Advertisement

ಅಪರಾಧದಲ್ಲಿ ಉತ್ತರಪ್ರದೇಶ ನಂ.1

12:27 PM Feb 05, 2018 | Team Udayavani |

ಬೆಂಗಳೂರು: ನ್ಯಾಷನಲ್‌ ಕ್ರೈಂ ರೇಟ್‌ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಅಪರಾಧ ಪ್ರಕರಣಗಳು ಹೆಚ್ಚಿದ್ದು, ಉತ್ತರ ಪ್ರದೇಶ ಅಪರಾಧ ಪ್ರಕರಣಗಳಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ. 

Advertisement

ಮೋದಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಮಾಣ 11.5ರಷ್ಟಿದ್ದು ಮೊದಲ ಸ್ಥಾನ ಪಡೆದಿದೆ. ಅದೇ ರೀತಿ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಮೋದಿಯವರ ತವರು ಗುಜರಾತ್‌ ನಂತರದಲ್ಲಿದ್ದು, ಕರ್ನಾಟಕ 10ನೇ ಸ್ಥಾನದಲ್ಲಿದೆ ಎಂದರು.

ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ 60 ಕರ ಸೇವಕರ ಸಜೀವ ದಹನ, 2 ಸಾವಿರ ಜನರ ಹತ್ಯೆಯಾಗಿದೆ. ಅವರ ಹತ್ಯಾಕಾಂಡವನ್ನು ನೋಡಿದ ಅಮೆರಿಕ ಮೋದಿಗೆ ವೀಸಾ ನೀಡಿರಲಿಲ್ಲ. ಮೋದಿಯವರು ಮೊದಲು ತಮ್ಮ ರಾಜ್ಯವನ್ನು ಸರಿಪಡಿಸಿಕೊಳ್ಳಲಿ, ಇಲ್ಲಿಗೆ ಬಂದು ರಾಜಕಾರಣ ಮಾಡುವುದು ಬೇಡ ಎಂದು ಟೀಕಿಸಿದರು. 

ರಾಜ್ಯದಲ್ಲಾಗಿರುವ ಕೊಲೆಗಳು ಬಹುತೇಕ ವೈಯಕ್ತಿಕ ಕಾರಣಗಳಿಗೆ ನಡೆದಿದ್ದು, 9 ಕೋಮು ಗಲಭೆಯಿಂದ ನಡೆದಿವೆ. 5 ವರ್ಷದ ಬಿಜೆಪಿ ಅಧಿಕಾರದ ಅವಧಿಯಲ್ಲಿ 96 ಕೊಲೆ ನಡೆದಿದ್ದವು. ನಮ್ಮ ಅವಧಿಯಲ್ಲಿ 60 ಕೊಲೆಗಳಾಗಿದ್ದು, ಬಹುತೇಕ ಕೊಲೆಗಳ ಹಿಂದೆ ಸಂಘ ಪರಿವಾರ, ಬಿಜೆಪಿಯ ಕುಮ್ಮಕ್ಕಿದೆ ಎಂದು ದೂರಿದರು. 

ಮೋದಿಯವರು ತಮ್ಮ ಪಕ್ಕದಲ್ಲಿ ಜೈಲಿಗೆ ಹೋದವರು, ಸದನದಲ್ಲಿ ನೀಲಿ ಚಿತ್ರ ನೋಡಿದವರು, ಗಣಿ ಲೂಟಿ ಮಾಡಿದವರನ್ನು ಕೂರಿಸಿಕೊಂಡು ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯಿಲ್ಲ. ಅವರು ತಮ್ಮ ತಟ್ಟೆಯಲ್ಲಿನ ಹೆಗ್ಗಣವನ್ನು ಮೊದಲು ನೋಡಲಿ, ನಮ್ಮ ತಟ್ಟೆಯಲ್ಲಿನ ನೊಣ ಹುಡುಕುವುದು ಬೇಡ ಎಂದು ಟೀಕಿಸಿದರು. 

Advertisement

ಸುಳ್ಳು ಹೇಳುವುದೇ ಬಿಜೆಪಿ ಸಾಧನೆ
ಬೆಂಗಳೂರು: ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ದೂರಿದರು. ಕಗ್ಗಲೀಪುರದರಲ್ಲಿ ನಡೆದ “ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ವರ್ತನೆ ವಿರುದ್ಧ ಟೀಕಾಪ್ರಹಾರ ನಡೆಸಿದರು. ಬಿಜೆಪಿಯವರಿಗೆ ಹೇಳಿಕೊಳ್ಳಲು ಏನೂ ವಿಷಯ ಇಲ್ಲ. ಕೇವಲ ಸುಳ್ಳು ಹೇಳುವುದೇ ಬಿಜೆಪಿ ನಾಯಕರ ಸಾಧನೆ. ಸುಳ್ಳು ಹೇಳಿಕೊಂಡು ಕಾಲಕಳೆಯುತ್ತಿರುವ ಬಿಜೆಪಿ ಮುಖಂಡರಿಗೆ ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಯೋಜನೆಗಳಿಗೆ ಈಗಾಗಲೇ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸರ್ಕಾರದ ಜನಪ್ರಿಯ ಯೋಜನೆಗಳನ್ನು ಅರಗಿಸಿಕೊಳ್ಳಲು ಬಿಜೆಪಿ ಮುಖಂಡರಿಗೆ ಆಗುತ್ತಿಲ್ಲ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ನಡೆಸಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next