Advertisement

ಉ.ಪ್ರ. ಗೆಲ್ಲುವುದೇ ಗುರಿ: ರಾಹುಲ್‌ ಗಾಂಧಿ ಘೋಷಣೆ

12:30 AM Feb 12, 2019 | |

ಲಕ್ನೋ: ಉತ್ತರ ಪ್ರದೇಶದಲ್ಲಿ ಮರಳಿ ಪಕ್ಷವನ್ನು ಅಧಿ ಕಾರಕ್ಕೆ ತರುವುದೇ ಗುರಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಹೋದರಿ ಪ್ರಿಯಾಂಕಾ ವಾದ್ರಾ ಸೋಮವಾರ ಲಕ್ನೋದಲ್ಲಿ ನಡೆಸಿದ ಮೊದಲ ರೋಡ್‌ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು

Advertisement

ಉತ್ತರ ಪ್ರದೇಶದಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದ ರಾಹುಲ್‌, “ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾರನ್ನು ಉತ್ತರ ಪ್ರದೇಶಕ್ಕಾಗಿ ಪ್ರಧಾನ ಕಾರ್ಯ ದರ್ಶಿಗಳನ್ನಾಗಿ ಮಾಡಿದ್ದೇನೆ. ಸದ್ಯ ಇರುವ ಸರಕಾರದಿಂದ ಉಂಟಾಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಅವರಿಗೆ ಸೂಚಿಸಿದ್ದೇನೆ. ಲೋಕಸಭೆಯ ಜತೆಗೆ 2022ರ ವಿಧಾನಸಭೆಯನ್ನು ಹೆಚ್ಚು ಕೇಂದ್ರೀಕರಿಸಿ ಕೆಲಸ ಮಾಡಲು ಸೂಚಿಸಿದ್ದೇನೆ’ ಎಂದು ಹೇಳಿದ್ದಾರೆ. ಪ್ರಿಯಾಂಕಾ, ಸಿಂಧಿಯಾ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧಿಸಲಿ ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವಿರಾಮವೇ ಇಲ್ಲ 
ಯುವಕರು, ರೈತರಿಗೆ ಸೇರಿದ ಸರಕಾರ ರಚನೆ ಮಾಡದೆ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದಾರೆ ಕಾಂಗ್ರೆಸ್‌ ಅಧ್ಯಕ್ಷ. ಬಿಜೆಪಿ ನೇತೃತ್ವದ ಸರಕಾರವನ್ನು ಕಿತ್ತೂಗೆಯಬೇಕು ಎಂದು ಹೇಳಿದ್ದಾರೆ. ರಫೇಲ್‌ ಡೀಲ್‌ನಲ್ಲಿ ಅವ್ಯವಹಾರ ಉಂಟಾಗಿದೆ ಎಂದು ಮತ್ತೂಮ್ಮೆ ಆರೋಪಿಸಿದ ಅವರು, “ಚೌಕಿದಾರ್‌ ಚೋರ್‌ ಹೈ’ ಎಂದು ಹೇಳಿದ್ದಾರೆ. ಜತೆಗೆ ಜನರತ್ತ ಕೈ ತೋರಿಸಿ ಅವರಿಂದಲೂ ಅದೇ ಘೋಷಣೆ ಮಾಡಿಸಿದ್ದಾರೆ. ಚೌಕಿದಾರ ರೈತರ ಸಾಲ ಮನ್ನಾ ಮಾಡದೆ, ಉದ್ಯಮಪತಿಗಳ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ದೂರಿದ್ದಾರೆ. 

ಬಳಿಕ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ರಾಹುಲ್‌ ಪ್ರಧಾನಿ, ಮೋದಿಯವರ ಕಾರ್ಯವೈಖರಿ ಯುವ ಜನರು, ರೈತರು, ಜನ ಸಾಮಾನ್ಯರ ಮುಂದೆ ಬಟಾ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಪಕ್ಷಕ್ಕೆ ಯಾವ ವಿಚಾರ ಕೈಗೆತ್ತಿಕೊಂಡು ಹೋರಾಟ ನಡೆಸಬೇಕು ಎಂಬ ಪರಿಸ್ಥಿತಿ ಇಲ್ಲ. ಈಗ ಇರುವುದರ ಜತೆಗೇ, ಉತ್ತರ ಪ್ರದೇಶದಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಿದ್ದಾರೆ. 

ಮಾಯಾ ಬಗ್ಗೆ ಗೌರವ ಇದೆ
ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಬಗ್ಗೆ ಗೌರವ ಇದೆ. ಇದರ ಹೊರತಾಗಿಯೂ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೂಟದ ಜತೆಗೆ ಕಾಂಗ್ರೆಸ್‌ ಬಿರುಸಿನ ಹೋರಾಟ ನಡೆಸಲಿದೆ ಎಂದು ಸಾರಿದ್ದಾರೆ. 

Advertisement

ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಹಾಲಿ ಸರಕಾರ ಶೀಘ್ರದಲ್ಲಿಯೇ ತೊಲಗಲಿದೆ. ಬದಲಾ ವಣೆಯು ಸದ್ಯದಲ್ಲಿಯೇ ನಡೆಯಲಿದೆ ಎಂದಿದ್ದಾರೆ. ರಫೇಲ್‌ ಕಟೌಟ್‌ ಪ್ರದರ್ಶನ ಚೌಕಿದಾರ್‌ ಚೋರ್‌ ಹೈ ಎಂಬ ಘೋಷಣೆಯನ್ನು ಜನರಿಂದ ಹೇಳಿಸುವ ಸಮಯದಲ್ಲಿ ರಾಹುಲ್‌ ಅವರು ರಫೇಲ್‌ ವಿಮಾನದ ಕಟೌಟ್‌ ಅನ್ನು ಕೈಯಲ್ಲಿ ಎತ್ತಿ ಪ್ರದರ್ಶಿಸಿದರು.

ಟ್ವಿಟರ್‌ಗೂ ಎಂಟ್ರಿ: 1 ಲಕ್ಷ ಫಾಲೋವರ್‌ಗಳು
ಉ.ಪ್ರದೇಶದ ರೋಡ್‌ಶೋ ಮೂಲಕ ರಾಜಕೀಯಕ್ಕೆ ಅದ್ದೂರಿ ಎಂಟ್ರಿ ಕೊಟ್ಟ ಪ್ರಿಯಾಂಕಾ ವಾದ್ರಾ ಅವರು, ಸೋಮವಾರವೇ ಅಧಿಕೃತವಾಗಿ ಟ್ವಿಟರ್‌ಗೂ ಪ್ರವೇಶ ಪಡೆದಿದ್ದಾರೆ. ಅವರು ಟ್ವಿಟರ್‌ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಫಾಲೋವರ್‌ಗಳು ಹುಟ್ಟಿಕೊಂಡಿದ್ದಾರೆ. ಪ್ರಿಯಾಂಕಾ ಅವರು ತಮ್ಮ ಸಹೋದರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಾಜಸ್ಥಾನ ಸಿಎಂ ಅಶೋಕ್‌ ಗೆಹೊಟ್‌, ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌, ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಸೇರಿ 7 ಜನರನ್ನು ಸದ್ಯ ಫಾಲೋ ಮಾಡುತ್ತಿದ್ದಾರೆ.

ಪ್ರಿಯಾಂಕಾ ಪರಿಪೂರ್ಣ ಪತ್ನಿ: ರಾಬರ್ಟ್‌ ವಾದ್ರಾ
ಪ್ರಿಯಾಂಕಾ ವಾದ್ರಾ ಪರಿಪೂರ್ಣ ಪತ್ನಿ. ಈಗ ಅವಳನ್ನು ದೇಶದ ಜನರಿಗೆ ಒಪ್ಪಿಸಿದ್ದೇವೆ ಎಂದು ಪತಿ ರಾಬರ್ಟ್‌ ವಾದ್ರಾ ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿರುವ ಅವರು, “ಪಿ. ಉತ್ತರ ಪ್ರದೇಶ, ಭಾರತದ ಜನರಿಗೆ ಸೇವೆ ಸಲ್ಲಿಸುವ ನಿನ್ನ ಹೊಸ ಪ್ರಯಾಣಕ್ಕೆ ನನ್ನ  ಶುಭಾಶಯಗಳು. ನೀನು ನನ್ನ ಪರಿಪೂರ್ಣ ಸ್ನೇಹಿತೆ, ಪತ್ನಿ. ಇಬ್ಬರು ಮಕ್ಕಳ ಒಳ್ಳೆಯ ತಾಯಿ. ನೀವೆಲ್ಲರೂ (ದೇಶದ ಜನ) ಆಕೆ ಯನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ. 

ರಾಹುಲ್‌ ಮಾತು; ಪ್ರಿಯಾಂಕಾ ಮೌನ
25 ಕಿ.ಮೀ. ರೋಡ್‌ ಶೋನಲ್ಲಿ ಗಮನ ಸೆಳೆದದ್ದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ. ಆದರೆ ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಮುಂಚೂಣಿಯಲ್ಲಿ ಮಾತನಾಡಿದ್ದು ಸಹೋದರ ರಾಹುಲ್‌ ಗಾಂಧಿ. ಆದರೆ ಪ್ರಿಯಾಂಕಾ ವಾದ್ರಾ ಮಾತ್ರ ಮೌನದಿಂದಲೇ ಇದ್ದದ್ದು ಕುತೂಹಲ ಕೆರಳಿಸಿತ್ತು. ಕುಳಿತೇ ಬಿಟ್ಟರು: ರೋಡ್‌ಶೋ ಸಾಗುತ್ತಿದ್ದಂತೆ ನಿಂತು ಕೊಂಡಿದ್ದ ರಾಹುಲ್‌ ಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ವಿದ್ಯುತ್‌ ತಂತಿಗೆ ತಾಕದಂತೆ ಒಂದು ಕ್ಷಣ ಕುಳಿತೇ ಬಿಟ್ಟರು. “ಪ್ರಿಯಾಂಕಾ ಸೇನಾ’ ಎಂಬ ಸಂಘಟನೆ ಸದಸ್ಯರು ಕಾಂಗ್ರೆಸ್‌ ನಾಯಕಿಯ ಫೋಟೋ ಇರುವ ಟಿ ಶರ್ಟ್‌ ಧರಿಸಿ ಕೊಂಡು ರೋಡ್‌ಶೋನಲ್ಲಿ ಪಾಲ್ಗೊಂಡರು.

ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಭಾರಿ ಪರಿಣಾಮ ಬೀರುತ್ತಾರೆ ಎಂದು ಅನಿಸುತ್ತಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಅವರು ಪ್ರಭಾವಶಾಲಿಯಾಗುವ ಸಾಧ್ಯತೆ ಇದೆ. ಶೀಘ್ರದಲ್ಲೇ ನಡೆವ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ.
ಪ್ರಶಾಂತ್‌ ಕಿಶೋರ್‌, ಜೆಡಿಯು ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next