Advertisement
ನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಮೊದಲಿಗೆ ಅಂಬೆವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಟ್ನಾಳದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕಲಿಕಾ ಗುಣಮಟ್ಟ, ಬಿಸಿಯೂಟ ಹಾಗೂ ಶಾಲೆಯ ಮೂಲ ಸೌಕರ್ಯಗಳ ಕುರಿತಂತೆ ಪರಿಶೀಲನೆಯನ್ನು ನಡೆಸಿ, ಕೆಲ ಹೊತ್ತು ಮಕ್ಕಳ ಜೊತೆ ಚರ್ಚೆಯನ್ನು ನಡೆಸಿದರು. ಮಕ್ಕಳೊಂದಿಗೆ ಮಕ್ಕಳಂತಾದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಕೆಲವು ಪ್ರಶ್ನೆಗಳನ್ನು ಕೇಳಿ ಮಕ್ಕಳ ಬುದ್ಧಿವಂತಿಕೆ ಮತ್ತು ನೆನಪಿನ ಶಕ್ತಿಯನ್ನು ಪರೀಕ್ಷೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಗೌರವದಿಂದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಭೇಷ್ ಎನಿಸಿಕೊಂಡರು.
Related Articles
Advertisement
ಇದಾದ ಬಳಿಕ ಅಂಬೇವಾಡಿಯಲ್ಲಿರುವ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ವೈದ್ಯರ ಜೊತೆ ಚರ್ಚಿಸಿ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಆಯುಷ್ ಆಸ್ಪತ್ರೆಯ ಚಿಕಿತ್ಸಾ ವಿಧಾನ ಮತ್ತು ಔಷಧಿಗಳ ಬಗ್ಗೆ ಚರ್ಚೆ ನಡೆಸಿದರು.
ಅಲ್ಲೇ ಹತ್ತಿರದಲ್ಲಿರುವ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ತೆರಳಿದರು. ಈ ಕೇಂದ್ರದ ಕಾರ್ಯಾರಂಭದ ಕುರಿತಂತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ ಮತ್ತು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಜೊತೆ ಚರ್ಚೆ ನಡೆಸಿದರು.
ಇಲ್ಲಿಂದ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ತಹಶೀಲ್ದಾರ್ ಕಾರ್ಯಾಲಯ ಮತ್ತು ತಾಲೂಕು ಪಂಚಾಯತ್ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಸಭೆ ನಡೆಸಿ ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರು ನಗರಸಭೆಯ ಪರವಾಗಿ ಜಿಲ್ಲಾಧಿಕಾರಿಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ನಗರದ ಪ್ರಗತಿಯ ಕುರಿತಂತೆ ಮಾಹಿತಿಯನ್ನು ನೀಡಿದರು.
ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಬುಧವಾರ ಸಂಜೆ ಭೇಟಿ ನೀಡಿ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ನಾಯ್ಕ ಹಾಗೂ ವೈದ್ಯರುಗಳೊಂದಿಗೆ ಮಾತುಕತೆ ನಡೆಸಿ, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಅವಶ್ಯ ಔಷಧಿಗಳ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲಾಧಿಕಾರಿ ಭೇಟಿಯ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಮೋದ ಮಹಾಲೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷ್ಮೀದೇವಿ, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.