Advertisement

U.T.Khader;ಕಾಗದಮುಕ್ತ ಪರಿಕಲ್ಪನೆಯಿಂದ ಡಿಜಿಟಲ್‌ ಅಸೆಂಬ್ಲಿ ಚಿಂತನೆ:ವಿಧಾನಸಭೆ ಸಭಾಧ್ಯಕ್ಷ

10:57 AM May 26, 2023 | Team Udayavani |

ಮಂಗಳೂರು: ಭವಿಷ್ಯದ ದೃಷ್ಟಿಯಿಂದ ಕಾಗದಮುಕ್ತ ವಿಧಾನಸಭೆ ಅಗತ್ಯವಿದೆ. ಹೀಗಾಗಿ ಡಿಜಿಟಲ್‌ ಅಸೆಂಬ್ಲಿ ಜಾರಿಗೆ ಚಿಂತನೆ ನಡೆಸಲಾಗುವುದು. ಅಧಿವೇಶನದ ಸಂದರ್ಭದಲ್ಲಿ ಜನಸಾಮಾನ್ಯರ ವಿಷಯಗಳ ಬಗ್ಗೆಯೇ ನಿಗದಿತ ದಿನ ವನ್ನು ಮೀಸಲಿಟ್ಟು ಚರ್ಚಿಸುವ ಬಗ್ಗೆಯೂ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು 16ನೇ ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಮಂಗಳೂರಿಗೆ ಆಗಮಿಸಿದ ಖಾದರ್‌ ಅವರು ಗುರುವಾರ “ಉದಯ ವಾಣಿ’ ಜತೆಗೆ ವಿಶೇಷ ಸಂದರ್ಶನ ದಲ್ಲಿ ಮಾತನಾಡಿದರು. ಡಿಜಿಟಲ್‌ ಅಸೆಂಬ್ಲಿ ಇನ್ನೂ ನನ್ನ ಆಲೋ ಚನೆಯಲ್ಲಿದೆ. ಈಗಲೇ ಎಲ್ಲವನ್ನೂ ವಿವರಿಸ ಲಾರೆ ಎಂದರಲ್ಲದೆ, ಜನ ಸಾಮಾನ್ಯರ ವಿಷಯಗಳ ಚರ್ಚೆಗೆ ದಿನ ನಿಗದಿ ಯಂತಹ ಆಲೋಚನೆ ಗಳನ್ನೂ ಎಲ್ಲ ರೊಂದಿಗೆ ಚರ್ಚಿಸಬೇಕು ಎಂದಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 ಸಭಾಧ್ಯಕ್ಷ ಸ್ಥಾನದಲ್ಲಿ ನಿಮ್ಮ ಕನಸುಗಳೇನು?
ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ಧ ಹಾಗೂ ಸಂಸದೀಯವಾಗಿ ಕೆಲಸ ಮಾಡುವ ಗೌರವಯುತ, ಜವಾಬ್ದಾರಿ ಯುತ ಸ್ಥಾನ ಇದು. ಪ್ರಾಮಾಣಿಕವಾಗಿ ಕಾರ್ಯ ತಲ್ಲೀನನಾಗಿ ಆ ಸ್ಥಾನದ ಗೌರವ ಉಳಿಸುವೆ. ಜನಸಾಮಾನ್ಯರಿಗೆ ಅನುಕೂಲವಾಗುವ ಸುಧಾರಣೆ ತರಲು ವಿಶೇಷ ಆದ್ಯತೆ ನೀಡಬೇಕಿದೆ.

 ಕರಾವಳಿ ಭಾಗಕ್ಕೆ ಬಹಳ ವರ್ಷಗಳ ಬಳಿಕ ಸಭಾಧ್ಯಕ್ಷ ಸ್ಥಾನ ದೊರಕಿದೆ. ಏನನ್ನಿಸುತ್ತದೆ?
ಹಿಂದೆ ವೈಕುಂಠ ಬಾಳಿಗಾ ಈ ಸ್ಥಾನ ಅಲಂಕರಿಸಿದ್ದರು. ಲೋಕ ಸಭೆ ಯಲ್ಲಿ ಕೆ.ಎಸ್‌. ಹೆಗ್ಡೆ ಅವರು ಸಭಾಧ್ಯಕ್ಷರಾಗಿದ್ದರು. ಈಗ ನನಗೆ ವಿಧಾನಸಭೆಯ ಸೌಭಾಗ್ಯ ದೊರಕಿದೆ. ಅವರಿಬ್ಬರು ಸಾಂವಿಧಾನಿಕ ಹುದ್ದೆಯ ಮೂಲಕವೇ ಕರಾವಳಿಗೆ ಗೌರವ ತಂದುಕೊಟ್ಟರು. ಅದೇ ರೀತಿ ಆ ಹುದ್ದೆಯ ಘನತೆ, ಗೌರವ ಎತ್ತಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇದು ಕರಾವಳಿಗೆ ದೊರೆತ ಸೌಭಾಗ್ಯ ಎಂದು ಭಾವಿಸುವೆ.

 ಆಡಳಿತ ಹಾಗೂ ವಿಪಕ್ಷವನ್ನು ಸಮಾನವಾಗಿ ಯಾವ ರೀತಿಯಲ್ಲಿ ನಿರ್ವಹಿಸುತ್ತೀರಿ?
ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವು ಶತ್ರು ಗಳಲ್ಲ. ಎಲ್ಲರ ಉದ್ದೇಶವೂ ಜನ ಸೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿ ಬಗ್ಗೆ ಯಾವುದೇ ವಿಷಯ ವಿದ್ದರೂ ಆದ್ಯತೆ ನೀಡಲು ಬಯಸುವೆ. ಎಲ್ಲ ಶಾಸಕರ ಗೌರವ ಕಾಪಾಡಿ ಕೊಂಡು ಅವರ ಕ್ಷೇತ್ರದ ಸಮಸ್ಯೆ ಗಳಿಗೆ ವೇದಿಕೆ ಒದಗಿಸಿ ಪರಿಹಾರ ಸೂತ್ರ ಕಂಡುಕೊಳ್ಳಲಾಗುವುದು.

Advertisement

 ಸದನದ ಎಲ್ಲ ಸದಸ್ಯರ ವಿಶ್ವಾಸ ಗಳಿಸಲು ಏನು ಮಾಡುತ್ತೀರಿ?
ರಾಜಕೀಯವಿಲ್ಲದೆ ಹಿರಿ-ಕಿರಿಯ ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಜನರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು.

 ಕರಾವಳಿಯಲ್ಲಿ ಕಾಂಗ್ರೆಸ್‌ ಶಕ್ತಿ ಕುಸಿಯುತ್ತಿರುವ ಮಧ್ಯೆಯೇ ನೀವು ಸಾಂವಿಧಾನಿಕ ಹುದ್ದೆಗೇರಿದ ಕಾರಣ ಸದ್ಯ ರಾಜಕೀಯದಿಂದಲೇ ದೂರ ನಿಲ್ಲಬೇಕಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?
ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿಲ್ಲ, ಆದರೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಬೇಸರವಿದೆ. ಯಾಕೆಂದರೆ ಎನ್‌ಎಸ್‌ಯುಐ, ಯೂತ್‌ ಕಾಂಗ್ರೆಸ್‌, ಸೇವಾದಳ, ಡಿಸಿಸಿ, ಕೆಪಿಸಿಸಿ ಸಹಿತ ಪ್ರತೀ ಕಾರ್ಯಕ್ರಮಗಳಲ್ಲಿ 35 ವರ್ಷಗಳಿಂದ ಕ್ರಿಯಾ ಶೀಲ ನಾಗಿದ್ದೆ. ರಾಜಕೀಯವಾಗಿ ಪತ್ರಿಕಾಗೋಷ್ಠಿ, ಸಭೆಗಳಲ್ಲಿ ಪಾಲ್ಗೊಳ್ಳು ವುದು ನಿತ್ಯದ ಕಾಯಕ ಆಗಿತ್ತು. ಇದಕ್ಕೆ ತಡೆಯಾದದ್ದರ ಬಗ್ಗೆ ಬೇಸರವಿದೆ. ಆದರೆ ಪಕ್ಷದ ತೀರ್ಮಾನವನ್ನು ಒಪ್ಪಿಕೊಳ್ಳುವುದು ನನ್ನ ಜವಾಬ್ದಾರಿ.

ಅದಕ್ಕೆ ಪೂರಕ ಫಲಿತಾಂಶ ಹೊರಹೊಮ್ಮಿಸಲು ಪ್ರಾಮಾ ಣಿಕವಾಗಿ ಪ್ರಯತ್ನಿಸುತ್ತೇನೆ. ಎಲ್ಲರಿಗೂ ಕಲಾಪದಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುವುದು.

 ಹೊಸ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದು ಅವರನ್ನು ಅಧಿವೇಶನದಲ್ಲಿ ಯಾವ ರೀತಿ ತೊಡಗಿಸಿಕೊಳ್ಳುತ್ತೀರಿ?
ರಾಜ್ಯದಲ್ಲಿ ಈಗ 70 ಹೊಸ ಶಾಸಕರಿದ್ದಾರೆ. ಅವರಿಗೆ ವಿಧಾನಸಭೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು, ಸಂಸದೀಯ ನೀತಿ ನಿಯಮಗಳ ಪಾಲನೆ ಹೇಗೆ ? ಸಭೆಯ ರೀತಿ-ರಿವಾಜುಗಳ ಬಗ್ಗೆ ತರಬೇತಿ ಆಯೋಜಿಸಲಾಗುತ್ತದೆ. ಜತೆಗೆ ಅವರಿಗೆ ಅಧಿವೇಶನದ ಕಲಾಪದಲ್ಲಿ ಹೆಚ್ಚು ಭಾಗವಹಿಸಲು ಅವಕಾಶ ನೀಡಲಾಗುವುದು.

ಆರೋಗ್ಯಕರ ಚರ್ಚೆ ಹಾಗೂ ಅಭಿವೃದ್ಧಿಯ ಆಶಯಕ್ಕೆ ಯಾವ ರೀತಿ ಅಧಿವೇಶನದಲ್ಲಿ ಅವಕಾಶ ಕಲ್ಪಿಸುತ್ತೀರಿ?
ಸಂವಿಧಾನಬದ್ಧ ಹುದ್ದೆ ಇದಾಗಿರುವುದರಿಂದ ಇದರ ಬಗ್ಗೆ ಮತ್ತಷ್ಟು ಕಲಿಯಲು ಸಮಯ ಬೇಕಿದೆ. ಈ ಹುದ್ದೆ ಮುನ್ನಡೆಸಿದ ಪ್ರಮುಖರ ಮಾರ್ಗದರ್ಶನ ಪಡೆದು ಸದನ ಕಲಾಪದಲ್ಲಿ ಒಂದಿನಿತೂ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಸದನದ ಪಾವಿತ್ರ್ಯವನ್ನು ಸಾರಿ ಹೇಳಬೇಕಿದೆ. ಜತೆಗೆ ನಾಡಿನ ಸಾಮಾನ್ಯ ಜನ, ರೈತರು, ಶೋಷಿತರು, ಧ್ವನಿ ಇಲ್ಲದವರ ವಿವಿಧ ಸಮಸ್ಯೆಗಳ ಬಗ್ಗೆ ಈ ದೇಗುಲದಲ್ಲಿ ಆರೋಗ್ಯಕರ ಚರ್ಚೆ ನಡೆಸಿ ಪರಿಹಾರವಾಗುವಂತೆ ಮಾಡುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಇದಕ್ಕಾಗಿ ಸೂಕ್ತ ಸಿದ್ಧತೆ ಕೈಗೊಂಡು, ಎಲ್ಲರನ್ನೂ ಒಟ್ಟಿಗೆ ಮುನ್ನಡೆಸುವ ಸಂಕಲ್ಪ ಮಾಡುತ್ತೇನೆ.

 ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಿಮ್ಮ ಕಾರ್ಯಗಳು ಹೇಗಿರುತ್ತದೆ?
ನ್ಯಾಯವಾದಿಗಳಾಗಿ ಕುಳಿತವರು ನಿತ್ಯವೂ ವಕೀಲರ ವಾದ, ಪ್ರತಿವಾದವನ್ನು ಕೇಳುತ್ತ ಪರಿಪಕ್ವವಾಗುತ್ತಾರೆ ಎಂಬ ಮಾತಿದೆ. ಅದೇ ರೀತಿ ನಾನೂ ಆಡಳಿತ ಪಕ್ಷ ಹಾಗೂ ವಿಪಕ್ಷ, ಸ್ವತಂತ್ರ ಪಕ್ಷದ ಪ್ರತಿಯೊಬ್ಬರ ಅಭಿಪ್ರಾಯಗಳಿಗೂ ಗೌರವ ನೀಡುವೆ. ಅವರೆಲ್ಲರ ಅಭಿಪ್ರಾಯದ ಮೂಲಕ ನಾನು ಕೂಡ ಪರಿಪಕ್ವವಾಗುವ ದಾರಿಯಲ್ಲಿ ಮುನ್ನಡೆದು, ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯಲು ಪ್ರಯತ್ನಿಸುವೆ. ಸಂವಿಧಾನವೇ ಸರ್ವೋಚ್ಚ ಧರ್ಮ ಎಂದು ಭಾವಿಸಿ ಎಲ್ಲರೂ ಜಾತಿ, ಮತ, ಧರ್ಮ ಭಾಷೆಗಳನ್ನು ಮರೆತು ಕಾರ್ಯನಿರ್ವಹಿಸಲು ಶ್ರಮಿಸುತ್ತೇನೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವೆ. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಹಿರಿಯರು ಕಾರ್ಯನಿರ್ವಹಿಸಿದ ರೀತಿಗಳನ್ನು ನಾನು ಅಧ್ಯಯನ ಮಾಡುವೆ.

ಮಂಗಳೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚುನಾವಣ ಪೂರ್ವದಲ್ಲಿ ನೀವು ನೀಡಿರುವ ಭರವಸೆ ಏನಾಗಲಿದೆ?
ಹರೇಕಳ ಅಣೆಕಟ್ಟನ್ನು ಶೀಘ್ರವಾಗಿ ಮುಖ್ಯಮಂತ್ರಿಯವ ರಿಂದಲೇ ಲೋಕಾರ್ಪಣೆ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ಇಲಾಖಾ ಕಾರ್ಯದರ್ಶಿಗಳ ಜತೆಗೆ ಚರ್ಚಿಸಲಾಗಿದೆ. ಕಡಲ್ಕೊರೆತ ತಡೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. 2ನೇ ಹಂತದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮುಂದಿನ ಸಚಿವರ ಒಪ್ಪಿಗೆ ಪಡೆದು ಆದೇಶ ಮಾಡಿಸಲಾಗುತ್ತದೆ. ಉಳಿಯದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡಲಾಗುವುದು. ಉಳಿದಂತೆ ರಸ್ತೆ ಸಹಿತ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುವುದು.

ವಿಧಾನಸಭಾಧ್ಯಕ್ಷರಾಗಿದ್ದೀರಿ; ಮಹತ್ವದ ಸ್ಥಾನವಾಗಿ ರುವುದರಿಂದ ಕರಾವಳಿಗೆ ಏನನ್ನು ನಿರೀಕ್ಷಿಸಬಹುದು?
ಸಭಾಧ್ಯಕ್ಷನಾದ ಅನಂತರ ನಾನು ಪಕ್ಷದ ವ್ಯಕ್ತಿಯಲ್ಲ. ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಸಭಾಧ್ಯಕ್ಷನಾಗಿರುವ ಕಾರಣ ಎಲ್ಲ ಇಲಾಖೆಗಳ ಸಚಿವರು ನನ್ನ ವ್ಯಾಪ್ತಿಯಲ್ಲಿ ಇರುತ್ತಾರೆ. ಹೀಗಾಗಿ ನನ್ನ ಕ್ಷೇತ್ರ ಹಾಗೂ ಜಿಲ್ಲೆಗೆ ಯಾವೆಲ್ಲ ಅಭಿವೃದ್ಧಿ ಕಾರ್ಯಗಳು ಆಗಬೇಕೋ ಅವುಗಳನ್ನು ಸರ್ವರ ಜತೆಗೆ ಚರ್ಚಿಸಿ, ಸಚಿವರು ಹಾಗೂ ಅಧಿಕಾರಿಗಳ ಮೂಲಕ ಕೆಲಸ ಮಾಡಿಸುವ ಪ್ರಾಮಾಣಿಕ ಜವಾಬ್ದಾರಿ ನಿರ್ವಹಿಸುತ್ತೇನೆ.

ಸಭಾಧ್ಯಕ್ಷ ಹುದ್ದೆಯಿಂದ ನಿಮ್ಮ ರಾಜಕೀಯ ಜೀವನಕ್ಕೆ ತೊಡಕಾಗುವುದಿಲ್ಲವೇ?
ರಾಜಕೀಯದಲ್ಲಿ ಕೆಲವು ತೊಡಕು ಬರುತ್ತದೆ. ಆದರೆ ಅವುಗಳನ್ನು ನಿಭಾಯಿಸಿಕೊಂಡು, ಬಗೆಹರಿಸಿಕೊಂಡು ಹೋಗುವೆ. ಮುಂದೆ ಲೋಕಸಭೆ, ತಾ.ಪಂ. ಜಿಲ್ಲಾ ಪಂಚಾಯತ್‌ ಚುನಾವಣ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗದು. ಇದನ್ನು ಕಾರ್ಯಕರ್ತರು ಅರ್ಥ ಮಾಡಿಕೊಂಡಿದ್ದಾರೆ. ನನ್ನ ಪರವಾಗಿ ಅವರೇ ಗ್ರಾಮ ಮಟ್ಟದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಸಭಾಧ್ಯಕ್ಷ ಸ್ಥಾನಕ್ಕೆ ಯಾರೂ ಒಪ್ಪದ ಕಾರಣ ನಿಮ್ಮನ್ನು ಒತ್ತಾಯಪೂರ್ವಕವಾಗಿ ನೇಮಿಸಲಾಗಿದೆ ಎಂಬ ಮಾತುಗಳಿವೆ. ಅದು ನಿಜವೇ?
ಹಾಗೇನೂ ಇಲ್ಲ. ಶಾಸಕಾಂಗದ ಬಹುಮುಖ್ಯ ಸ್ಥಾನವಾದ ಸಭಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುವುದು ಸ್ವಾಭಾವಿಕ. ಅಂತಿಮ ನಿರ್ಣಯವಾಗಿ ಒಂದು ಹೆಸರು ಉಳಿಯುತ್ತದೆ. ಅಲ್ಲಿಯವರೆಗೆ ಯಾವುದೂ ಅಂತಿಮ ಆಗಿರಲಿಲ್ಲ. ಪಕ್ಷದ ವರಿಷ್ಠರು ಚರ್ಚಿಸಿ ನನ್ನನ್ನು ಅಂತಿಮಗೊಳಿಸಿದರು. ಸಿಎಂ ಹಾಗೂ ಡಿಸಿಎಂ ತಿಳಿಸಿದಾಗ ಸಂತೋಷದಿಂದ ಒಪ್ಪಿದೆ.

ನಿಮಗೆ ಸಚಿವಗಿರಿ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಅದು ಕೈ ತಪ್ಪಿದ್ದು ಯಾಕೆ?
ಯಾರೂ-ಯಾವಾಗಲೂ ಸಚಿವರಾಗಬಹುದು. ಆದರೆ ಸಭಾಧ್ಯಕ್ಷ ಸ್ಥಾನ ಸುಲಭವಾಗಿ ಸಿಗದು. ಒಂದಂತೂ ಸತ್ಯ, ರಾಜಕೀಯ ನಿಂತ ನೀರಲ್ಲ. ಅಲ್ಲಿ ಬದಲಾವಣೆ ಇದ್ದದ್ದೇ. ಈಗ ಸಿಕ್ಕಿದ ಅವಕಾಶ ನನ್ನ ಭವಿಷ್ಯದ ರಾಜಕೀಯ ಹೆಜ್ಜೆಗೆ ಪೂರಕವಾಗಿರುತ್ತದೆ. ಎಲ್ಲ ಸಚಿವರೂ ಸಭಾಧ್ಯಕ್ಷರ ಆಡಳಿತ ವ್ಯಾಪ್ತಿಯೊಳಗೆ ಬರುವುದರಿಂದ ನನ್ನ ಕ್ಷೇತ್ರದ ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ.

 2 ವರ್ಷ ನೀವು ಸಭಾಧ್ಯಕ್ಷ, ಆ ಬಳಿಕ ಸಚಿವ ಎಂಬ ಬಗ್ಗೆ ಮಾತುಕತೆ ಆಗಿದೆ ಎಂಬುದು ನಿಜವೇ?
ಅಂತಹ ನಿರ್ಧಾರ ಆಗಿಲ್ಲ. ಪಕ್ಷದ ಹೈಕಮಾಂಡ್‌ ಬೇರೆ ಬೇರೆ ವಿಷಯಗಳಲ್ಲಿ ಚರ್ಚಿಸುತ್ತದೆ. ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.

ಹುದ್ದೆ ಬದಲಾವಣೆ ಬಗ್ಗೆ ಏನಾದರೂ ಮಾತುಕತೆ ಆಗಿದೆಯೇ ಅಥವಾ 5 ವರ್ಷ ನೀವೇ ಸಭಾಧ್ಯಕ್ಷರಾ?
ಕಾಂಗ್ರೆಸ್‌ ಪಕ್ಷ ಯಾವಾಗಲೂ ಪೂರ್ವಭಾವಿಯಾಗಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಆಯಾಯ ಸಂದರ್ಭದಲ್ಲಿ ಯಾರ್ಯಾರಿಗೆ ಯಾವ ಸ್ಥಾನ ಕೊಡಬೇಕೋ ಅದನ್ನು ನೀಡಲಿದೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next