಿ ಮಳೆ ಇದ್ದರೂ ಸಹ ದೈವಾರಾಧನೆಯನ್ನು ನೋಡಲೆಂದು ಹೋಗುತ್ತಿದ್ದೆ. ತಡರಾತ್ರಿಯಲ್ಲಿ ದೈವಾರಾಧನೆ ವೀಕ್ಷಿಸುವುದೆಂದರೆ  ಏನೋ ಒಂಥರಾ  ಧನಾತ್ಮಕ ಶಕ್ತಿ ಬಾಳನ್ನು ಬೆಳಗಿದಂತಾಗುತ್ತದೆ. ಚಿಕ್ಕ ಪ್ರಾಯದಲ್ಲಿ ಚಂಡೆಯ ನಾದವು ಕಿವಿಗಳಿಗೆ ಕೇಳಿದರೆ ಸಾಕು ಅತ್ತ ಕಡೆ ಹೋಗುವ ಮನಸ್ಸು ನನಗಾಗುತ್ತಿತ್ತು. ಹಾಗೇ ಹೋಗುತ್ತಿದ್ದೆ ಕೂಡ.

ತುಲಾ ಹತ್ತರ ಅನಂತರದ ದಿನಗಳಲ್ಲಿ ನಾನಾ ತರವಾಡುಗಳಲ್ಲಿ ದೈವಗಳನ್ನು ಕಟ್ಟಿ ಆಡಿಸುವ ಸಂಪ್ರದಾಯವಿದೆ. ಅದನ್ನು ದೈವ ಕಟ್ಟೆಂದು, ಕಳಿಯಾಟ್ಟಂವೆಂದು, ಪೆರುಂಕಳಿಯಾಟವೆಂದು ಕರೆಯುವುದು ರೂಢಿಯಲ್ಲಿದೆ. ಆಯಾ ದೇವಾಲಯಕ್ಕೆ ತಕ್ಕಂತೆ ಈ ಮೇಲ್ಕಂಡ ಉತ್ಸವ ಆಚರಣೆಗಳು ನಡೆಯುತ್ತದೆ. ಆ ತರವಾಡಿನ ಕುಲದೇವರ ಆರಾಧನೆ ಜತೆ ಪರ್ಯಾಯ ಶಕ್ತಿ ದೈವಗಳ ಆರಾಧನೆಯು ನಡೆಯುತ್ತದೆ. ದೈವ ಕಟ್ಟುವ ಸಮುದಾಯಗಳು ಈ ಕೋಲವನ್ನು ಕಟ್ಟಿ ಆಡುತ್ತಾರೆ. ಈ ಮಲಬಾರ್‌ ಭಾಗದಲ್ಲಿ ಮಲಯ, ವನ್ನಾನ್‌, ಕೋಪಾಳರು  ಕೋಲಧಾರಿಗಳಾಗಿರುತ್ತಾರೆ. ಈ ಸಮುದಾಯದ ಜನರು ದೈವ ನರ್ತನ ಸೇವೆ ಮಾಡುತ್ತಾರೆ.

ಆಯಾ ದೈವಗಳ ಐತಿಹ್ಯ  ಬಹು ರೋಚಕವಾಗಿರುತ್ತದೆ. ಅವುಗಳ ಮುಖ ವರ್ಣಿಕೆ, ವೇಷಭೂಷಣ, ತೊಟ್ಟಂಪಾಟ್‌, ಬಣ್ಣ ವ್ಯತ್ಯಾಸವಾಗಿರುತ್ತದೆ. ತೊಟ್ಟಂಪಾಟ್‌ ಮಲಯಾಳಂ ಭಾಷೆಯಲ್ಲಿ ಇರುತ್ತದೆ. ಇದು ತುಳುವಿನ ಪಾಡ್ದಾನದ ರೀತಿ. ಅದರಲ್ಲಿ ದೈವಗಳ ಐತಿಹ್ಯ ಕಥೆಗಳು ಅಂದರೆ ಹುಟ್ಟು, ಬೆಳವಣಿಗೆ, ಶಕ್ತಿ ಚೈತನ್ಯವಾಗಿ ಬೆಳೆದ ಬಗ್ಗೆ ವಿಚಾರಗಳು ಅಡಕವಾಗಿರುತ್ತದೆ.  ಈ ತೊಟ್ಟಂಪಾಟ್‌ ಅನ್ನು ಹೇಳಿದ ಬಳಿಕ ದೈವಕ್ಕೆ ಶಕ್ತಿಯ ಪರಕಾಯ ಪ್ರವೇಶವಾಗುತ್ತದೆ. ಈ ಸಮಯದಲ್ಲಿ ಬಹಳ ಆವೇಶದಿಂದ ದೈವ ನರ್ತಿಸುತ್ತದೆ. ಇದನ್ನು ಹಿರಿಯರು ಮೂರು ಮುಕ್ಕಾಲು ಗಳಿಗೆ ಎಂದು ಕರೆಯುತ್ತಾರೆ. ಈ ಕ್ಷಣದಲ್ಲಿ ಚೆಂಡೆ ತಾಳಗಳ ಸದ್ದು ಜೋರಾಗಿಯೇ ಇರುತ್ತದೆ.

Advertisement

ಈ ಬಾಗದಲ್ಲಿ ಮಾಂತ್ರಿಕ ದೈವ, ಬೇಟೆಗಾರ ದೈವ, ಸಾಹಸಿ ದೈವ, ಶಾಂತ ಸ್ವರೂಪಿ ದೈವ, ರೌದ್ರ ದೈವ ಎನ್ನುವ ನಾನಾ ರೂಪಕ ದೈವಗಳಿರುತ್ತದೆ. ಮಲಬಾರ್‌ ಭಾಗದ ತರವಾಡುಗಳಲ್ಲಿ  ವಿಷ್ಣುಮೂರ್ತಿಯ ದೈವರಾಧನೆಯನ್ನು ಹೆಚ್ಚಾಗಿ ಕಣ್ತುಂಬಿಕೊಳ್ಳಬಹುದು. ಇನ್ನುಳಿದಂತೆ ಗುಳಿಗ, ಚಾಮುಂಡಿ, ಮುತ್ತಪ್ಪ ,ಕೇಳನ್‌, ಕುಲವನ್‌ ಇತ್ಯಾದಿ ದೈವಗಳ ಆರಾಧನೆಯ ಜತೆ ಜತೆಗೆ ಹಲವು  ನಾಮಗಳ ದೈವಾರಾಧನೆ ನೇಮಗಳು ಈ ಪುಣ್ಯ ಸ್ಥಳಗಳಲ್ಲಿ ನಡೆಯುತ್ತದೆ. ದೈವಗಳ ಬಾಹ್ಯ ರೂಪ ವ್ಯತ್ಯಾಸವಾಗಿ ಕಂಡರೂ ಸಹ ಇವುಗಳ ಆಂತರಿಕ ಶಕ್ತಿ ರೂಪವು ಒಂದೇ ಆಗಿರುತ್ತದೆ. ವರ್ಷಕ್ಕೆ ಒಮ್ಮೆಯಾದರು ನಾನಾ ತರವಾಡುಗಳಲ್ಲಿ ಕಳಿಯಾಟಂ ನಡೆಯುವ ಸಂಪ್ರದಾಯವಿದೆ. ಹಾಗೆಯೇ ಒತ್ತೆಕೋಲ,ವಯನಾಟು ಕುಲವನ್‌ ದೈವಕಟ್ಟು, ಪೆರುಂಕಳಿಯಾಟಂ ಹಲವು ವರ್ಷಗಳಿಗೊಮ್ಮೆ ನಡೆಯುವ  ಉತ್ಸವಗಳು. ಸಾವಿರಾರು ಭಕ್ತ ಸಮೂಹಗಳು ಈ ದೈವ ದರ್ಶನವನ್ನು ಮಾಡಿ ಪುನೀತರಾಗುತ್ತಾರೆ.

ಅಕ್ಟೋಬರ್‌ ಕೊನೆಯ ತಿಂಗಳಿನಿಂದ ಮೇ ತಿಂಗಳ ತನಕ ಈ ಸತ್ಯ ಮಣ್ಣಿನ ವಿವಿಧ ಗುಡಿ, ಕಾವು, ದೇವಸ್ಥಾನಗಳಲ್ಲಿ ಚಂಡೆ ತಾಳಗಳ  ಜೇಂಕಾರ , ಗಗ್ಗರ ನಾದದ ಸದ್ದು, ದೈವದ ನರ್ತನೆಯು ಹಗಲು ರಾತ್ರಿ ಎನ್ನದೆ  ನಡೆಯುತ್ತಲೇ ಇರುತ್ತದೆ.

-ಗಿರೀಶ್‌ ಪಿಎಂ

ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next