Advertisement

UV Fusion: ಕಲಿಯುವ ಮನಸ್ಸಿದ್ದರೆ ಸಾಕು

01:04 PM Dec 11, 2024 | Team Udayavani |

ದೇವ ದಾನವರ ನಡುವೆ ದ್ವೇಷ, ಯುದ್ಧ ನಮ್ಮ ಪುರಾಣಗಳಲ್ಲಿ ಕಂಡುಬರುತ್ತದೆ. ದೇವ ದಾನವರ ನಡುವಿನ ಸಮರವು ರಾಕ್ಷಸ ಗುರು ಶುಕ್ರಾಚಾರ್ಯರು ಮೃತ ಸಂಜೀವಿನಿ ವಿದ್ಯೆಯನ್ನು ಕಲಿತಾಗ ಇನ್ನಷ್ಟು ಉತ್ತುಂಗಕ್ಕೇರಿತು. ಈ ಸಮಯದಲ್ಲಿ ಯುದ್ಧ ನಡೆದು ಸಾವನ್ನಪ್ಪಿದ ರಾಕ್ಷಸರನ್ನು ಶುಕ್ರಾಚಾರ್ಯರು ತಮ್ಮ ಸಂಜೀವಿನಿ ವಿದ್ಯೆಯ ಮೂಲಕ ಬದುಕಿಸುತ್ತಿದ್ದರು, ಇದು ದೇವತೆಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದಕ್ಕೆ ಪರಿಹಾರವಾಗಿ ದೇವ ಗುರುವಾದ ಬೃಹಸ್ಪತಿ ಮಗ ಕಚನನ್ನು ಶುಕ್ರಚಾರ್ಯರ ಬಳಿ ಸಂಜೀವಿನಿ ವಿದ್ಯೆಯನ್ನು ಕಲಿಯಲು ಕಳಿಸುತ್ತಾರೆ.

Advertisement

ರಾಕ್ಷಸರ ಗುರು ಶುಕ್ರಾಚಾರ್ಯರು ತಮ್ಮ ದಿವ್ಯ ಶಕ್ತಿಯ ಮೂಲಕ ಕಚನ ಹಿನ್ನೆಲೆ ತಿಳಿದು ಅವನ ಮನವಿಯನ್ನು ತಿರಸ್ಕರಿಸುತ್ತಾರೆ. ಆದರೆ ಹಠ ಬಿಡದ ಕಚ ತಾನು ಸಂಜೀವಿನಿ ವಿದ್ಯೆಯನ್ನು ಕಲಿತೇ ಹೋಗುವುದಾಗಿ ಹೇಳುತ್ತಾನೆ. ಇದಕ್ಕೆ ಪ್ರತಿಯಾಗಿ ತಾನು ರಾಕ್ಷಸ ಗುರುವಾದ ಕಾರಣ ಈ ವಿದ್ಯೆ ಕಲಿಸಿದರೆ ಸಂಪೂರ್ಣ ರಾಕ್ಷಸ ಕುಲಕ್ಕೆ ದ್ರೋಹ ಮಾಡಿದಂತಾಗುತ್ತದೆ ಎಂದು ಹೇಳಿದರೂ ಕಚ ತನ್ನ ಹಠ ಬಿಡದೆ ಅಲ್ಲೇ ನೆಲೆ ನಿಲ್ಲುತ್ತಾನೆ.

ಇದೇ ಸಮಯದಲ್ಲಿ ಗುರು ಶುಕ್ರಚಾರ್ಯರ ಪುತ್ರಿ ದೇವಯಾನಿಯು ಸುಂದರ, ಪ್ರತಿಭಾನ್ವಿತ ಕಚನನ್ನು ಕಂಡು ಅವನ ಮೇಲೆ ಮೋಹಿತಳಾಗುತ್ತಾಳೆ. ಅಂದಿನಿಂದ ಕಚ – ದೇವಯಾನಿ ಸ್ನೇಹ ಬೆಳೆಯುತ್ತದೆ. ಕಚ ದೇವಯಾನಿಯನ್ನು ಗುರಪುತ್ರಿ ಎಂದು ಗೌರವದ ಭಾವನೆಯಿಂದ ಕಂಡರು ದೇವಯಾನಿ ಮಾತ್ರ ಕಚನನ್ನು ಪ್ರೇಮ ಭಾವನೆಯಿಂದ ಕಾಣುತ್ತಾಳೆ. ಕಚನು ದೇವತೆಗಳ ಪರವಾಗಿ ಸಂಜೀವಿನಿ ವಿದ್ಯೆಯನ್ನು ಕಲಿಯಲು ಬಂದಿರುವ ವಿಷಯ ರಾಕ್ಷಸರಿಗೆ ತಿಳಿದು ಅವರು ಕಚನನ್ನು ಕೊಲ್ಲಲು ಆಲೋಚನೆ ಮಾಡುತ್ತಾರೆ.

ಹಸುಗಳನ್ನು ಮೇಯಿಸಲು ಹೋಗಿದ್ದ ಕಚನನ್ನು ರಾಕ್ಷಸರು ಕೊಂದು ತುಂಡು ತುಂಡು ಮಾಡಿ ಎಸೆಯುತ್ತಾರೆ. ಸಂಜೆಯಾದರು ಕಚ ಆಶ್ರಮಕ್ಕೆ ಬರದಿರುವುದನ್ನು ಕಂಡ ದೇವಯಾನಿ ತನ್ನ ತಂದೆ ಬಳಿ ಹೇಳುತ್ತಾಳೆ. ದಿವ್ಯ ದೃಷ್ಟಿಯ ಮೂಲಕ ನಡೆದ ಸಂಗತಿ ತಿಳಿದ ಶುಕ್ರಾಚಾರ್ಯರು ತಮ್ಮ ಮಗಳಿಗಾಗಿ ಸಂಜೀವಿನಿ ವಿದ್ಯೆಯ ಮೂಲಕ ಕಚನನ್ನು ಬದುಕಿಸುತ್ತಾರೆ.

ಅನಂತರ ರಾಕ್ಷಸರು ಮತ್ತೂಮ್ಮೆ ಕಚನನ್ನು ಕೊಂದು ಸುಟ್ಟು ಅವನ ಬೂದಿಯನ್ನು ನದಿಗೆ ಎಸೆಯುತ್ತಾರೆ. ಮತ್ತೆ ದೇವಯಾನಿ ಕಚ ಕಾಣದಿರುವ ಬಗ್ಗೆ ತನ್ನ ತಂದೆಗೆ ಹೇಳಿದಾಗ, ಮತ್ತೆ ಗುರುಗಳು ತಮ್ಮ ಸಂಜೀವಿನಿ ವಿದ್ಯೆಯ ಸಹಾಯದಿಂದ ಕಚನನ್ನು ಬದುಕಿಸುತ್ತಾರೆ. ಎಷ್ಟೇ ತೊಂದರೆ ಬಂದರು ಕಚ ಮಾತ್ರ ವಿದ್ಯೆಯನ್ನು ಕಲಿಯುವ ಹಠವನ್ನು ಬಿಡುವುದಿಲ್ಲ. ಅನಂತರ ಎಲ್ಲ ವೃತ್ತಾಂತವನ್ನು ತಿಳಿದ ರಾಕ್ಷಸರು ಉಪಾಯ ಮಾಡಿ ಮತ್ತೆ ಕಚನನ್ನು ಕೊಂದು ಸುಟ್ಟು ಅವನ ಬೂದಿಯನ್ನು ಶುಕ್ರಾಚಾರ್ಯರು ಸಂಜೆಯ ವೇಳೆಯಲ್ಲಿ ಕುಡಿಯುತ್ತಿದ್ದ ಸೋಮರಸಕ್ಕೆ ಬೆರಸುತ್ತಾರೆ. ಅದನ್ನು ಶುಕ್ರಚಾರ್ಯರಿಗೆ ಕುಡಿಸುತ್ತಾರೆ.

Advertisement

ದೇವಯಾನಿ ಕಚ ಕಾಣದಿರುವುದನ್ನು ಕಂಡು ತನ್ನ ತಂದೆಯ ಬಳಿ ಬಂದು ವಿನಂತಿಸಿದಾಗ, ದಿವ್ಯ ದೃಷ್ಟಿಯ ಮೂಲಕ ಎಲ್ಲ ತಿಳಿದ ಗುರುಗಳು ಈಗ ಕಚ ನನ್ನ ಹೊಟ್ಟೆಯಲ್ಲಿದ್ದು ಅವನನ್ನು ಬದುಕಿಸದರೆ ತಾನು ಸಾಯುವುದಾಗಿ ಹೇಳುತ್ತಾರೆ. ಆದರೆ ಪ್ರೀತಿಯಲ್ಲಿ ಬಿದ್ದ ದೇವಯಾನಿ ಕಚನನ್ನು ಬದುಕಿಸುವಂತೆ ಕೇಳಿದಾಗ ಗುರುಗಳು ಕಚನಿಗೆ ತಾನು ನಿನಗೆ ಸಂಜೀವಿನಿ ವಿದ್ಯೆಯನ್ನು ಕಲಿಸುತ್ತಾನೆ. ನೀನು ಹೊಟ್ಟೆಯೊಳಗೆ ವಿದ್ಯೆ ಕಲಿತು ತನ್ನ ಹೊಟ್ಟೆಯನ್ನು ಸೀಳಿ ಹೊರಬಂದು ತನ್ನನ್ನು ಬದುಕಿಸಬೇಕಾಗಿ ಹೇಳುತ್ತಾರೆ.

ಅನಂತರ ಕಚ ವಿದ್ಯೆ ಕಲಿತು ಗುರುಗಳ ಹೊಟ್ಟೆಯಿಂದ ಹೊರಬಂದು ಅನಂತರ ಗುರುಗಳನ್ನು ಬದುಕಿಸಿ ಸ್ವರ್ಗದೆಡೆಗೆ ಹೋಗುವ ಮಾರ್ಗದಲ್ಲಿ ದೇವಯಾನಿ ಮತ್ತೂಮ್ಮೆ ತನ್ನ ಪ್ರೇಮ ನಿವೇದನೆಯನ್ನು ಮಾಡುತ್ತಾಳೆ. ಇದನ್ನು ಕೇಳಿದ ಕಚ ನಾನು ಸಾಕ್ಷಾತ್‌ ಗುರುಗಳ ಹೊಟ್ಟೆಯಿಂದ ಹೊರಬಂದ ಕಾರಣ ನಿನಗೆ ಸಂಬಂಧದಲ್ಲಿ ತಮ್ಮನಾಗುತ್ತೇನೆಂದು ಹೇಳಿ ಪ್ರೀತಿಯನ್ನು ನಿರಾಕರಿಸುತ್ತಾನೆ.

ಇದನ್ನು ಕೇಳಿದ ದೇವಯಾನಿ ಕಚನಿಗೆ ನೀನು ಕಲಿತ ಸಂಜೀವಿನಿ ವಿದ್ಯೆ ಮರೆತು ಹೋಗಲೆಂದು ಶಪಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಕಚ ನೀನು ಸಾವಿರ ಮಡದಿಯರಿರುವ ಪತಿಗೆ ಹೆಂಡತಿಯಾಗು ಎಂದೂ ಶಪಿಸುತ್ತಾನೆ, ಅನಂತರ ದೇವಯಾನಿ ಯಾಯಾತಿ ರಾಜನನ್ನು ಮದುವೆಯಾಗುತ್ತಾಳೆ.

ಈ ಕತೆಯ ಸಾರವೇನೆಂದರೆ ಕಲಿಯಬೇಕು ಎನ್ನುವ ಮನಸ್ಸಿದ್ದರೆ ಯಾವ ಅಡೆ ತಡೆಗಳು ಬಂದರೂ ಅದನ್ನು ಮೀರಿ ನಮ್ಮ ಪ್ರಯತ್ನ ಪಡಬೇಕು ಹಾಗೂ ಇಷ್ಟವಿಲ್ಲದ ಪ್ರೀತಿಯನ್ನು ಬಲವಂತವಾಗಿ ಪಡೆಯಬಾರದೆಂದು ಪ್ರಸುತ್ತ ಯುವಜನಾಂಗಕ್ಕೆ ಸಂದೇಶ ನೀಡುವುದಾಗಿದೆ.

-ರಾಸುಮ ಭಟ್‌

ಕುವೆಂಪು ವಿವಿ, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next