ಕಾರವಾರ: ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯಿಟ್ಟು ನವೆಂಬರ್ 2 ರಂದು ಆರಂಭಿಸಲಾಗಿದ್ದ ಅನಂತಮೂರ್ತಿ ಹೆಗಡೆ ಪಾದಯಾತ್ರೆ ಕಾರವಾರ ತಲುಪಿತು . ಇಲ್ಲಿನ ಟನಲ್ ಮೂಲಕ ಆಟೋ ಚಾಲಕರು ಆಟೋಗಳ ಮೂಲಕ ಪಾದಯಾತ್ರೆ ಸಂಘಟಕರನ್ನು ಸ್ವಾಗತಿಸಿದರು . ಪಾದಯಾತ್ರೆಯಲ್ಲಿ ಬಂದಿದ್ದ ವಿವಿಧ ತಾಲೂಕುಗಳ ಮಹಿಳೆಯರು, ಸಾರ್ವಜನಿಕರು ಸುಭಾಷ್ ಸರ್ಕಲ್ ಮೂಲಕ ನಗರದ ಮುಖ್ಯ ರಸ್ತೆಗಳಲ್ಲಿ ನಡೆದು ಬಂದರು .ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕೊಡಿ ಎಂದು ಘೋಷಣೆ ಕೂಗಿದರು. ಭಾಜ ಭಜಂತ್ರಿ ,ಡೋಲು ಮೆರವಣಿಗೆ ಯೊಂದಿಗೆ ಬಂದ ಪಾದಯಾತ್ರೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಬಂದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅನಂತಮೂರ್ತಿ ಜಿಲ್ಲೆಯಲ್ಲಿ ಅಪಘಾತಗಳಾದರೆ ತಕ್ಷಣ ಚಿಕಿತ್ಸೆ ನೀಡಿ ಅಪರೇಶನ್ ಮಾಡುವ ವ್ಯವಸ್ಥೆ ಇಲ್ಲ. ಜಿಲ್ಲೆಯಲ್ಲಿ ಮೂರು ಕಡೆ ಟ್ರಾಮ ಸೆಂಟರ್ ಆಗಬೇಕು. ಶಿರಸಿಗೆ ಮೆಡಿಕಲ್ ಕಾಲೇಜು ಸಹಿತ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಿ ಎಂದರು. ಆಸ್ಪತ್ರೆ ನಿರ್ಮಾಣದಿಂದ ಜನರಿಗೆ ಉಪಕಾರವಾಗುತ್ತದೆ ಎಂದರು.
ಸ್ಕೂಡ್ ವೇಸ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಜಿಲ್ಲೆಯ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಲು ಇದೊಂದು ಹಕ್ಕೊತ್ತಾಯ ಎಂದರು. ಕಾರವಾರ ಮೆಡಿಕಲ್ ಕಾಲೇಜು ಸೌಲಭ್ಯ ಹೆಚ್ಚಬೇಕು. ಶಿರಸಿ,ಹೊನ್ನಾವರ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಸ್ಥಾಪನೆ ಆಗಬೇಕು ಎಂದರು.
ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗೇಶ್ ನಾಯ್ಕ ಕಾಗಾಲ ಮಾತನಾಡಿ ಕುಮಟಾ ಭಾಗದಲ್ಲಿ ಹಲವು ಸೌಲಭ್ಯದ ಆಸ್ಪತ್ರೆ ಸ್ಥಾಪನೆಯಾಗಲಿ. ಇದೊಂದು ದೊಡ್ಡ ಜಿಲ್ಲೆ. ಹನ್ನೆರಡು ತಾಲೂಕುಗಳಿವೆ. ಮೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮಾಡುವಷ್ಟು ದೊಡ್ಡ ಜಿಲ್ಲೆ ಇದು. ಸರ್ಕಾರ ತುರ್ತಾಗಿ ಆರೋಗ್ಯ ಸೌಲಭ್ಯ ಗಳನ್ನು ನೀಡಬೇಕಿದೆ ಎಂದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದೊಂದು ವಾರದಿಂದ ಸುಸಜ್ಜಿತ ಆಸ್ಪತ್ರೆಗಾಗಿ ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಮ್ಮ ಬೆಂಬಲಿಗರೊಂದಿಗೆ ಶಿರಸಿಯಿಂದ ಕುಮಟಾ ಮಾರ್ಗವಾಗಿ ಕಾರವಾರಕ್ಕೆ ಸ್ವಾಭಿಮಾನದ ಪಾದಯಾತ್ರೆ ಕೈಗೊಂಡಿದ್ದರು.