Advertisement

16ನೇ ಶತಮಾನದ ವೀರಗಲ್ಲು ಪತ್ತೆ

04:30 PM Sep 15, 2021 | Team Udayavani |

ಶೃಂಗೇರಿ: ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯ ಗಿಣಕಲ್‌ಗ್ರಾಮದ ಹುಂಚಿಗುಡ್ಡದಲ್ಲಿ 16ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ಶಿಕ್ಷಕ ನ. ಸುರೇಶ್‌ ಕಲ್ಕೆರೆ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾಣತತ್ವ ಸಂಶೋಧನಾರ್ಥಿ ಶೈಲ ಅನಂತರಾಮು ಅವರು ಭಾನುವಾರ ಪತ್ತೆ ಮಾಡಿದ್ದಾರೆ.

Advertisement

ಗ್ರಾನೈಟ್‌ “ಕಣ’ಶಿಲೆಯಲ್ಲಿ ಮಾಡಲ್ಪಟ್ಟ ಈ ವೀರಗಲ್ಲು ಮೂರು ಪಟ್ಟಿಕೆಯ ಕೆತ್ತನೆಯನ್ನು ಒಳಗೊಂಡಿದ್ದು 16ನೇ ಶತಮಾನದ ಕನ್ನಡ ಲಿಪಿಯನ್ನು ಹೊಂದಿದೆ. ಶಾಸನವು 90 ಸೆಂ.ಮೀ ಎತ್ತರ ಹಾಗೂ 60 ಸೆಂ.ಮೀ ಅಗಲವಿದೆ. ವೀರಗಲ್ಲಿನ ಎರಡು ಪಟ್ಟಿಕೆಯಲ್ಲಿ ಶಾಸನಗಳಿವೆ. ಆದರೆ ಅವು ನಾಶಗೊಂಡಿವೆ.

ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಬಿಲ್ಲು- ಬಾಣ ಹಾಗೂ ಖಡ್ಗ- ಗುರಾಣಿಯನ್ನು ಹಿಡಿದುಕೊಂಡು ಹೋರಾಟ ಮಾಡುವ ದೃಶ್ಯವಿದೆ. ಎರಡನೇ ಪಟ್ಟಿಕೆಯಲ್ಲಿ ಮರಣ ಹೊಂದಿದ ವೀರನು ನಂದಿಯ ಪಕ್ಕದಲ್ಲಿ ಕೈಮುಗಿದು ನಿಂತಿರುವ ಹಾಗೂ ಕುಳಿತಿರುವ ಕೆತ್ತನೆ ಇದೆ. ಕೊನೆಯ ಹಂತದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ,ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಕೈಮುಗಿದು ನಿಂತಿರುವ ವೀರ ಮತ್ತು ಕಾಲುದೀಪದ ಕೆತ್ತನೆ ಮಾಡಲಾಗಿದೆ.

ಯುದ್ಧದಲ್ಲಿ ವೀರರಿಬ್ಬರೂ ಮರಣ ಹೊಂದಿರಬಹುದು. ಹಾಗಾಗಿ ಸಾಂಕೇತಿಕವಾಗಿ ಒಬ್ಬ ವೀರನನ್ನು ನಂದಿಯ ಪಕ್ಕದಲ್ಲಿ ಮತ್ತೊಬ್ಬ ವೀರನನ್ನು ಶಿವಲಿಂಗದ ಸಮೀಪ ತೋರಿಸಿರಬಹುದು. ಇದೇ ಗ್ರಾಮದಲ್ಲಿ ಇನ್ನಷ್ಟು ವೀರಗಲ್ಲು ಹಾಗೂ ಶಾಸನೋಕ್ತ ಮಾಸ್ತಿಗಲ್ಲು ಪತ್ತೆ ಮಾಡಲಾಗಿದೆ ಎಂಬುದು ಸಂಶೋಧನಾರ್ಥಿ ಶೈಲ ಅನಂತರಾಮು ಅವರ ಅನಿಸಿಕೆ. ಇದೇ ವೀರಗಲ್ಲಿನಲ್ಲಿ ಇರುವ ಲಿಪಿಯು ಸವೆದು ಹೋಗಿದ್ದು ನಿಖರವಾದ ಮಾಹಿತಿ ತಿಳಿಯುತ್ತಿಲ್ಲ. ಆದರೆ ಮೇಲ್ನೋಟಕ್ಕೆಇದು ವೀರಗಲ್ಲು ಆಗಿರಬಹುದು ಎಂದು ಶಿಕ್ಷಕ ನ. ಸುರೇಶ್‌ಕಲ್ಕರೆ ಅವರ ಅಭಿಪ್ರಾಯ. ಸ್ಥಳೀಯರಾದ ಸೂರಪ್ಪಹೆಗ್ಡೆವೀರಗಲ್ಲು ಪತ್ತೆ ಹಚ್ಚುವಲ್ಲಿ ಸಹಕಾರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next