Advertisement

ಹಿಮ ತಾಂಡವ ನೀರ್ಗಲ್ಲುಗಳು ಕರಗುತ್ತಿವೆ…ಎಚ್ಚರ!

01:36 AM Feb 08, 2021 | Team Udayavani |

ಹೊಸದಿಲ್ಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ರವಿವಾರ ಕಣ್ಣುಮುಚ್ಚಿ ತೆರೆಯುವುದರೊಳಗೆ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದೆ. ಈ ಹಿಮ ಪ್ರವಾಹವು ಧೌಲಿಗಂಗಾ ನದಿಯ ಮೂಲಕ ಉಕ್ಕಿ ಹರಿದು ಹಲವು ಜೀವಗಳನ್ನು ಬಲಿತೆಗೆದುಕೊಂಡಿದೆ. ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ಘಟನೆಗೆ ಮೂಲ ಕಾರಣವೇನಿರಬಹುದು? ಹವಾಮಾನ ವೈಪರೀತ್ಯವೇ?

Advertisement

ಹೌದು ಎನ್ನುತ್ತದೆ ಅಧ್ಯಯನ ವರದಿ. 2019ರಲ್ಲಿ ಬಹಿರಂಗಗೊಂಡ ವರದಿಯೊಂದು ಇಂಥ ದುರ್ಘಟನೆಗಳ ಬಗ್ಗೆ ಭವಿಷ್ಯ ನುಡಿದಿತ್ತು. ತಾಪಮಾನ ಏರಿಕೆಯಿಂದಾಗಿ 21ನೇ ಶತಮಾನದ ಆರಂಭದಿಂದಲೇ ಹಿಮಾಲಯದ ನೀರ್ಗಲ್ಲುಗಳು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ ಎಂದು ಈ ವರದಿ ಎಚ್ಚರಿಸಿತ್ತು.

ಭಾರತ, ಚೀನ, ನೇಪಾಲ ಮತ್ತು ಭೂತಾನ್‌ನಾದ್ಯಂತ 40 ವರ್ಷಗಳ ಕಾಲ ಉಪಗ್ರಹದ ಮೂಲಕ ಪರಿವೀಕ್ಷಣೆ ನಡೆಸಿ 2019ರಲ್ಲಿ ಈ ವರದಿ ತಯಾರಿಸಲಾಗಿತ್ತು. ಹವಾಮಾನ ವೈಪರೀತ್ಯವು ಹಿಮಾಲಯದ ನೀರ್ಗಲ್ಲುಗಳನ್ನು ನುಂಗುತ್ತಿರುವ ಆಘಾತಕಾರಿ ಅಂಶವನ್ನೂ ಇದು ಬಹಿರಂಗಪಡಿಸಿತ್ತು.

ವರ್ಷಕ್ಕೆ ಅರ್ಧ ಮೀಟರ್‌: 1975ರಿಂದ 2000ದ ವರೆಗೆ ಹಿಮಾಲಯದ ನೀರ್ಗಲ್ಲುಗಳು ಎಷ್ಟು ಪ್ರಮಾಣದಲ್ಲಿ ಕರಗಿದ್ದವೋ, ಅದರ ದುಪ್ಪಟ್ಟು ಪ್ರಮಾಣದಲ್ಲಿ ಈಗ ಅವುಗಳು ಕರಗತೊಡಗಿವೆ. ಕಳೆದ 4 ದಶಕಗಳಲ್ಲಿ ನೀರ್ಗಲ್ಲುಗಳು ತಮ್ಮ ಕಾಲು ಭಾಗ ದಷ್ಟು ದ್ರವ್ಯ ರಾಶಿಯನ್ನೇ ಕಳೆದುಕೊಂಡಿವೆ. 1975- 2000ದ ಅವಧಿಗೆ ಹೋಲಿಸಿದರೆ 2000-2016ರ ವರೆಗೆ ತಾಪಮಾನವು ಸರಾಸರಿ 1 ಡಿ.ಸೆ.ನಷ್ಟು ಹೆಚ್ಚಾಗಿದೆ. ಈ ಹಿಂದೆ ನೀರ್ಗಲ್ಲುಗಳು ಸುಮಾರು 0.25 ಮೀಟರ್‌ನಷ್ಟು ಮಂಜುಗಡ್ಡೆಗಳನ್ನು ಕಳೆದುಕೊಂಡರೆ, 2000ದ ಬಳಿಕ ವಾರ್ಷಿಕ ಅರ್ಧ ಮೀಟರ್ನಷ್ಟು ಮಂಜುಗಡ್ಡೆ ಕರಗಿ ಹೋಗಿವೆ ಎಂದು ವರದಿ ತಿಳಿಸಿದೆ.

ನೀರ್ಗಲ್ಲು ಸ್ಫೋಟಕ್ಕೆ ಕಾರಣವೇನು?
ನೀರಿನ ಒತ್ತಡ ಹೆಚ್ಚುವುದು, ಸವಕಳಿ, ಹಿಮಪಾತ, ನೀರ್ಗಲ್ಲುಗಳ ಕೆಳಗೆ ಭೂಕಂಪ… ಹೀಗೆ ಬೇರೆ ಬೇರೆ ಕಾರಣಗಳಿಂದ ನೀರ್ಗಲ್ಲುಗಳು ಸ್ಫೋಟಗೊಳ್ಳಬಹುದು. ಜತೆಗೆ, ಒಂದು ನೀರ್ಗಲ್ಲುಗಳ ಸರೋವರದ ಮೇಲೆ ಮತ್ತೂಂದು ನೀರ್ಗಲ್ಲು ಬಂದು ಢಿಕ್ಕಿ ಹೊಡೆದಾಗಲೂ ಇಂಥ ಘಟನೆ ಸಂಭವಿಸಬಹುದು.

Advertisement

ಡಿಆರ್‌ಡಿಒ ಕಣ್ಗಾವಲು
ನೀರ್ಗಲ್ಲುಗಳ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಡಿಆರ್ಡಿಒ ಕಣ್ಗಾವಲು ತಂಡ ಕೂಡ ಮೊಕ್ಕಾಂ ಹೂಡಿದ್ದು, ನಿರಂತರವಾಗಿ ಸ್ಥಳ ವೀಕ್ಷಣೆ  ನಡೆಸುತ್ತಿದೆ. ಅಕ್ಕಪಕ್ಕದ ಹಳ್ಳಿಗಳಿಗೆ ನೀರುನುಗ್ಗುವ ಅಪಾಯ ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಣ್ಗಾವಲು ತಂಡಕ್ಕೆ ಅನುಮತಿಸಿವೆ.

ನಂದಾದೇವಿ ನೀರ್ಗಲ್ಲು
ಚಮೋಲಿ ಜಿಲ್ಲೆಯ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದ್ದೇ ಧೌಲಿಗಂಗಾ ನದಿಯ ಪ್ರವಾಹಕ್ಕೆ ಕಾರಣ. ಕಾಂಚನ ಜುಂಗಾ ಭಾರತದ ಅತೀ ಎತ್ತರದ ಶಿಖರವಾದರೆ ನಂದಾದೇವಿ ಎರಡನೇ ಅತೀ ಎತ್ತರದ ಶಿಖರವಾಗಿದೆ. ನಂದಾ ದೇವಿಯ ನೀರ್ಗಲ್ಲುಗಳು ಕರಗಿ ಸೃಷ್ಟಿಯಾಗುವ ನೀರು ಹಲವು ತೊರೆಗಳಾಗಿ, ನದಿಗಳಾಗಿ ಹರಿಯುತ್ತವೆ. ಈ ನೀರು ಮೊದಲಿಗೆ ರಿಷಿಗಂಗಾ ನದಿಗೆ ಹರಿದು, ಅಲ್ಲಿಂದ ಧೌಲಿ ಗಂಗಾ ದತ್ತ ಸಂಚರಿಸುತ್ತದೆ. ಧೌಲಿ ಗಂಗಾ ಎನ್ನುವುದು ಗಂಗಾ ನದಿಯ ಉಪನದಿ. ಇದು ಅನಂತರ‌ ವಿಷ್ಣುಪ್ರಯಾಗದ ಅಲಕ್‌ ನಂದಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಧೌಲಿ ಗಂಗಾ ನದಿಯು ಜೋಷಿಮಠ, ಕರ್ಣಪ್ರಯಾಗದ ಮೂಲಕ ಹಾದುಹೋದರೆ, ಅಲಕ್ ನಂದಾ ನದಿಯು ಉತ್ತರಾಖಂಡದ ಶ್ರೀನಗರ, ಹರಿದ್ವಾರ, ರಾಣಿ ಖೇತ್‌, ಭೀಮ್‌ ತಲ್‌, ಹಲ್ದಾನಿಯನ್ನು ದಾಟಿ ಸಾಗುತ್ತದೆ.

ಸುಭದ್ರಾ ಮಾತಾ ತಪಸ್ಸಿನ ಸ್ಥಳ
ಫೆ.4ರಂದು ಅಸ್ತಂಗತರಾದ ಆದಿ ಉಡುಪಿ ಮೂಲದ ಸುಭದ್ರಾ ಮಾತಾ ಅವರು ಉತ್ತರಾಖಂಡದ ತಪೋವನದಲ್ಲೇ 9 ವರ್ಷ ಕಠಿನ ತಪಸ್ಸನ್ನು ಆಚರಿಸಿದ್ದರು. ರವಿವಾರ ತಪೋವನದ ಹಿಮಗಡ್ಡೆಗಳು ಕರಗಿ ತಪೋವನದ ಇನ್ನೊಂದು ಮಗ್ಗುಲಾದ ಬದರಿ ಕಡೆ ಹಿಮಪ್ರವಾಹ ಹರಿದಿದೆ ಎಂದು ತಪೋವನಿ ಮಾತಾ ಅಂತಿಮ ಸಂಸ್ಕಾರಕ್ಕೆ ಹೋದ ಅವರ ಸಹೋದರ ನರೇಂದ್ರ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next