Advertisement

ಬಳಕೆಯಾಗದೆ ಮೂಲೆ ಸೇರಿದ ಇ-ಟಾಯ್ಲೆಟ್‌ಗಳು!

08:27 PM Nov 20, 2021 | Team Udayavani |

ಮಹಾನಗರ: ನಗರದಲ್ಲಿ ಬಹುನಿರೀಕ್ಷೆ ಮೂಡಿಸಿದ್ದ “ಇ-ಟಾಯ್ಲೆಟ್‌’ ಈಗ ನಿರ್ವಹಣೆ ಕೊರತೆಯಿಂದ ಬಳಕೆಯಾಗದೆ ಮೂಲೆ ಸೇರಿದೆ!

Advertisement

ಕೇರಳ, ಬೆಂಗಳೂರು, ಮೈಸೂರು ಸಹಿತ ಬಹು ತೇಕ ಭಾಗಗಳಲ್ಲಿ ಬಳಕೆಯಲ್ಲಿದ್ದ “ಇ-ಟಾಯ್ಲೆಟ್‌’ ಪರಿಕಲ್ಪನೆಯನ್ನು ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ 4 ವರ್ಷಗಳ ಹಿಂದೆ ಅನುಷ್ಠಾನಗೊಳಿಸಲಾಗಿತ್ತು. ಆದರೆ ಕೊಂಚ ಸಮಯ ಬಳಕೆಯಾದ ಇವು ಸದ್ಯ ನಿರ್ವಹಣೆ ಯಿಲ್ಲದೆ ಉಪಯೋಗಕ್ಕಿಲ್ಲವಾಗಿದೆ.

ಲಾಲ್‌ಬಾಗ್‌, ಕದ್ರಿ ಪಾರ್ಕ್‌, ಎಕ್ಕೂರಿನ ಪಕ್ಕಲಡ್ಕ ಸಹಿತ ವಿವಿಧೆಡೆಗಳಲ್ಲಿರುವ ಇ-ಟಾಯ್ಲೆಟ್‌ ಸದ್ಯ ಪೂರ್ಣವಾಗಿ ಬಳಕೆಯಾಗುತ್ತಿಲ್ಲ. ಈ ಮಧ್ಯೆ ಪುರಭವನ ಮುಂಭಾಗದಿಂದ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಬದಿಯಲ್ಲಿರುವ ಇ – ಟಾಯ್ಲೆಟ್‌ ತ್ಯಾಜ್ಯ ರಾಶಿಯ ಮಧ್ಯೆಯಿದೆ. ನಿತ್ಯ ನೂರಾರು ಮಂದಿ ಸಂಚರಿಸುವ ಇಲ್ಲಿ ಇ – ಟಾಯ್ಲೆಟ್‌ ತ್ಯಾಜ್ಯ ರಾಶಿಯ ಮಧ್ಯೆ ಇರುವುದು ಸ್ವಚ್ಛತ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ!

1 ಶೌಚಗೃಹದ ಅಂದಾಜು ವೆಚ್ಚ 7 ಲಕ್ಷ ರೂ.ಗಳಾಗಿವೆ. ಕೆಲವು ಕಡೆಗೆ ಪಾಲಿಕೆಯೇ ಶೌಚಗೃಹ ತೆರೆದಿದ್ದರೆ, ಉಳಿದದ್ದನ್ನು ಕೆಲವು ಸಮಾಜಮುಖೀ ಸಂಘಟನೆ-ಸಂಸ್ಥೆಗಳು ಸಾರ್ವಜನಿಕ ಉಪ ಯೋಗಕ್ಕೆ ನೀಡಿವೆ. ಇದು ಪೋರ್ಟೆಬಲ್‌ ಟಾಯ್ಲೆಟ್‌ ಆಗಿದ್ದು, ಸ್ಥಳಾಂತರವೂ ಸುಲಭ. ಶೌಚಾಲಯ ಬಳಕೆಗೆ ಮೊದಲು ನಾಣ್ಯಗಳನ್ನು ಬಳಸಬೇಕಿದೆ. ತಾಂತ್ರಿಕ ವ್ಯವಸ್ಥೆಗಳು ಜಿಪಿಎಸ್‌ ಸಂಪರ್ಕ ಹೊಂದಿದೆ. ತಾಂತ್ರಿಕ ವ್ಯವಸ್ಥೆಗಳು ಕೈಕೊಟ್ಟರೆ ಕೂಡಲೇ ಕಂಪೆನಿಯ ಕೇಂದ್ರ ಕಚೇರಿಗೆ ಅಲರ್ಟ್‌ ಹೋಗು ತ್ತದೆ. ಶೀಘ್ರ ಎಂಜಿನಿಯರ್‌ಗಳು ಬಂದು ರಿಪೇರಿ ಕಾರ್ಯ ಕೈಗೊಳ್ಳುತ್ತಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ನಗರಕ್ಕೆ ಟಾಯ್ಲೆಟ್‌ಗಳದ್ದೇ ಸಮಸ್ಯೆ:

Advertisement

ನಗರದಲ್ಲಿ “ಶೌಚಾಲಯ’ ಎಂಬುದು ಬಹುದೊಡ್ಡ ಸಮಸ್ಯೆಯ ವಿಚಾರ. ಇಲ್ಲಿ ಬೇಕಾದಲ್ಲಿ ಶೌಚಾಲಯವಿಲ್ಲ; ಇರುವಲ್ಲಿ ಅದು ಸರಿಯಿಲ್ಲ ಅನ್ನುವ ಪರಿಸ್ಥಿತಿ. ಹೀಗಾಗಿ ಜನರಿಗೆ ಒಂದಲ್ಲ ಒಂದು ಸಮಸ್ಯೆ. ನಂತೂರು, ಮಾರ್ಕೆಟ್‌ ರಸ್ತೆ, ಕೆಪಿಟಿ ಜಂಕ್ಷನ್‌, ಕೊಟ್ಟಾರ ಚೌಕಿ, ಕದ್ರಿ ಮಲ್ಲಿಕಟ್ಟೆ, ಹಂಪನಕಟ್ಟೆ, ಅತ್ತಾವರ, ಕಂಕನಾಡಿ ಹೀಗೆ ಹಲವು ಜಾಗದಲ್ಲಿ ಶೌಚಾಲಯ ಬಹುಮುಖ್ಯ. ಆದರೆ ಇಲ್ಲಿ ಎಲ್ಲೂ ಕೂಡ ಸುಸಜ್ಜಿತ ರೀತಿಯ ಶೌಚಾಲಯ ಇಲ್ಲವೇ ಇಲ್ಲ. ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ ಒಂದೆರಡು ಶೌಚಾಲಯಗಳು ಇವೆಯಾದರೂ ಇದರ ನಿರ್ವಹಣೆ ಕೈ ತಪ್ಪಿಹೋಗಿದೆ.

ಇ-ಟಾಯ್ಲೆಟ್‌ ಎಂಬ ಅಪರಿಚಿತ ಶೌಚಾಲಯ ! :

ಇ-ಟಾಯ್ಲೆಟ್‌ ಎಂಬ ಪರಿಕಲ್ಪನೆ ನಗರಕ್ಕೆ ಹೊಸದಾಗಿ ಪರಿಚಿತವಾದ್ದರಿಂದ ಕೆಲವರು ಇದರ ಬಳಕೆಗೆ ವಿಶೇಷ ಆದ್ಯತೆ ನೀಡಿದಂತಿಲ್ಲ. ಯಾಕೆಂದರೆ ಸ್ಥಳೀಯವಾಗಿ ಲಭ್ಯವಿರುವ ಶೌಚಾಲಯವನ್ನು ಬಳಕೆ ಮಾಡಿದ ಮಂದಿ ಇ-ಟಾಯ್ಲೆಟ್‌ ಎಂಬ ಪರಿಕಲ್ಪನೆಗೆ ಒಗ್ಗಿಕೊಂಡಿಲ್ಲ. “ಮಂಗಳೂರಿಗೆ ಇದು ಸೂಕ್ತ ಅಲ್ಲ’ ಎಂದೇ ಹೇಳುವವರು ಅಧಿಕ. ಜನನಿಬಿಡ ಲಾಲ್‌ಬಾಗ್‌ ಬಸ್‌ ನಿಲ್ದಾಣ ಸಮೀಪದಲ್ಲಿಯೇ ಇ-ಟಾಯ್ಲೆಟ್‌ ಇರುವುದರಿಂದ ಅದರೊಳಗೆ ಹೋಗಲು ಕೆಲವರು ಮುಜುಗರಪಡುತ್ತಿದ್ದಾರೆ. ಹೀಗಾಗಿ ಹೆಚ್ಚಿನವರಿಗೆ ಇ-ಟಾಯ್ಲೆಟ್‌ ಎಂಬುದು ಅಪರಿಚಿತ ಶೌಚಾಲಯವಾಗಿದೆ. ಈ ಮಧ್ಯೆ ಕದ್ರಿ ಪಾರ್ಕ್‌ ಸಹಿತ ಕೆಲವು ಇ-ಟಾಯ್ಲೆಟ್‌ನಲ್ಲಿ  ನೀರಿನ ಕೊರತೆಯೂ ಎದುರಾಗಿತ್ತು.

ಚರ್ಚಿಸಿ ತೀರ್ಮಾನ:

ನಗರದ ಕೆಲವು ಇ-ಟಾಯ್ಲೆಟ್‌ಗಳು ಸದ್ಯ ಬಳಕೆಯಾಗದಿರುವ ಹಾಗೂ ನಿರ್ವಹಣೆ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಜತೆಗೆ ಜನರು ಕೂಡ ಇದನ್ನು ಬಳಸಲು ಹಿಂಜರಿಯುತ್ತಿರುವ ಬಗ್ಗೆಯೂ ಮಾಹಿತಿಯಿದೆ. ಹೀಗಾಗಿ ಈ ಕುರಿತಂತೆ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದೇನು ಮಾಡಬಹುದು ಎಂಬ ಬಗ್ಗೆ ತೀರ್ಮಾನಿಸಲಾಗುವುದು. –ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು ಪಾಲಿಕೆ

 

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next