ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಲಿ ಇರುವ “ ಲವ್ ಜಿಹಾದ್” ಕಾಯ್ದೆಗೆ ತಿದ್ದುಪಡಿ ತಂದಿದ್ದು, ಈ ಕಾಯ್ದೆಯಡಿ ದೋಷಿ ಎಂದು ಸಾಬೀತಾದರೆ ಜೀವಾವಧಿ ಶಿಕ್ಷೆ ಗುರಿಯಾಗಬೇಕಾಗಲಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧ (ತಿದ್ದುಪಡಿ-Amendment) ಮಸೂದೆಯಲ್ಲಿ ಲವ್ ಜಿಹಾದ್ ಅಪರಾಧದಲ್ಲಿ ತೊಡಗಿದ್ದವರಿಗೆ ಭಾರೀ ಮೊತ್ತದ ದಂಡ ವಿಧಿಸುವುದರ ಜೊತೆಗೆ, ಜೀವಾವಧಿ ಶಿಕ್ಷೆ ನೀಡುವಂತೆ ಪ್ರಸ್ತಾಪಿಸಿರುವುದಾಗಿ ತಿಳಿಸಿದೆ.
ಆದಿತ್ಯನಾಥ್ ನೇತೃತ್ವದ ಸರ್ಕಾರ ಲವ್ ಜಿಹಾದ್ ಬಗ್ಗೆ ಕಠಿನ ನಿಲುವು ತಳೆದಿತ್ತು. 2017ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಲವ್ ಜಿಹಾದ್ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು.
ನೂತನ ಮಸೂದೆಯಲ್ಲಿ ಪ್ರಕರಣದ ಸಂತ್ರಸ್ತರ ಔಷಧೋಪಚಾರದ ಖರ್ಚನ್ನು ಭರಿಸಲು ನ್ಯಾಯಾಲಯಗಳಿಗೆ ದಂಡ ವಿಧಿಸುವ ಅವಕಾಶವನ್ನೂ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಲವ್ ಜಿಹಾದ್ ತಿದ್ದುಪಡಿ ಕಾಯ್ದೆಯಲ್ಲಿ ಲವ್ ಜಿಹಾದ್ ಕುರಿತು ಯಾರು ಬೇಕಾದರು ವರದಿ (ದೂರು) ಮಾಡಬಹುದಾಗಿದೆ. ಹಿಂದಿನ ಕಾಯ್ದೆಯಲ್ಲಿ ಲವ್ ಜಿಹಾದ್ ಬಗ್ಗೆ ಕೇವಲ ಸಂತ್ರಸ್ತೆ, ಅವರ ಪೋಷಕರು, ಸಹೋದರ, ಸಹೋದರಿ ಮಾತ್ರ ದೂರು ನೀಡಬಹುದಾಗಿತ್ತು. ಆದರೆ ನೂತನ ಮಸೂದೆಯಲ್ಲಿ ಯಾರು ಬೇಕಾದರೂ ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದು ತಿಳಿಸಿದೆ.