Advertisement

ಮಕ್ಕಳ ಕೈ ಬೀಸಿ ಕರೆಯುವ ಗ್ರಂಥಾಲಯ

12:31 PM Nov 25, 2019 | Suhan S |

ಗದಗ: ಇಂದಿನ ಮೊಬೈಲ್‌ ಯುಗದಲ್ಲಿ ಪುಸ್ತಕಗಳೆಂದರೆ ಮಕ್ಕಳಿಗೆ ಅಲರ್ಜಿ. ಸದಾ ಮೊಬೈಲ್‌ ಹಾಗೂ ಆಟದಲ್ಲೇ ಮುಳುಗಿರುತ್ತಾರೆ ಎಂಬುದು ಜನಜನಿತ. ಆಟವನ್ನೇ ಮೂಲ ಮಂತ್ರವಾಗಿಸಿಕೊಂಡಿರುವ ಇಲ್ಲಿನ ಮಕ್ಕಳ ಗ್ರಂಥಾಲಯವೊಂದು ಆಟದೊಂದಿಗೆ ಪಾಠ ಎಂಬ ಸಂದೇಶ ಸಾರುತ್ತಿದೆ.

Advertisement

ಹಲವು ಕಾಮಿಕ್‌ ಪುಸ್ತಕಗಳು, ವಿವಿಧ ಗೊಂಬೆ ಹಾಗೂ ಆಟಿಕೆಗಳ ಮೂಲಕ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ. ನಗರದ ವಕೀಲ ಚಾಳದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರದ ಕೇಂದ್ರ ಗ್ರಂಥಾಲಯದ ಸಮುದಾಯ ಮಕ್ಕಳ ಗ್ರಂಥಾಲ ಯ ಕೇವಲ ವೃತ್ತ ಪತ್ರಿಕೆ, ಪುಸ್ತಕಗಳಿಗೆ ಸೀಮಿತಗೊಳ್ಳದೇ, ಮಕ್ಕಳಲ್ಲಿ ಓದು ಹವ್ಯಾಸ ಹೆಚ್ಚಿಸುವ ವೈವಿದ್ಯಮಯ ಸೌಲಭ್ಯ ಹೊಂದಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ನಿತ್ಯ 30-50 ಮಕ್ಕಳು ಮಕ್ಕಳು ಭೇಟಿ ನೀಡಿದರೆ, ಬೇಸಿಗೆ ರಜೆ ಹಾಗೂ ಶಾಲೆಗಳ ರಜಾ ದಿನಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಸೇರುವುದರಿಂದ ಚಿಣ್ಣರ ಚಿಲಿಪಿಲಿ ಹೆಚ್ಚಿರುತ್ತದೆ.

ಏನಿದು ಮಕ್ಕಳ ಗ್ರಂಥಾಲಯ?: ಮಕ್ಕಳಲ್ಲಿ ಓದುವ ಆಸಕ್ತಿ ಕುಂದುತ್ತಿರುವುದನ್ನು ಮನಗಂಡ ಸಾರ್ವಜನಿಕ ಗ್ರಂಥಾಲಯ ಇಲಾಖೆ 2006ರಲ್ಲಿ ಪ್ರಾಯೋಗಿಕವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ತಲಾ ಒಂದರಂತೆ ಮಕ್ಕಳ ಗ್ರಂಥಾಲಯ ಆರಂಭಿಸಿತ್ತು. ಕಂಪ್ಯೂಟರ್‌ ಶಿಕ್ಷಣ, ವಿವಿಧ ಆಟಿಕೆಗಳು, ಫಜರ್ (ಜೋಡಿಸಬಹುದಾದ ಆಟಿಕೆ) ಗಳನ್ನು ಒದಗಿಸುವ ಮೂಲಕ ಮಕ್ಕಳಲ್ಲಿ ವಿನೋದದೊಂದಿಗೆ ವಿಜ್ಞಾನದ ಆಸಕ್ತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ ಮಕ್ಕಳ ಗ್ರಂಥಾಲಯಕ್ಕೆ ಸಾರ್ವಜನಿಕರ ಸಹಭಾಗಿತ್ವದ ಇರಬೇಕೆಂದು ಈ ಗ್ರಂಥಾಲಯ ಸ್ಥಾಪನೆಗೆ ಕಟ್ಟಡವನ್ನು ಉಚಿತವಾಗಿ ಪಡೆಯುವುದು ಕಡ್ಡಾಯ ಎಂಬ ಷರತ್ತು ವಿಧಿಸಿತ್ತು.

ಅದರಂತೆ 2006ರಲ್ಲಿ ಇಲ್ಲಿನ ಬೆಟಗೇರಿಯ ಸಾರ್ವಜನಿಕ ಗ್ರಂಥಾಲಯದ ಮೂಲೆಯೊಂದರಲ್ಲಿ ಮಕ್ಕಳ ಗ್ರಂಥಾಲಯದ ಬಾಗಿಲು ತೆರೆದಿತ್ತು. ಆದರೆ, ಅಲ್ಲಿ ಜಾಗದ ಸಮಸ್ಯೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹುಡ್ಕೊ ಕಾಲೋನಿ ಕೇಂಬ್ರಿಜ್‌ ಶಾಲೆಯ ಕೋಣೆಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಿತ್ತು. ಆನಂತರ 1-4-2009ರಲ್ಲಿ ಇಲ್ಲಿನ ವಕೀಲ ಚಾಳದಲ್ಲಿರುವ ಮರಾಠಿ ವಾಙ್ಮಯ ಪ್ರೇಮಿ ಮಂಡಳಿ ಕಟ್ಟಡ ಒದಗಿಸಿದೆ.  ಹೀಗಾಗಿ ಕಳೆದ ಒಂದು ದಶಕಗಳಿಂದ ಮಕ್ಕಳ ಗ್ರಂಥಾಲಯ ವಕೀಲ ಚಾಳದಲ್ಲಿ ಮುನ್ನಡೆಯುತ್ತಿದೆ.

ಮಕ್ಕಳ ಗ್ರಂಥಾಲಯದಲ್ಲಿ ಏನೇನಿದೆ?: ಮಕ್ಕಳ ಗ್ರಂಥಾಲಯದಲ್ಲಿ ಮಕ್ಕಳ ಮನ ಗೆಲ್ಲುವಂತ ಕಾಮಿಕ್ಸ್‌, ಸಣ್ಣ ಕಥೆಗಳು, ಕವನಗಳು, ಅಂಕಿ, ಅಕ್ಷರಗಳುಳ್ಳ ಫೈಬರ್‌ ಕಾರ್ಡ್ಸ್‌ ಸೇರಿ 1469 ಕನ್ನಡ, 1268 ಆಂಗ್ಲ ಸೇರಿದಂತೆ 2737 ಪುಸ್ತಕಗಳಿವೆ. ಸೌರಮಂಡಲ ಚಾರ್ಟ್ಸ್, ಕರಡಿ, ಹುಲಿ, ಜಿಂಕೆ. ಒಂಟಿ, ಜಿರಾಫೆ, ನಾಯಿ, ಮಂಗ, ಬಾತು ಕೋಳಿ, ಆನೆ, ಕಾಂಗ್ರೂ, ಡೋರೋಮೋನ್‌, ಚೋಟಾ ಭೀಮಾ, ಕೃಷ್ಣ, ಹುಮಾನ, ಸ್ಪೆಡರ್‌ ಮ್ಯಾನ್‌ ಗೊಂಬೆಗಳು, ತಳ್ಳುವ ಜೆಸಿಬಿ, ಅಗ್ನಿ ಶಾಮಕ, ರ್ಯಾಲಿ ಕಾರ್‌ ಹಾಗೂ ಒಳಾಂಗಣದಲ್ಲೇ ಆಡಬಹುದಾದ ಸ್ಕೇಟಿಂಗ್‌ ಸ್ಕೂಟರ್‌, ಆಟಿಕೆ ಕಾರುಗಳಿದ್ದು, ಖಾಸಗಿ ಶಾಲೆಗಳ ಶಿಶು ವಿಹಾರ ಅಥವಾ ಪ್ಲೇ ಹೋಂಗಳಗಿಂತ ಕಡಿಮೆ ಇಲ್ಲ. ಜೊತೆಗೆ ಬೇಸಿಕ್‌ ಕಂಪ್ಯೂಟರ್‌ ಹೇಳಿಕೊಡಲಾಗುತ್ತದೆ. ಕಿಯೋಕ್ಸ್‌ ಯಂತ್ರದಲ್ಲಿ ಮಕ್ಕಳಿಗೆ ಧ್ವನಿ ಮುದ್ರಣ ಸಹಿತ ಗೊಂಬೆ, ಬಣ್ಣ ಹಾಗೂ ಕಾರ್ಟೊನ್ಸ್, ಗೇಮ್ಸ್‌ ಆಡಲು ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಪ್ರತಿನಿತ್ಯ ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.

Advertisement

ಸ್ವಚ್ಛ ಸುಂದರವಾಗಿರುವ ಈ ಗ್ರಂಥಾಲಯದಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಲಾಗಿರುತ್ತದೆ. ಮಕ್ಕಳು ತಮಗಿಷ್ಟವಾದ ಗೊಂಬೆ, ಆಟಿಕೆ ತೆಗೆದುಕೊಳ್ಳಬಹುದಾಗಿದೆ. ಕೆಲ 10 ವರ್ಷದೊಳಗಿನ ಮಕ್ಕಳು ಹುಲಿಗೊಂಬೆ ಮೇಲೆ ಸವಾರಿ ಮಾಡಿ, ಮುಗುಳು ನಗೆ ಚೆಲ್ಲಿದರೆ, 13-16 ವರ್ಷದೊಳಗಿನ ಮಕ್ಕಳು, ಲೇಔಟ್‌ ಹಾಕಿದ ಬೋರ್ಡ್ ಗಳಲ್ಲಿ ಮನೆ, ಸೇತುವೆ ಹಾಗೂ ವಿಜ್ಞಾನದ ಪ್ರಯೋಗಗಳನ್ನು ಮಾಡಿ ಖುಷಿ ಪಡುತ್ತಾರೆ. ಇನ್ನೂ, ಕೆಲವರು ತಮಗಿಷ್ಟವಾದ ಪುಸ್ತಕಗಳ ಓದಿನಲ್ಲಿ ಮಗ್ನರಾಗುತ್ತಾರೆ.

ಹೀಗೆ ಇಲ್ಲಿಗೆ ಬರುವ ಮಕ್ಕಳು ಕೆಲ ಗಂಟೆಗಳ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾರೆ ಎನ್ನುತ್ತಾರೆ ಗ್ರಂಥಾಲಯದ ಸಿಬ್ಬಂದಿ. ಅಲ್ಲದೇ, ಬಡಾವಣೆಯ ಮಕ್ಕಳೊಂದಿಗೆ ಸಮೀಪದಲ್ಲಿರುವ ಎರಡು ಸರಕಾರಿ ಶಾಲಾ ಮಕ್ಕಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೇ, ಸಾವಿರಾರು ರೂ. ಮೌಲ್ಯದ ಆಟಿಕೆಗಳು ಹಾಗೂ ಪುಸ್ತಕಗಳನ್ನು ಒದಗಿಸಿರುವ ಇಲಾಖೆ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಕ್ಕಳು ಆಸಕ್ತಿಗನುಗುಣವಾಗಿ ಅವರಿಗೆ ಕಲಿಕೆಯಲ್ಲೂ ನೆರವಾಗುತ್ತವೆ. ಕೆಲ ಮಕ್ಕಳು ಕಂಪ್ಯೂಟರ್‌, ವಿಜ್ಞಾನ ಆಟಿಕೆಗಳಲ್ಲಿ ಮುಳುಗಿದರೆ, ಇನ್ನೂ ಕೆಲವರು ಪತ್ರಿಕೆ ಹಾಗೂ ಪುಸ್ತಕಗಳನ್ನು ಕಣ್ಣಾಡಿಸುತ್ತಾರೆ. ಗ್ರಂಥಾಲಯದ ನಾಲ್ಕು ಕಂಪ್ಯೂಟರ್‌ ಗಳು ಇತ್ತೀಚೆಗೆ ಕೆಟ್ಟಿದ್ದು, ದುರಸ್ತಿಗಾಗಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ.  ಎಸ್‌.ಎಸ್‌.ಸಂಕಣ್ಣವರ, ಗ್ರಂಥಾಲಯ ಸಿಬ್ಬಂದಿ.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next