ಲಕ್ನೋ: ಉತ್ತರಪ್ರದೇಶದಲ್ಲಿ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮೇ 31ರವರೆಗೆ ಕೋವಿಡ್ ಕರ್ಫ್ಯೂವನ್ನು ವಿಸ್ತರಿಸಲಾಗಿದೆ. ಇದೀಗ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದಿಂದ ಕೋವಿಡ್ ಕರ್ಫ್ಯೂವನ್ನು ಭಾಗಶಃವಾಗಿ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಇದನ್ನೂ ಓದಿ:ಚಂಡಮಾರುತ ಪರಿಶೀಲನಾ ಸಭೆ: ಮಮತಾ ಬ್ಯಾನರ್ಜಿಗಾಗಿ 30 ನಿಮಿಷ ಕಾದ ಪ್ರಧಾನಿ ಮೋದಿ
ಉತ್ತರಪ್ರದೇಶದ ಕೆಲವೆಡೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಆದರೆ ಕಂಟೈನ್ ಮೆಂಟ್ ಜೋನ್ ಗಳ ಬಂದ್ ಮುಂದುವರಿಸಲಾಗಿದೆ. ಹಂತ, ಹಂತವಾಗಿ ಕೋವಿಡ್ ಕರ್ಫ್ಯೂವನ್ನು ತೆರವುಗೊಳಿಸಲಾಗುವುದು ಎಂದು ವರದಿ ಹೇಳಿದೆ.
ಅತೀ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಲಾಕ್ ಡೌನ್ ತೆರವುಗೊಳಿಸುವ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಕಿರಾಣಿ ಅಂಗಡಿ ಮತ್ತು ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದೆ. ಕಟ್ಟಡ ಕಾಮಗಾರಿ ಚಟುವಟಿಕೆಗೆ ಅವಕಾಶ ನೀಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.