Advertisement
ನಾಗಲಾಪುರದ ಶ್ರೀಮದ್ ಮಠವು ಪ್ರತಿ ಕಾರ್ತಿಕ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ, ಲಿಂಗೈಕ್ಯ ಶ್ರೀ ಗುರುಲಿಂದರಾಜಚಾರ್ಯ ಸ್ವಾಮಿಗಳ 22ನೇ ವರ್ಷದ ಸಂಸ್ಕರಣೋತ್ಸವ ಹಾಗೂ ಮಹಾ ಮೃತ್ಯುಂಜಯ ಹೋಮ ಧರ್ಮಜಾಗೃತಿ ಕಾರ್ಯದಲ್ಲಿ ಯಾಂತ್ರಿಕ ಆನೆಗಳ ಧಾರ್ಮಿಕ ಮೆರವಣಿಗೆ ನಡೆಸುವಂತ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
Related Articles
Advertisement
ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಕ್ಯೂಪಾ ಮತ್ತು ಪೀಪಲ್ ಫಾರ್ ದಿ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಪೇಟಾ ಸಂಸ್ಥೆಗಳ ಪ್ರತಿನಿಧಿಗಳು ಯಾಂತ್ರಿಕ ಆನೆಗಳ ಮೂಲಕ ಧಾರ್ಮಿಕ ಮೆರವಣಿಗೆ ನಡೆಸುವ ಕಾರ್ಯಕ್ಕೆ ಅಗತ್ಯ ವಿರುವ ನೆರವನ್ನು ನೀಡುತ್ತಿದ್ದಾರೆ. ಜೊತೆಗೆ ಯಾಂತ್ರಿಕ ಆನೆಯ ಜವಾಬ್ದಾರಿಯನ್ನು ಹೊತ್ತು ಕೊಂಡು ಮೆರವಣಿಗೆಯಲ್ಲಿಯೂ ಭಾಗವಹಿಸುತ್ತಿದ್ದಾರೆ.
ಎಂತ ಆನೆಗಳು?: ಇತ್ತೀಚಿನ ದಿನಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಸ್ವಾಗತಕಾರರಾಗಿ ನೈಜ ಆನೆಗಳ ಆಕಾರ ಮತ್ತು ಶಬ್ದ ಮಾಡುವ ಯಾಂತ್ರಿಕ ಆನೆಗಳನ್ನು ಬಳಸುವುದು ಹೊಸ ಫ್ಯಾಷನ್ ಎಂಬಂತಾಗುತ್ತಿದೆ. ಆದರೆ, ಸಂಪ್ರದಾಯಬದ್ಧವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಯಾಂತ್ರಿಕ ಆನೆ ಬಳಸಿದ್ದು ತೀರಾ ಕಡಿಮೆ. ಕೋಲಾರ ಜಿಲ್ಲೆಯಲ್ಲಂತು ಇಂತದ್ದೊಂದು ಮೊದಲ ಪ್ರಯತ್ನಕ್ಕೆ ಶ್ರೀಮದ್ ನಾಗಲಾಪುರ ಮಠದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿ ಮುಂದಾಗಿರುವುದು ಸಾರ್ವಜನಿಕ ವಲಯದ ಆಶ್ಚರ್ಯ ಮತ್ತು ಆಕರ್ಷಣೆಯಾಗುತ್ತಿದೆ. ಸೋಮವಾರ ನಾಗಲಾಪುರ ಮಠದಲ್ಲಿ ನಡೆಯುವ ಮೆರವಣಿಗೆಯಲ್ಲಿ 3 ಅಡಿ ಎತ್ತರದ 800 ಕೆ.ಜಿ ತೂಕದ ಮತ್ತು ಜೀವ ಗಾತ್ರದ ಯಾಂತ್ರಿಕ ಆನೆಗಳು ಭಾಗವಹಿಸಲಿವೆ ಎಂದು ಪೇಟಾ ಸಂಸ್ಥೆಯು ಅಧಿಕೃತವಾಗಿ ಪ್ರಕಟಣೆ ನೀಡಿದೆ. ಈ ವಿನೂತನ ಧಾರ್ಮಿಕ ಕಾರ್ಯಕ್ಕೆ ಸಾರ್ವಜನಿಕರನ್ನು ಸ್ವಾಗತಿಸಿದೆ.
ಧಾರ್ಮಿಕ ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಆನೆಗಳನ್ನು ಬಳಸುವ ಸಂಪ್ರದಾಯ ಇದೆಯಾದರೂ, ಇತ್ತೀಚಿಗೆ ಸರ್ಕಾರದ ಕಾಯ್ದೆ ಕಟ್ಟಳೆಗಳಿಂದ ಆನೆಗಳನ್ನು ಮಠದಲ್ಲಿ ಸಾಕುವುದು, ಬೇರೆಡೆಯಿಂದ ಸಾಗಾಟ ಮಾಡಿ ತರಿಸುವುದು ಕಷ್ಟ. ಯಾಂತ್ರಿಕ ಆನೆಗಳ ಧಾರ್ಮಿಕ ಮೆರವಣಿಗೆಯನ್ನು ತಾವು ಯಡೆಯೂರು ಮಠದಲ್ಲಿ ನೋಡಿ, ಇಂತದ್ದೊಂದು ಸಂಪ್ರದಾಯಕ್ಕೆ ತಮ್ಮ ಮಠದಲ್ಲಿ ನಾಂದಿಯಾಡಬೇಕು ಎಂಬ ಕಾರಣದಿಂದ ಯಾಂತ್ರಿಕ ಆನೆಗಳ ಮೆರವಣಿಗೆ ನಡೆಸಲಾಗುತ್ತಿದೆ. ಈ ಮೂಲಕ ವನ್ಯ ಜೀವಿಗಳ ಸಂರಕ್ಷಣೆ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ●ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀಮದ್ ನಾಗಲಾಪುರ ವೀರ ಸಿಂಹಾಸನ ಮಠ, ಕೋಲಾರ ತಾಲೂಕು
ಯಾಂತ್ರಿಕ ಆನೆಗಳನ್ನು ಸಂಪ್ರದಾಯಿಕ ಸಮಾರಂಭಗಳಲ್ಲಿ ಬಳಸುವ ಮೂಲಕ ನಿಜ ಆನೆಗಳು ಕಾಡುಗಳಲ್ಲಿ ತಮ್ಮ ಕುಟುಂಬದೊಂದಿಗೆ ಕಾಡುಗಳಲ್ಲಿ ಸ್ವತಂತ್ರವಾಗಿ ವಾಸ ಮಾಡಬಹುದು. ಅವುಗಳ ನಿರಂತರ ಬಂಧನಕ್ಕೊಳಗಾಗುವ ನೋವು, ಆಯುಧಗಳ ಯಾತನೆ ಮತ್ತು ಪ್ರಕೃತಿ, ತನಗಿಷ್ಟದ ಎಲ್ಲದರಿಂದ ವಂಚಿತವಾಗಿ ಉಳಿಯುವುದರಿಂದ ಆನೆಗಳಿಗೆ ಮುಕ್ತಿ ನೀಡಬಹುದಾಗಿದೆ. -ಅನೂಷಾ ಯಾದವ್, ಪೇಟಾ ಪರವಾಗಿ.
■ ಕೆ.ಎಸ್.ಗಣೇಶ್