Advertisement

ಉತ್ತರಾಖಂಡ್ ನಲ್ಲಿ ಹಿಮ ಸ್ಪೋಟ: ಹರಿದ್ವಾರ- ಋಷಿಕೇಶದಲ್ಲಿ ಪ್ರವಾಹ ಭೀತಿ

03:47 PM Feb 07, 2021 | Team Udayavani |

ಹೊಸದಿಲ್ಲಿ: ಉತ್ತರಾಖಂಡ್ ರಾಜ್ಯದ ರೆನಿ ಗ್ರಾಮದಲ್ಲಿನ ನಂದಾದೇವಿ ಹಿಮನದಿಯ ಭಾಗವೊಂದರಲ್ಲಿ ಹಿಮ ಸ್ಪೋಟವಾಗಿದ್ದು, ದೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಗಿದೆ.

Advertisement

ಹಿಮ ಸ್ಪೋಟದ ಕಾರಣದಿಂದ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಾಗಿದೆ. ಪರಿಣಾಮ ಜಲಾಶಯದ ತಡೆ ಒಡೆದು ಹೋಗಿದ್ದು, ಪ್ರವಾಹದ ರಭಸಕ್ಕೆ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ವರದಿ ತಿಳಿಸಿದೆ.

ಪೌರಿ, ತೆಹ್ರಿ, ರುದ್ರ ಪ್ರಯಾಗ, ಹರಿದ್ವಾರ ಮತ್ತು ಡೆಹರಾಡೂನ್ ನಲ್ಲಿ ಪ್ರವಾಹ ಭೀತಿ ಏರ್ಪಟ್ಟಿದೆ. ಈ ಜಿಲ್ಲೆಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಹಿಮನದಿ ಒಡೆದು ಪ್ರವಾಹ ಸೃಷ್ಟಿ : ಹಲವರು ನಾಪತ್ತೆ

“ಭಾರಿ ಮಳೆ ಮತ್ತು ಹಠಾತ್ ನೀರಿನ ಹರಿವಿನ ಹೆಚ್ಚಳದಿಂದ ಚಮೋಲಿಯ ರಿನಿ ಗ್ರಾಮದಲ್ಲಿರುವ ಋಷಿಗಂಗಾ ಯೋಜನೆಗೆ ಹಾನಿಯಾಗುವ ಸಾಧ್ಯತೆಯಿದೆ. ಅಲಕಾನಂದದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಜನರಿಗೆ ಎಚ್ಚರಿಸಲಾಗಿದೆ. ನದಿ ಪಾತ್ರದಲ್ಲಿ ನೆಲೆಸಿದ ಜನರನ್ನು ಈ ಪ್ರದೇಶದಿಂದ ಬೇರೆಡೆಗೆ ಕಳುಹಿಸಲಾಗುತ್ತಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.

Advertisement

ದೇಶವು ಉತ್ತರಾಖಂಡ ರಾಜ್ಯದ ಜೊತೆಗಿದೆ: ಉತ್ತರಾಖಂಡದ ಘಟನೆಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಭಾರತವು ಉತ್ತರಾಖಂಡ ರಾಜ್ಯದ ಜೊತೆಗಿದೆ. ಅಲ್ಲಿನ ಪ್ರತಿಯೊಬ್ಬರ ಸುರಕ್ಷತೆಗಾಗಿ ದೇಶವು ಪ್ರಾರ್ಥಿಸುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದು, ಎನ್‌ಡಿಆರ್‌ಎಫ್, ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತು ಸತತ ಮಾಹಿತಿ ಪಡೆಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಆಘಾತ ಉಂಟು ಮಾಡಿದೆ: ಘಟನೆಯ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರಾಖಂಡದಲ್ಲಿ ಸಂಭವಿಸಿರುವ ದುರ್ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ. ಬಾಧಿತ ಪ್ರದೇಶಗಳಲ್ಲಿರುವ ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next