ಲಕ್ನೋ: ಉತ್ತರಪ್ರದೇಶದ ಶೇ.68ರಷ್ಟು ಗ್ರಾಮಗಳು ಕೋವಿಡ್ 19 ಸೋಂಕು ಮುಕ್ತವಾಗಿರುವುದಾಗಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮಂಗಳವಾರ(ಮೇ 18) ತಿಳಿಸಿದ್ದಾರೆ.
ಇದನ್ನೂ ಓದಿ:ಸಮಾಜ ಸೇವೆಗೆ ಕುಹಕವಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟ ಉಪೇಂದ್ರ
ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ 8,737 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 21,108 ಸೋಂಕಿತರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಉತ್ತರಪ್ರದೇಶದಲ್ಲಿ ಒಟ್ಟು 1,36,342 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಅಂಕಿಅಂಶ ತಿಳಿಸಿದೆ.
ಲಸಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಾಮಾನ್ಯ ಸರ್ವೀಸ್ ಸೆಂಟರ್ ಗಳಲ್ಲಿ ಲಸಿಕೆ ನೋಂದಣಿ ಆರಂಭಿಸಲಾಗುವುದು ಎಂದು ತಿಳಿಸಿದೆ.
ಲಸಿಕೆ ಪಡೆಯಲು ಕೋವಿನ್ ಆ್ಯಪ್ಲಿಕೇಶನ್ ನಲ್ಲಿ ನೋಂದಾಯಿಸಲು ಗ್ರಾಮೀಣ ಪ್ರದೇಶದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸಾದ್ ವಿವರಿಸಿದ್ದಾರೆ. ರಾಜ್ಯಾದ್ಯಂತ 1.3 ಲಕ್ಷ ಸಾಮಾನ್ಯ ಸರ್ವೀಸ್ ಸೆಂಟರ್ ಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.