ಹೊನ್ನಾವರ: ಜಿಲ್ಲೆಯಲ್ಲಿ ಜೀವರಕ್ಷಕ ಆಸ್ಪತ್ರೆಗಳು ಬೇಕು ಎಂಬ ಚಳವಳಿ ಆರಂಭವಾಗಿದೆ. ಏಳು ಸಾವಿರಕ್ಕೂ ಹೆಚ್ಚು ಗಣ್ಯರು, ಶ್ರೀಸಾಮಾನ್ಯರು, ರಾಜಕಾರಣಿಗಳು ಧ್ವನಿಗೂಡಿಸಿದ್ದಾರೆ. ಮುಖ್ಯಮಂತ್ರಿಗಳು ವರದಿ ತರಿಸಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೆಲವು ರಾಜಕಾರಣಿಗಳು ನಾವು ಈಗಾಗಲೇ ಪತ್ರ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ !
ತಲೆಗೆ ಗಂಭೀರ ಗಾಯಗಳಾದರೆ, ಹೃದಯಕ್ಕೆ ಪೆಟ್ಟಾದರೆ ಅಥವಾ ಗಂಭೀರ ಹೃದಯಾಘಾತವಾದರೆ, ಜೀರ್ಣಾಂಗಕ್ಕೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾದರೆ, ಹೆರಿಗೆ ಸಮಯದಲ್ಲಿ ಸಮಸ್ಯೆ ಉಂಟಾದರೆ ಅರ್ಧ ಗಂಟೆಯಿಂದ ಎರಡು ತಾಸಿನೊಳಗೆ ತುರ್ತು ಚಿಕಿತ್ಸೆ ನೀಡಿದರೆ ವ್ಯಕ್ತಿ ಬದುಕಿಕೊಳ್ಳುತ್ತಾನೆ. ಇದನ್ನು ವೈದ್ಯರು ಗೋಲ್ಡನ್ ಪೀರಿಯಡ್ ಅನ್ನುತ್ತಾರೆ. ಇಂತಹ ಚಿಕಿತ್ಸೆಗೆ ಜಿಲ್ಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಇದರ ಹೊರತಾಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ ಮತ್ತು ತಾಲೂಕಿಗೆ ಒಂದೆರಡರಂತೆ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಇದೆ. ಆದ್ದರಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮೇಲೆ ಹೇಳಿದಂತಹ ಗಂಭೀರತೆ ಇದ್ದರೆ ಅನಿವಾರ್ಯವಾಗಿ ನೆರೆಯ ಜಿಲ್ಲೆಗೆ ರೋಗಿಗಳನ್ನು ಕಳಿಸಿಕೊಡುತ್ತಾರೆ. ಕೆಲವೊಮ್ಮೆ ಹಾದಿಯಲ್ಲಿ ಜೀವ ಹೋಗುತ್ತದೆ. ಸುಸಜ್ಜಿತ ಆಸ್ಪತ್ರೆಗೆ ತಲುಪಿದರೆ ಜೀವ ಉಳಿಯುತ್ತದೆ.
ಒಂದು ಸಮಗ್ರ ತೀವ್ರ ನಿಗಾ ಘಟಕಕ್ಕೆ ತಲೆಗೆ ಪೆಟ್ಟಾದರೆ ಔಷಧದಿಂದ ಗುಣಪಡಿಸಲು ಒಬ್ಬರು ನ್ಯೂರೋ ಫಿಜಿಶಿಯನ್, ನ್ಯೂರೋ ಸರ್ಜನ್ ಶಸ್ತ್ರಚಿಕಿತ್ಸೆಗೆ ಬೇಕು. ಬಹುಮುಖೀ ಎಲುಬು ಮುರಿದರೆ, ಪಕ್ಕೆಲುಬು, ಸೊಂಟ ಮುರಿದರೆ ಆಥೊರ್ ಸರ್ಜನ್, ಹೊಟ್ಟೆಗೆ ಪೆಟ್ಟಾದರೆ ಜನರಲ್ ಸರ್ಜನ್, ಇನ್ನು ಇಬ್ಬರು ಅನಸ್ತೇಶಿಯಾ ತಜ್ಞರು, ಹೃದಯಕ್ಕೆ ಪೆಟ್ಟಾದರೆ ಮತ್ತು ಹೃದಯಾಘಾತ ಸಂದರ್ಭದಲ್ಲಿಯೂ ಇಂಟರ್‌ವೆನ್ಸನಲ್ ಕಾರ್ಡಿಯೋಲೊಜಿಸ್ಟ್ ಮತ್ತು ಕ್ಯಾಥ್ ಲ್ಯಾಬ್ ಬೇಕು. ಸಿಟಿ ಸ್ಕ್ಯಾನ್, ಎಂಆರ್‌ಐ ಮತ್ತು ಅದಕ್ಕೆ ತರಬೇತಾದ ಸಿಬ್ಬಂದಿ ಬೇಕು. ಹೃದಯ ಶಸ್ತ್ರಕ್ರಿಯೆಗೆ ಇನ್ನಷ್ಟು ವ್ಯವಸ್ಥೆ ಬೇಕು. ಶಸ್ತ್ರಕ್ರಿಯಾ ಕೊಠಡಿ ಕೆಲಸದಲ್ಲಿ ತರಬೇತಾದ ಐದು ನರ್ಸ್‌ಗಳು ಬೇಕು, ರಕ್ತನಿಧಿ ಬೇಕು. ಕೃತಕ ಉಸಿರಾಟ ವ್ಯವಸ್ಥೆಯುಳ್ಳ ಅಂಬ್ಯುಲೆನ್ಸ್ ಬೇಕು. ಅಂದರೆ ಮಾತ್ರ ಸಮಗ್ರವಾದ ಟ್ರೋಮಾ ಸೆಂಟರ್ ಅನಿಸಿಕೊಳ್ಳುತ್ತದೆ. 24ತಾಸು ಸೇವೆ ನೀಡಬೇಕಾದರೆ ಇಷ್ಟೇ ಸಂಖ್ಯೆಯಲ್ಲಿ ಇನ್ನಷ್ಟು ಸಿಬ್ಬಂದಿ, ವೈದ್ಯರು ಬೇಕು. ಅಲ್ಲಿ ಇಲ್ಲಿ ಎಂದು ಜಗ್ಗಾಡುವುದಕ್ಕಿಂತ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜಿಗೆ ಟ್ರೋಮಾ ಸೆಂಟರ್ ಮಂಜೂರಾಗಲಿ.
ಶಿರಸಿಯ ಟಿಎಸ್‌ಎಸ್, ಹೊನ್ನಾವರದ ಇಗ್ನೇಷಿಯಸ್, ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗಳಲ್ಲಿ 50ಹಾಸಿಗೆ ಸಹಿತ ಎಲ್ಲ ಮೂಲಭೂತ ಸೌಲಭ್ಯವಿದೆ. ಈ ಸಂಸ್ಥೆಗಳು ಹಣ ಹೂಡಲು ಸಿದ್ಧರಿದ್ದಾರೆ. ನರ ತಜ್ಞರು, ಹೃದಯ ತಜ್ಞರು ಬಂದು ಹೋಗುತ್ತಾರೆಯೇ ವಿನಃ ಇಲ್ಲಿ ಕಾಯಂ ಉಳಿಯಲು ಒಪ್ಪುವುದಿಲ್ಲ. ಇದು ದೊಡ್ಡ ಸಮಸ್ಯೆ. ಇತರ ರಾಜ್ಯಗಳ ಗುಡ್ಡಗಾಡು ಪ್ರದೇಶದಲ್ಲಿದ್ದಂತೆ ಜಿಲ್ಲೆಯಲ್ಲಿ ಏರ್ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬಹುದು. ಬಿಪಿಎಲ್ ಕಾರ್ಡುದಾರರಿಗೆ ಉಚಿತ, ಎಪಿಎಲ್ ಕಾರ್ಡುದಾರರಿಗೆ ಶೇ. 30ರಿಯಾಯತಿ, ಹಣ ಇದ್ದವರಿಂದ ಬಾಡಿಗೆ ವಸೂಲು ಮಾಡಬಹುದು. ಕಳೆದ ವರ್ಷ ಅತಿ ಹೆಚ್ಚು ಅಪಘಾತಗಳು ಜಿಲ್ಲೆಯಲ್ಲಿ ನಡೆದಿದ್ದು ದಿನಕ್ಕಿಬ್ಬರು ಗಂಭೀರಗಾಯಗೊಂಡು ನೆರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದರು. ಸಾಮಾನ್ಯ ಗಾಯಗೊಂಡ ನಾಲ್ಕು ಜನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತುಂಬ ವೆಚ್ಚದಾಯಕ ತುರ್ತು ಚಿಕಿತ್ಸಾ ಘಟಕವನ್ನು ಖಾಸಗಿ ಆರಂಭಿಸುವುದು ಕಷ್ಟ, ಸರ್ಕಾರವೇ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಿದರೆ ಉಪಕಾರ. ಭಾವನಾತ್ಮಕವಾಗಿ ಹೋರಾಟ ನಡೆದರೆ ಸರ್ಕಾರ ಬೋರ್ಡ್ ತಗಲಿಸಿ, ನಾಲ್ಕು ಡಾಕ್ಟರ್ ನೇಮಿಸಿ, ಮೈಲೇಜ್ ಪಡೆದು ಕೈತೊಳೆದುಕೊಳ್ಳಬಹುದು. ವಾಸ್ತವಿಕವಾಗಿ ಮುಂದುವರಿಯ ಬೇಕಾದ ಅಗತ್ಯವಿದೆ.
•ಜೀಯು, ಹೊನ್ನಾವರ