ಉಡುಪಿ : ಈ ವರ್ಷಾರಂಭದಲ್ಲಿ ಅಂಬಾಗಿಲು ಕಕ್ಕುಂಜೆ ನಿವಾಸಿ ಪ್ರಮೀಳಾ ಬಂಗೇರಾ ಅವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2,18,169 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಕೊಂಡಿದ್ದಾರೆ. ಕಕ್ಕುಂಜೆ ಗರೋಡಿ ಬಳಿಯ ನಿವಾಸಿ ಸಂತೋಷ್ ಪೂಜಾರಿ (36) ಹಾಗೂ ಕಟಪಾಡಿ ಮಟ್ಟು ನಿವಾಸಿ ರಾಕೇಶ್ ಪಾಲನ್ (37) ಬಂಧಿತ ಆರೋಪಿಗಳು.
ಇವರು ಕಕ್ಕುಂಜೆಯ ಪ್ರಮೀಳಾ ಅವರ ಮನೆಗೆ ನುಗ್ಗಿ ಎರಡು ಬಂಗಾರದ ಸರ, ಎರಡು ಬಳೆ, ಮೂರು ಉಂಗುರ, ಒಂದು ಜತೆ ಕಿವಿಯೋಲೆ, ಒಂದು ಬ್ರೇಸ್‌ಲೆಟ್ ಸಹಿತ ಒಟ್ಟು 3.15 ಲ.ರೂ. ಮೌಲ್ಯದ 9 ಪವನ್ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪ್ರಮೀಳಾ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮನೆಗೆ ಬರುತ್ತಿದ್ದ ಸಂತೋಷ್‌ನ ಮೇಲೆ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆರೋಪಿ ಸಂತೋಷ್ ಪೂಜಾರಿಯನ್ನು ಕೃಷ್ಣ ಮಠದ ಗೀತಾ ಮಂದಿರದ ಬಳಿ ಹಾಗೂ ರಾಕೇಶ್ ಪಾಲನ್‌ನನ್ನು ಉಡುಪಿಯ ಉಜ್ವಲ್ ಬಾರ್ ಬಳಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.