ದೇಶ ಸೇವೆಯೇ ಈಶ ಸೇವೆ ಎನ್ನುತ್ತಾ ಹೆತ್ತ ತಂದೆ – ತಾಯಿ, ಹೆಂಡತಿ, ಮಕ್ಕಳನ್ನೆಲ್ಲ ಬಿಟ್ಟು ದೇಶ ಸೇವೆಯನ್ನು ಮಾಡುತ್ತ ಚಳಿ-ಗಾಳಿ, ಮಳೆಯನ್ನು ಲೆಕ್ಕಿಸದೇ ಸತತವಾಗಿ ಹೋರಾಡುತ್ತಾ ಹೊತ್ತ ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುವವರು ನಮ್ಮ ಯೋಧರು. ಬದುಕಿ ಬಾಳಬೇಕಿದ್ದ ತರುಣರೆಲ್ಲ ಸ್ವಂತಿಕೆಯನ್ನು ಮರೆತು ಶತ್ರುಗಳನ್ನು ದುಃಸ್ವಪ್ನದಂತೆ ಕಾಡುವ ವೀರರು, ಗುಂಡಿನ ಸುರಿಮಳೆಯ ನಡುವೆಯೂ ಎದೆಯೊಡ್ಡಿ ಕಾದಾಡಿದ ಧೀರರು, ಗಡಿಯಲ್ಲಿ ಕದನ ಮಾಡಿ ಸಾಹಸ ಮೆರೆದ ಶೂರರು, ಯಾವುದೇ ಸ್ವಾರ್ಥವಿಲ್ಲದೆ ಅರ್ಪಣ ಮನೋಭಾವದಿಂದ ಹೋರಾಡಿ ಮಡಿದು ವೀರ ಮರಣವನ್ನಪ್ಪಿದ ಕಲಿಗಳು, ವಿಜಯ ಪತಾಕೆಯನ್ನು ಹಾರಿಸುತ್ತಾ ಇಡೀ ದೇಶವೇ ಕೊಂಡಾಡುವ ಹಾಗೆ ಹೋರಾಡುವ ಧೀರರು…
ಸೈನಿಕರು ದೇಶದ ಆಸ್ತಿ. ಒಬ್ಬ ಸೈನಿಕನ ಮರಣ ಆ ದೇಶಕ್ಕೆ ಅತಿ ದೊಡ್ಡ ನಷ್ಟ. ದೇಶಕ್ಕಾಗಿ ತಮ್ಮ ಜೀವವನ್ನು ಸಮರ್ಪಿಸಿದ ಹುತಾತ್ಮರಾದ ಯೋಧ ಅನೂಪ್ ಪೂಜಾರಿಯ ಸಾವು ನಮ್ಮೆಲ್ಲರಿಗೂ ಆದ ದೊಡ್ಡ ಆಘಾತ. ರಾಷ್ಟ್ರಸೇವೆಯನ್ನು ಮಾಡುವುದರೊಂದಿಗೆ ಬದುಕಿನ ಸರ್ವಸ್ವವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು. ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಘಟನೆ ಪೂಂಚ್ ಜಿಲ್ಲೆಯ ಬಲ್ನೋಯಿ ಪ್ರದೇಶದಲ್ಲಿ ನಡೆದಿದ್ದು ಈ ಟ್ರಕ್‌ನಲ್ತಿದ್ದ ದೇಶ ಕಾಯುವ ಯೋಧರೈವರು ಮೃತಪಟ್ಟಿದ್ದಾರೆ. ಕುಂದಾಪುರದ ಬೀಜಾಡಿಯ ಅನುಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿದ್ದು ಮರಾಠ ಲೈಟ್ ಇನ್ವೆಂಟ್ರಿ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಎರಡು ವಾರದ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದ ಅವರು ಹೆಂಡತಿ, ಮುದ್ದು ಮಗಳೊಡನೆ ಕೊಡಿ ಹಬ್ಬದಲ್ಲಿ ಸಂಭ್ರಮಿಸಿದ್ದರು. ಮಗಳ ಹುಟ್ಟುಹಬ್ಬವನ್ನು ಸಂತಸದಿಂದ ಆಚರಿಸಿದ್ದರು. ಆದರೆ ಇಂದು ಆ ಪುಟ್ಟ ಮಗು ಅಪ್ಪ ಎಂದು ಕರೆದಾಗ ಮನೆಯವರು ಹೇಗೆ ಸಮಾಧಾನ ಹೇಳಿಯಾರು? ಆ ತುಂಬು ಕುಟುಂಬದ ಸಂತಸ ವಿಧಿಯ ಸಾರೋಟಿನಡಿಯಲ್ಲಿ ಸಿಲುಕಿತ್ತು. ಆ ಕುಟುಂಬದ ಕಣ್ಣೀರೊರೆಸುವ ಕೈ ಇಂದು ಇಲ್ಲವಾಗಿದೆ.
ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಹುಟ್ಟೂರಾದ ಬೀಜಾಡಿಯ ಶಾಲೆಯಲ್ಲಿ ಅಂತಿಮ ದರ್ಶನಕ್ಕೆಂದು ಸಹಸ್ರಾರು ಅಭಿಮಾನಿಗಳು, ವಿದ್ಯಾರ್ಥಿಗಳು, ದೇಶಭಕ್ತರು ಆಗಮಿಸಿ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ್ದರು. ದಾರಿಯುವುದಕ್ಕೂ ಪುಷ್ಪ ನಮನದೊಂದಿಗೆ ಭಾರತ್ ಮಾತಾ ಕೀ ಜೈ ಎನ್ನುವ ಉದ್ಘೋಷವೂ ಸಾಗಿತ್ತು. ಕಡಲ ತೀರದಲ್ಲಿ ಆ ಕುಟುಂಬದವರ ರೋಧನ ಹೇಳತೀರದು. ನೆರೆದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಎಲ್ಲರ ಮನದಲ್ಲೂ ಹೀಗಾಗಬಾರದಿತ್ತು ಎನ್ನುವ ಮರುಕ ಮೌನವಾಗಿಯೇ ಉಳಿದಿತ್ತು. ಸೂತಕದ ಛಾಯೆಯ ಸುತ್ತ ನೆರೆದ ಜನರ ಕಣ್ಣಂಚಿನಲ್ಲಿ ಕಣ್ಣೀರ ಭಾಷ್ಪ ಜಿನುಗುತ್ತಿತ್ತು. ಭಾರತಾಂಬೆಯ ಮಡಿಲಿಗೆ ವೀರ ಯೋಧನ ಅಂತಿಮ ಪಯಣ ಸಾಗಿ, ಎಲ್ಲವೂ ಮರೆಯಾಗಿ, ನೋವು ಒಂದೇ ಉಳಿದಿತ್ತು. ಈ ನಾಡಿಗೆ ಇದು ನುಂಗಲಾರದ ತುತ್ತಾಯಿತು.
ಎರಡು ವರ್ಷದ ಮುಗ್ಧ ಮಗು ತಂದೆಯ ಪ್ರೀತಿಯಿಂದ ವಂಚಿತಳಾದಳು, ಗಂಡನೊಂದಿಗೆ ಸಂತೋಷದಿಂದ ಜೀವನ ನಡೆಸಬೇಕಿದ್ದ ಅವರ ಪತ್ನಿ ಇಂದು ವಿಧವೆಯಾದರು, ಹೊತ್ತು – ಹೆತ್ತು, ಸಾಕಿ – ಸಲಹಿದ ತಾಯಿ ಪುತ್ರ ಶೋಕದಿಂದ ಬೆಂದು ಹೋದರು, ಒಂದೇ ಕರುಳ ಬಳ್ಳಿಯ ಕುಡಿಗಳಾದ ಸಹೋದರಿಯರು ಅಣ್ಣನನ್ನು ಕಳೆದುಕೊಂಡು ತಬ್ಬಲಿಗಳಾದರು. ನಮ್ಮೆಲ್ಲರ ನೆಮ್ಮದಿಯ ಜೀವನಕ್ಕಾಗಿ, ರಾಷ್ಟ್ರ ರಕ್ಷಣೆಯ ಯಜ್ಞದಲ್ಲಿ ಸ್ವತಃ ಸಂಸಾರಿಯಾದರೂ; ಸನ್ಯಾಸಿಯೂ ಮಾಡದ ತ್ಯಾಗ ಬಲಿದಾನದ ಆ ಮಹಾ ಯಜ್ಞಕ್ಕೆ ಬಲಿಯಾದರು. ಅನಂತ ತ್ಯಾಗದ ಈ ಮಹಾ ಯಜ್ಞವು, ಪ್ರತಿಯೊಬ್ಬ ಭಾರತೀಯನಿಗೆ ಕರ್ತವ್ಯದ ಉಚ್ಛಾಟಯವನ್ನು ತೋರಿಸುತ್ತದೆ. ಇವರ ಬಲಿದಾನದ ರಕ್ಷಣೆಯಲ್ಲಿರುವ ನಾವು, ನಮ್ಮ ಸುತ್ತಲಿನ ಸಮಾಜ ಇನ್ನಾದರೂ ಬದಲಾಗುವುದೇ? ಭ್ರಷ್ಟಾಚಾರ ನಿಲ್ಲುವುದೇ? ಸ್ವಾರ್ಥ ಕಪಟತನ ನಿಲ್ಲುವುದೇ? ನಾನು ಎನ್ನುವ ಅಹಂ ಬಿಟ್ಟು ನಾವು ಎನ್ನುವ ಭಾವ ಸುರಿಸುವುದೇ? ಜಾತಿ – ಮತ, ಮೇಲು – ಕೀಳು ಎನ್ನುವ ಮನೋಭಾವ ಕೊನೆಯಾಗುವುದೇ?
ಕಾಶ್ಮೀರ ಕಣಿವೆಯ ನಟ್ಟ ನಡುವೆ ಸಾವಿಗೆ ಎದೆಯೊಡ್ಡಿ ತಾಯಿ ಭಾರತಿಗೆ ಪ್ರಾಣ ಕೊಟ್ಟ ವೀರ ನಮ್ಮೂರಿನವನು ಎಂಬ ಹೆಮ್ಮೆ ನಮಗೆ. ಹಿಮಪಾತಕ್ಕೆ ಸಾಕ್ಷಿಯಾಗಿ ರಕ್ತ ಮೆತ್ತಿಕೊಂಡ ಅರೆಗಣ್ಣು, ಒಣ ತುಟಿ ಹೇಳುತ್ತಿತ್ತು ನಿಮ್ಮ ಬಲಿದಾನವ. ನಮ್ಮೂರಿನ ವೀರ ಸೈನಿಕ ನಿಮಗಿದೋ ಕೋಟಿ ನಮನ…
ಯಾವ ಮಾತೆಯ ಮಗನು ಹತನಾದನೋ?
ಯಾವ ಮಗುವಿನ ತಂದೆ ಮರೆಯಾದನೋ?
ಯಾವ ಸಹೋದರನ ತಂಗಿ ಮಂಕಾದಳ್ಳೋ?
ಯಾರ ಪ್ರೀತಿಯ ಸತಿಯು ಮೌನವಾದಳ್ಳೋ?
ಯಾವ ಹುಡುಗಿಯ ಒಲವು ಮಣ್ಣಾಯಿತೋ?
ಕೊನೆತನಕ ನೋವು ಕೊಡುವ ಹುಣ್ಣಾಯಿತೋ?
ವೀರ ಸೈನಿಕರ ರಕ್ತದೋಕುಳಿಯ ಕೆಂಪು ಮರೆಯಾಗುತ್ತಿಲ್ಲ
ಮರೆಯಾದ ರತ್ನಗಳ ನೆನಪಿನಿಂದ ಇಂದು ದಿನ ಸಾಗುತ್ತಿಲ್ಲ
ಆ ಕುಟುಂಬದ ಕಣ್ಣೀರು ಕಣ್ಣಂಚಿನಿಂದ ಮರೆಯಾಗುತ್ತಿಲ್ಲ.
-ರಶ್ಮಿ ಉಡುಪ, ಕೋಟೇಶ್ವರ