ಕರಾಚಿ: ಪಾಕಿಸ್ಥಾನ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಾಜಕೀಯ ಹಿತಾಸಕ್ತಿಗೆ ಸಿಲುಕಿ ಪಾಕ್ ಕ್ರಿಕೆಟ್ ನಲುಗಿ ಹೋಗಿದೆ. ಸ್ಪಾಟ್ ಫಿಕ್ಸಿಂಗ್‌ಗೆ ಸಿಲುಕಿದವರು ಕೂಡ ಮತ್ತೆ ಬಂದು ಕ್ರಿಕೆಟ್ ಆಡುತ್ತಾರೆ. ಏನೇ ತಪ್ಪು ಮಾಡಿದರೂ ಪಾಕ್‌ನಲ್ಲಿ ಅದಕ್ಕೆ ಮಾಫಿ ಇದೆ. ಮತ್ತೆ ಆಡಲು ಅವಕಾಶವೂ ಸಿಗುತ್ತಿದೆ. ಇದೇ ಕಾರಣದಿಂದ ಪಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸು ದಿನೇ ದಿನೇ ಕಳೆದುಕೊಳ್ಳುತ್ತಿದೆ.
ಕ್ರಿಕೆಟ್ ಆಡಿ ಎಷ್ಟೇ ಸಾಧನೆ ಮಾಡಿದರೂ ಇಂದು ವಿಶ್ವ ಮಟ್ಟದಲ್ಲಿ ಪಾಕ್ ಕ್ರಿಕೆಟಿಗರನ್ನು ಗೌರವದಿಂದ ನೋಡುವುದಿಲ್ಲ.
ಈ ಎಲ್ಲ ಕಾರಣಗಳಿಂದ ಇದೀಗ ಪಾಕಿಸ್ಥಾನದ ಮಾಜಿ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಮಗ ಉಸ್ಮಾನ್ ಖಾದಿರ್ ಪಾಕಿಸ್ಥಾನ ತೊರೆದು 2020ರಲ್ಲಿ ಆಸ್ಟ್ರೇಲಿಯ ತಂಡನ್ನು ಟಿ20 ವಿಶ್ವಕಪ್‌ನಲ್ಲಿ ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ. ಅವರು ಆಸ್ಟ್ರೇಲಿಯ ಜೆರ್ಸಿ ತೊಟ್ಟ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. 2020ಕ್ಕೆ ಆಸೀಸ್ ತಂಡದ ಜೆರ್ಸಿ ತೊಡುವ ಕನಸು ನನ್ನದಾಗಿದೆ ಎಂದು ಉಸ್ಮಾನ್ ಹೇಳಿಕೊಂಡಿದ್ದಾರೆ.
ಉಸ್ಮಾನ್ ಖಾದಿರ್ ಆಸೀಸ್‌ನ ಲೀಗ್ ಕ್ರಿಕೆಟ್‌ನಲ್ಲಿ 9 ಪಂದ್ಯ ಆಡಿದ್ದಾರೆ. 30 ವಿಕೆಟ್ ಕಬಳಿಸಿದ್ದಾರೆ. 3 ಸಲ 5 ವಿಕೆಟ್ ಪಡೆದಿದ್ದಾರೆ. ಬಿಬಿಎಲ್‌ನ ಪ್ರಮುಖ ತಂಡವಾಗಿರುವ ಪರ್ಥ್ ಸ್ಕಾರ್ಚರ್ ತಂಡ ತರಬೇತಿ ಪಡೆಯುತ್ತಿದ್ದ ವೇಳೆ ಉಸ್ಮಾನ್ ನೆಟ್‌ನಲ್ಲಿ ಬೌಲಿಂಗ್ ನಡೆಸಿದ್ದರು. ಇವರನ್ನು ಸೇರಿಸಿಕೊಳ್ಳಲು ಪರ್ಥ್ ತಂಡದ ಆಡಳಿತ ಮೂಲಗಳು ಚಿಂತನೆ ನಡೆಸಿವೆ.
ಉಸ್ಮಾನ್ ಕಿರಿಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಪಾಕ್ ಪರವೂ ಅವರಿಗೆ ಆಡುವ ಕರೆ ಬಂದಿತ್ತು. ಆದರೆ ಅಬ್ದುಲ್ ಖಾದಿರ್ ಅವರು ಮಗನಿಗೆ ಆಸೀಸ್‌ನಲ್ಲೇ ಉಳಿದುಕೊಳ್ಳಲು ಹೇಳಿದ್ದಾರೆ. ಈ ವಿಷಯವನ್ನು ಉಸ್ಮಾನ್ ಖಾದಿರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.