Advertisement

Uttara Kannada: ಗಣೇಶ ಉತ್ಸವಕ್ಕೆ ಉತ್ತರ ಕನ್ನಡ ಸಜ್ಜು

06:24 PM Sep 16, 2023 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಉತ್ಸವ ಸೆ. 19ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭವಾಗಲಿದೆ. ಇದಕ್ಕಾಗಿ ವಾರದಿಂದ ಮಂಟಪಗಳ ಸಜ್ಜುಗೊಳಿಸುವಿಕೆ ಪ್ರಾರಂಭವಾಗಿದೆ. ಕಾರವಾರದಲ್ಲಿ 48 ಕಡೆ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

Advertisement

ವ್ಯಾಪರಸ್ಥರ ಗಣೇಶ ಉತ್ಸವ ಸಮಿತಿ, ಮಾರುತಿ ಮಂದಿರ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೊಲೀಸ್‌ ಕ್ವಾಟರ್ಸ್‌ ಗಣಪ, ನಂದನಗದ್ದ, ಕೋಡಿಭಾಗ, ಕಾಜುಭಾಗ ಗಣೇಶ ಉತ್ಸವ ಸಮಿತಿಗಳು ಹಳೆ ಸಮಿತಿಗಳಾಗಿದ್ದು ದಶಕಗಳಿಗೂ ಹೆಚ್ಚು ಸಮಯದಿಂದ ಗಣೇಶ ಹಬ್ಬ ಆಚರಿಸುತ್ತ ಬಂದಿದೆ. ಪೊಲೀಸ್‌ ಕ್ವಾಟರ್ಸ್‌ ಗಣಪ 50 ವರ್ಷ ದಾಟಿದೆ. ಜಿಲ್ಲೆಯಲ್ಲಿ ಒಟ್ಟು 1322 ಕಡೆ ಸಾರ್ವಜನಿಕ ಗಣೇಶ ವಿಗ್ರಹ ಸ್ಥಾಪಿಸಿ ಸಮಿತಿಗಳು ಹಬ್ಬ ಆಚರಿಸಲಿವೆ. ಕಾರವಾರದಲ್ಲಿ 48, ಅಂಕೋಲಾ 80, ಕುಮಟಾ 97, ಹೊನ್ನಾವರ 163, ಭಟ್ಕಳ 109, ಶಿರಸಿ 212, ಮುಂಡಗೋಡ 107, ಯಲ್ಲಾಪುರ 84, ಸಿದ್ದಾಪುರ 160, ಜೋಯಿಡಾ 35, ಹಳಿಯಾಳ 161,ದಾಂಡೇಲಿ 66 ಕಡೆ ಗಣೇಶ ವಿಗ್ರಹಗಳ ಸ್ಥಾಪನೆ ಸಾರ್ವಜನಿಕ ಸಮಿತಿಗಳಿಂದ ನಡೆಯಲಿದೆ.

ಕಲಾವಿದರಿಂದ ಮಣ್ಣಿನ ಗಣೇಶ ತಯಾರಿ: ವಿವಿಧೆಡೆ ಗಣೇಶ ವಿಗ್ರಹಗಳಿಗೆ ಅಂತಿಮ ಟಚ್‌ ನೀಡುವಲ್ಲಿ ಕಲಾವಿದರು ನಿರತರಾಗಿದ್ದಾರೆ. ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ವಿಗ್ರಹಗಳಿಗೆ ನಿಷೇಧ ಇರುವ ಕಾರಣ ಮಣ್ಣಿನ ವಿಗ್ರಹಗಳಿಗೆ ಭಾರೀ ಬೇಡಿಕೆ ಇದೆ. ಮಣ್ಣಿನ ಗಣೇಶ ವಿಗ್ರಹಗಳು ದುಬಾರಿಯಾಗಿವೆ. ಚಿಕ್ಕ ಗಣೇಶ ವಿಗ್ರಹಕ್ಕೆ 500 ರೂ. ಇದೆ. ಒಂದು ಅಡಿ ಗಣೇಶ ವಿಗ್ರಹಕ್ಕೆ ಸಾವಿರದಿಂದ ಸಾವಿರದೈನೂರು ಇದೆ. ಹತ್ತು ಹನ್ನೆರಡು ಅಡಿಯ ಸಾರ್ವಜನಿಕ ಗಣೇಶ ಮೂರ್ತಿಗಳನ್ನು 80 ಸಾವಿರದಿಂದ ಒಂದು ಲಕ್ಷ, ಎರಡು ಲಕ್ಷ ರೂ.ತನಕ ಹಣ ನೀಡಿ , ಆರ್ಡರ್‌ ಕೊಟ್ಟು ತರಿಸಲಾಗುತ್ತಿದೆ. ಜಿಗುಟು ಮಣ್ಣಿನ ಕೊರತೆ ಹಾಗೂ ಕಾರ್ಮಿಕರ ಕೊರತೆ ಕಲಾವಿದರನ್ನು ಹೆಚ್ಚು ಶ್ರಮ ಹಾಕುವಂತೆ ಮಾಡಿದೆ. ಕಲಾತ್ಮಕ ಕೆಲಸ, ಬಣ್ಣ ಹಾಕುವಿಕೆ ಹಾಗೂ ಅಲಂಕಾರಕ್ಕೆ ಕಳೆದ 60 ದಿನಗಳಿಂದ ಕಲಾವಿದರು ವಿಗ್ರಹ ತಯಾರಿಕೆಯಲ್ಲಿ ನಿರತರಾಗಿದ್ದರು. ಈಗ ಗಣೇಶ ವಿಗ್ರಹಗಳಿಗೆ
ಅಂತಿಮ ಟಚ್‌ ನೀಡಲಾಗುತ್ತಿದೆ.

ಪರಿಸರ ಇಲಾಖೆಯಿಂದ ಎಚ್ಚರಿಕೆ: ವಿಗ್ರಹ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಹಾಗೂ ಅಪಾಯಕಾರಿ ಬಣ್ಣ ಬಳಸದಂತೆ ಪರಿಸರ ಇಲಾಖೆ ಎಚ್ಚರಿಸಿದೆ. ಪಟಾಕಿ ಹೆಚ್ಚು ಸುಡದಂತೆ ಸಾರ್ವಜನಿಕರಲ್ಲಿ ವಿನಂತಿಸಿದೆ. ಡಿಜೆ ಮ್ಯೂಜಿಕ್‌ ದೇವರ ಎದುರು ಹಾಕದಂತೆ ಜಿಲ್ಲಾಡಳಿತ, ಜಿಲ್ಲಾಧಿಕಾರಿ ವಿನಂತಿಸಿದ್ದಾರೆ. ಧ್ವನಿವರ್ಧಕ ಹಾಕಿ ಜನರ ಶಾಂತಿ ಭಂಗ ಮಾಡದಂತೆ ಹಾಗೂ ಭಕ್ತಿಯಿಂದ ಗಣೇಶ ಹಬ್ಬ ಆಚರಿಸುವಂತೆ ಜಿಲ್ಲಾಡಳಿತ ಹೇಳಿದೆ. ಕೆರೆ ಬಾವಿ ನದಿಗಳಿಗೆ ವಿಗ್ರಹ ವಿಸರ್ಜನೆ ಮಾಡದಂತೆ ಸಹ ಜಿಲ್ಲಾಧಿಕಾರಿ ಗಂಗೂಬಾಯಿ ವಿನಂತಿಸಿದ್ದಾರೆ. ಸಾರ್ವಜನಿಕ ಸಮಿತಿ, ಶಾಂತಿ ಸ್ಥಾಪನಾ ಸಭೆ ನಡೆಸಿ, ಪ್ರಶಾಂತ ವಾತಾವರಣದಲ್ಲಿ ಹಬ್ಬ ಮಾಡುವಂತೆ ಸೂಚಿಸಲಾಗಿದೆ.

ಗಣೇಶ ವಿಗ್ರಹಗಳನ್ನು ಸ್ಥಳೀಯ ಸಂಸ್ಥೆ ವ್ಯವಸ್ಥೆ ಮಾಡಿದ ಪಾಂಡ್‌ಗಳಲ್ಲಿವಿಸರ್ಜನ ಮಾಡಬೇಕು. ಪರಿಸರ ಮಾಲಿನ್ಯ ಮಾಡಬಾರದು. ಮಂಟಪಗಳಲ್ಲಿ ಪ್ಲಾಸ್ಟಿಕ್‌ ಪ್ಲೆಕ್ಸ್‌ ಅಳವಡಿಸಬೇಡಿ.
ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ

Advertisement

ಸಾಂಪ್ರದಾಯಿಕ ವಾದ್ಯಮೇಳ ಬಳಸಿ ಗಣೇಶ ಹಬ್ಬ ಮಾಡುತ್ತೇವೆ. ಈ ಸಲ ಡಿಜೆ ಮ್ಯೂಜಿಕ್‌ ಬಳಸುವುದಿಲ್ಲ.
ಗಣೇಶ್‌ ಶಿರ್ಸಾಟ್‌, ಕಾರವಾರ

*ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next