ಹೊನ್ನಾವರ: ಸ್ವಾತಂತ್ರ್ಯ ಹೋರಾಟ ಕಾಲದಿಂದ ಈವರೆಗೆ, ಮುಂದೂ ಉತ್ತರ ಕನ್ನಡ ಜಿಲ್ಲೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೊಟ್ಟಿದ್ದೇ ಹೆಚ್ಚು ವಿನಃ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಸಿಕ್ಕಿದ್ದು ಸಾಂಕೇತಿಕ, ಮಾಮೂಲು ಪ್ರಯೋಜನ ಮಾತ್ರ.
ಜಿಲ್ಲೆಯ ಕೊಡುಗೆಗಳನ್ನು ಪಟ್ಟಿ ಮಾಡಿ, ಇಲ್ಲಿಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ಉತ್ತರದ ಗುಡ್ಡಗಾಡು ರಾಜ್ಯಗಳಿಗೆ ಕೊಟ್ಟಂತೆ ವಿಶೇಷ ಪ್ಯಾಕೇಜ್ ಯಾಕೆ ಕೇಳಬಾರದು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಯಾರು ಕೇಳಬೇಕು? ಕೇಳಬೇಕಾದವರಿಗೆ ಇದು ಅರ್ಥವಾಗುವುದಿಲ್ಲ. ಹೇಳಬೇಕಾದವರು ಹೇಳುವುದಿಲ್ಲ. ನಮ್ಮ ಜಿಲ್ಲೆಯ ಕೊಡುಗೆಯನ್ನು ಪ್ರಧಾನಿಯ ಮುಂದಿಟ್ಟು ಪ್ಯಾಕೇಜ್ ಕೇಳಬೇಕೇ? ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟು ನ್ಯಾಯ ಕೇಳಬೇಕೇ? ನೀವೇ ಹೇಳಿ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಅಂಕೋಲೆ ಕರ್ನಾಟಕದ ಬಾರ್ಡೋಲಿ ಎಂದು ಕರೆಸಿಕೊಂಡಿತ್ತು. ಸಿದ್ಧಾಪುರದ ತಿಮ್ಮಪ್ಪ ನಾಯಕ ಮಾಸ್ತರರು ಕರ್ನಾಟಕಕ್ಕೆ ತಮ್ಮ ಸಂದೇಶ ಎಂದಿದ್ದರು ಗಾಂಧೀಜಿ. ಹಸ್ಲರ ದೇವಿಗೆ ತನ್ನ ಕೊರಳಿನ ಖಾದಿ ಮಾಲೆ ತೊಡಿಸಿದ ಗಾಂಧೀಜಿ ಇಂಥವರಿಂದಲೇ ಸ್ವಾತಂತ್ರ್ಯ ಬಂತು, ಇದು ಪುಣ್ಯ ಭೂಮಿಯಾಯಿತು ಎಂದಿದ್ದರು. ಎಲ್ಲ ಭೇದ ಮರೆತು ಜಿಲ್ಲೆ ಒಂದಾಗಿ ಹೋರಾಡಿತ್ತು. ಸಾವಿರಾರು ಜನ ಮನೆ, ಮಠ ಕಳೆದುಕೊಂಡರು, ಆಸ್ತಿ ಹರಾಜಾಯಿತು. ಸ್ವಾತಂತ್ರ್ಯ ಬಂದ ಮೇಲೆ ಇವರನ್ನು ಮೂಲೆ ಸೇರಿಸಿ, ನೆರೆ ಜಿಲ್ಲೆಯವರು ಅಧಿಕಾರ ಹಿಡಿದರು. ಆಗಲೇ ಹಿನ್ನಡೆ ಆರಂಭವಾಯಿತು. ರಾಜ್ಯದಲ್ಲಿ ಕಡಿಮೆ ಕಂದಾಯ ಭೂಮಿ ಇರುವ, ಆದಾಯ ಕಡಿಮೆ ಇರುವ ಉತ್ತರ ಕನ್ನಡಕ್ಕೆ ಅರಣ್ಯೋತ್ಪನ್ನದ ಶೇ. 2ರಷ್ಟನ್ನು ಬ್ರಿಟೀಷ್ ಸರ್ಕಾರ ಕೊಟ್ಟಿತ್ತು. ಶೇ. 80ರಷ್ಟು ಇದ್ದ ಅರಣ್ಯವನ್ನು ಮಾರಿ ಸರ್ಕಾರ ಬೊಕ್ಕಸ ತುಂಬಿಸಿಕೊಂಡಿತು.
ಕೈಗಾ ಅಣುವಿದ್ಯುತ್ ಸ್ಥಾವರದ ಬಹುಪಾಲು ವಿದ್ಯುತ್ ರಾಜ್ಯದ ಹೊರಗೆ ಹೋಗುತ್ತಿದೆ. ಅಡ್ಡ ಪರಿಣಾಮ ಮಾತ್ರ ಜಿಲ್ಲೆಗೆ. ದೇಶಕ್ಕಾಗಿ 25ಸಾವಿರ ಕೋಟಿ ರೂ. ಸೀಬರ್ಡ್ ಯೋಜನೆಗೆ ಭೂಮಿಕೊಟ್ಟ, ಕೊಡುತ್ತಿರುವವರಿಗೆ ನ್ಯಾಯ ಸಿಗಲಿಲ್ಲ. ಈಗ ವಿಸ್ತರಣೆ ನಡೆಯುತ್ತಿದೆ. ಕಾಳಿ ಯೋಜನೆಯಿಂದ ನಿರ್ಗತಿಕರಾದವರು ರಾಮನಗರ ಸೇರಿ ಮರೆಯಾಗಿ ಹೋದರು. ಶರಾವತಿ ಟೇಲರೀಸ್‌ನಿಂದ ಕಾಡು ನಾಶವಾಯಿತು. ಪರ್ಯಾಯ ಕಾಡು ನಿರ್ಮಾಣಕ್ಕೆ ನೆರೆ ಜಿಲ್ಲೆಗೆ ಹಣ ವೆಚ್ಚವಾಯಿತು. ಕಾಸ್ಟಿಕ್ ಸೋಡಾ ಕಾರ್ಖಾನೆಗಾಗಿ ಹಿರೇಗುತ್ತಿ ರೈತರು ಅನಾಥರಾದರು. ದಾಂಡೇಲಿ ಕಾಗದ ಕಾರ್ಖಾನೆ ಬಹುಕಾಲ ಮೂರುಕಾಸಿಗೆ ಬಿದಿರು ಪಡೆಯಿತು. ಈ ಯಾವ ಯೋಜನೆಗಳ ಲಾಭವೂ ಜಿಲ್ಲೆಗೆ, ಜನಕ್ಕೆ ಸಿಗಲಿಲ್ಲ.
ಕಿರಿದಾದ ಪಟ್ಟಿಯಂತಿರುವ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸೇರಿದ ಒಂದಿಂಚು ಸರ್ಕಾರಿ ಭೂಮಿ ಇಲ್ಲ. ಅರಣ್ಯ ಭೂಮಿ ಕೊಡುವುದಿಲ್ಲ. ಶಾಲೆ, ಕಾಲೇಜು, ರಸ್ತೆ ಯಾವುದಕ್ಕೂ ಭೂಮಿ ಲಭ್ಯವಿಲ್ಲ. ಖಾಸಗಿ ಭೂಮಿ ಕೊಳ್ಳುವಂತಿಲ್ಲ. ಹಳ್ಳಿಯ ಖಾಸಗಿ ಭೂಮಿಯಲ್ಲಿ ಉದ್ಯೋಗ ಮಾಡೋಣ ಎಂದರೆ ಭೂ ಪರಿವರ್ತನೆ ಆಗುವುದಿಲ್ಲ. ವಿದ್ಯುತ್ ಎಲ್ಲ ಸಮಯದಲ್ಲಿ ಲಭ್ಯವಿಲ್ಲ. ಕಡಲ ತಡಿಯವರೆಗೆ ಅರಣ್ಯ ಇಲಾಖೆಯದೇ ಭೂಮಿ. ಕಡಲ ತೀರದಲ್ಲಿ ಏನಾದರೂ ಮಾಡೋಣ ಎಂದರೆ ಸಿಆರ್‌ಝಡ್ ಕಾನೂನು. ದೊಡ್ಡ ಶಿಕ್ಷಣ ಸಂಸ್ಥೆಗಳಿಲ್ಲ. ತುರ್ತು ಚಿಕಿತ್ಸೆ ಮಾಡಲು ಟ್ರೋಮಾ ಸೆಂಟರ್‌ಗಳಿಲ್ಲ. ರೈಲು ಕರಾವಳಿಯಲ್ಲಿ ಓಡಿದರೂ ಬೆಂಗಳೂರು, ಮಂಗಳೂರಿಗೆ ಸಮಯಕ್ಕೆ ರೈಲಿಲ್ಲ. ಅಂಕೋಲಾ-ಹುಬ್ಬಳ್ಳಿ, ತಾಳಗುಪ್ಪಾ-ಹೊನ್ನಾವರ ರೈಲಿಗೆ ಪರಿಸರದ ಹೆಸರಿನಲ್ಲಿ ಕೆಲವರ ಕಾಟ. ಸರ್ಕಾರಕ್ಕೆ ಅಷ್ಟು ಸಿಕ್ಕರೆ ಸಾಕು. ಸತ್ತರೆ ಸುಡಲು ಬೇಕಷ್ಟು ಕಟ್ಟಿಗೆಯೂ ಲಭ್ಯವಿಲ್ಲ.
ಸಣ್ಣ-ದೊಡ್ಡ ಕೈಗಾರಿಕೆಗೆ ಅವಕಾಶವೇ ಇಲ್ಲ. ಗುಡಿಕೈಗಾರಿಕೆಗೆ ಸಾಮಗ್ರಿ ಇಲ್ಲ. ಒಂದೇ ಒಂದು ನೀರಾವರಿ ಇಲ್ಲ. ಅಡಕೆ, ತೆಂಗು ಬಿಟ್ಟರೆ ಬೇರೆ ಆರ್ಥಿಕ ಬೆಳೆ ಇಲ್ಲ. ಪುಣ್ಯಕ್ಷೇತ್ರಗಳು ಸೌಲಭ್ಯವಿಲ್ಲದೇ ಹಾಳು ಸುರಿಯುತ್ತಿವೆ. ಮಳೆಗಾಲದಲ್ಲಿ ಪ್ರವಾಹ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ. ವಿದ್ಯೆ ಕಲಿತು, ಉದ್ಯೋಗ ಅರಸಿಕೊಂಡು ಹೊರಗೆ ಹೋದವರು ಕಳಿಸುವ ಮನಿಯಾರ್ಡರ್ ಅಥವಾ ಹಣ ವರ್ಗಾವಣೆ ಮಾತ್ರ ಮುಖ್ಯ ಆದಾಯ. ದೇವರಾಜ ಅರಸು ಮುಖ್ಯಮಂತ್ರಿಗಳಾದಾಗ ಅರಣ್ಯ ಆದಾಯದ ಶೇ. 5ರಷ್ಟನ್ನು ಕೊಟ್ಟಿದ್ದರು. ನಂತರ ಅದು ರದ್ದಾಯಿತು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 2ಕೋಟಿ ರೂ. ಪ್ಯಾಕೇಜ್ ಕೊಟ್ಟಿದ್ದರು. ಅದು ಯಾತಕ್ಕೂ ಸಾಲಲಿಲ್ಲ. ಜಿಲ್ಲೆಯ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡಲು ಬೇಕಾದ ಎಲ್ಲ ನೈಸರ್ಗಿಕ ಅನುಕೂಲಗಳಿವೆ. ಆದರೆ ಅದನ್ನು ಜನಕ್ಕೆ ತಲುಪಿಸುವ ಕೆಲಸಕ್ಕೆ ಪರಿಸರ ಉಳಿಸಿಕೊಂಡು ಜಿಲ್ಲೆ ಬೆಳೆಸುವುದಕ್ಕೆ ನಿಶ್ಚಿತ ಯೋಜನೆ, ದೊಡ್ಡ ಮೊತ್ತದ ಹಣಕಾಸು ಬೇಕು. ಇಲ್ಲವಾದರೆ ಜಿಲ್ಲೆ ವೃದ್ಧಾಶ್ರಮವಾಗುತ್ತದೆ.
ಸ್ವಾತಂತ್ರ್ಯ ಯೋಧರ ಕುಟುಂಬದಿಂದ ಬಂದ ದೇವದತ್ತ ಕಾಮತ್ ಸರ್ವೋಚ್ಚ ನ್ಯಾಯಾಲಯದ ಪ್ರಭಾವಿ ಕಿರಿಯ ನ್ಯಾಯವಾದಿಗಳು. ಸಂವಿಧಾನ ಬದ್ಧವಾಗಿ ಕೊಟ್ಟಿದ್ದಕ್ಕೆ ಪ್ರತಿಯಾಗಿ ಜನಜೀವನದ ನೆಮ್ಮದಿಗೆ ಕೇಂದ್ರ ರಾಜ್ಯದ ನೆರವನ್ನು ಪಡೆಯುವುದು ಜಿಲ್ಲೆಯ ಜನತೆಯ ಹಕ್ಕು. ಕಾನೂನಿನ ಸಂಕೋಲೆಯಲ್ಲಿ ಕಟ್ಟಿಹಾಕಿ, ಜಿಲ್ಲೆಯ ಅಭಿವೃದ್ಧಿ ಕನಸನ್ನು ಹೊಸುಕಿ ಹಾಕುತ್ತಿರುವ ಜಿಲ್ಲೆಯನ್ನಾಳಿದ ರಾಜಕಾರಣಿಗಳು ಕಾನೂನಿನಂತೆ ಜಿಲ್ಲೆಗೆ ನ್ಯಾಯಕೊಡಿಸುವಲ್ಲಿ ವಿಫಲರಾಗಿದ್ದಾರೆ.
ಆದ್ದರಿಂದ ಒಮ್ಮೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಕೇಳಬೇಕು, ಇಲ್ಲವಾದರೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಬೇಕು ಎನ್ನುತ್ತಾರೆ ಅವರು, ಏನು ಮಾಡಬೇಕು ಜನರೇ ತೀರ್ಮಾನಿಸಲಿ.
•ಜೀಯು, ಹೊನ್ನಾವರ