Advertisement

ಜೂಜಲ್ಲಿ ಪತ್ನಿ, ಮಕ್ಕಳ ಅಡವಿಟ್ಟ!

10:10 AM Mar 28, 2018 | Team Udayavani |

ನವದೆಹಲಿ: ಮಹಾಭಾರತದಲ್ಲಿ ಜೂಜಾಡುವಾಗ ಹೆಂಡತಿಯನ್ನು ಅಡವಿಟ್ಟ ಕಥೆ ಕೇಳಿರುತ್ತೀರಿ. ಕಲಿಯುಗದಲ್ಲೂ ಅಂಥ ಘಟನೆ ನಡೆದಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ವ್ಯಕ್ತಿಯೊಬ್ಬ ಜೂಜಿನಲ್ಲಿ ಹೆಂಡತಿ ಮಾತ್ರವಲ್ಲದೆ ಮಕ್ಕಳನ್ನೂ ಅಡವಿಟ್ಟು ಪಾಂಡವರನ್ನೂ ಮೀರಿಸಿದ್ದಾನೆ. ಈ ಆಸಾಮಿಯ ಹೆಸರು ಮೊಹ್ಸಿನ್‌. ಜೂಜಾಡುವ ಚಟ ಹತ್ತಿಸಿಕೊಂಡಿದ್ದ ಈತ ಜೂಜಿನಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಅಡ ಇಟ್ಟು ಸೋತು, ಜೂಜು ಗೆದ್ದ ವ್ಯಕ್ತಿಗೆ ಅವರನ್ನು ಬಿಟ್ಟುಕೊಡಲು ಮುಂದಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿದ್ದು 2015ರಲ್ಲಿ. ಮಹಿಳೆ ಈ ಸಂಬಂಧ ದೂರು ದಾಖಲಿಸಲು ಪ್ರಯತ್ನಿಸಿದ್ದರು. ಆದರೆ 2 ವರ್ಷಗಳ ಕಾಲ ಪೊಲೀಸರು ಪ್ರಕರಣವನ್ನೇ ದಾಖಲಿಸಿಕೊಂಡಿರಲಿಲ್ಲ. 

Advertisement

ನಡೆದಿದ್ದಿಷ್ಟು: ಮಹಿಳೆಯ ಪತಿ ಮೊಹ್ಸಿನ್‌ ಅದೇ ಊರಿನ ಇಮ್ರಾನ್‌ ಎಂಬಾತನೊಂದಿಗೆ ಜೂಜಾಡುವ ವೇಳೆ ಹೆಂಡತಿ, ಮಕ್ಕಳನ್ನು ಅಡವಿಟ್ಟು, ನಂತರ ಆಟದಲ್ಲಿ ಸೋತಿದ್ದ. ಜೂಜು ಗೆದ್ದ ಇಮ್ರಾನ್‌, ನೇರವಾಗಿ ಮೊಹ್ಸಿನ್‌ ಮನೆಗೆ ತೆರಳಿ ಆತನ ಪತ್ನಿ ಮತ್ತು ಮಕ್ಕಳನ್ನು ಎಳೆದುಕೊಂಡು ಹೋಗಿದ್ದ. ಮಹಿಳೆ ಈ ಕುರಿತು ಪಂಚಾಯಿತಿಗೆ ದೂರು ನೀಡಿದ್ದಳು. ಆದರೆ, ಗೆದ್ದ ವ್ಯಕ್ತಿಗೆ ಒಬ್ಬ ಮಗನನ್ನು ನೀಡಲು ಪಂಚಾಯಿತಿ ಆದೇಶಿಸಿತ್ತು. ಇದನ್ನು ವಿರೋಧಿಸಿ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಅವರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರು. ಕೊನೆಗೆ ಕಳೆದ ವಾರ ಮಹಿಳೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ಈಗ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next